ಹಳೆ ವೈಷಮ್ಯ: ಯುವಕನ ಕೊಲೆ

ಕಾಳಗಿ,ಫೆ.3-ಹರಿತವಾದ ಆಯುಧದಿಂದ ಹೊಡೆದು ಯುವಕನೊಬ್ಬನನ್ನು ಕೊಲೆ ಮಾಡಿರುವ ಘಟನೆ ಕಾಳಗಿ ಪೊಲೀಸ್ ಠಾಣೆ ವ್ಯಾಪ್ತಿಯ ಸಾಲಹಳ್ಳಿಯಲ್ಲಿ ನಡೆದಿದೆ.
ಕಾಳಗಿ ತಾಲ್ಲೂಕಿನ ಕೋಡ್ಲಿ ಗ್ರಾಮದ ಶಂಕರ ಮಾಣಿಕಪ್ಪ ನರನಾಳ (32) ಕೊಲೆಯಾದ ಯುವಕ.
ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆಯಾಗಿರಬಹುದು ಎಂದು ಶಂಕಿಸಲಾಗಿದೆ. ಶಂಕರ ಜೊತೆಗೆ ಗ್ರಾಮದ ಜಗಪ್ಪ ಮಾಣಿಕ ಹೊಸಳ್ಳಿ ಒಂದು ವರ್ಷದ ಹಿಂದೆ ಜಗಳವಾಡಿದ್ದ ಎನ್ನಲಾಗಿದ್ದು, ಇದೇ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.
ಫೆ.1 ರಂದು ರಾತ್ರಿ 8.30ರ ಸುಮಾರಿಗೆ ಜಗಪ್ಪ ಹೊಸಳ್ಳಿ ಶಂಕರ ಮನೆಗೆ ಬಂದು ಆತನನ್ನು ಬೈಕ್ ಮೇಲೆ ಕರೆದುಕೊಂಡು ಹೋಗಿದ್ದ ಎನ್ನಲಾಗಿದೆ. ಫೆ.2 ರಂದು ಸಾಲಹಳ್ಳಿ ಗ್ರಾಮದಲ್ಲಿ ಶಂಕರ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.
ಸುದ್ದಿ ತಿಳಿದು ಎಸ್‍ಪಿ ಅಡ್ಡೂರು ಶ್ರೀನಿವಾಸಲು, ಹೆಚ್ಚುವರಿ ಎಸ್‍ಪಿ ಮಹೇಶ್ ಮೇಘಣ್ಣನವರ್, ಶಹಾಬಾದ ಡಿಎಸ್‍ಪಿ ಶಂಕರಗೌಡ ಪಾಟೀಲ, ಕಾಳಗಿ ಸಿಪಿಐ ಜಗದೇವಪ್ಪ ಪಾಳಾ, ಪಿಎಸ್‍ಐ ತಿಮ್ಮಯ್ಯ ಬಿ.ಕೆ., ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಬಂಧ ಮೃತನ ತಂದೆ ಮಾಣಿಕಪ್ಪ ನರನಾಳ ಅವರು ಕಾಳಗಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.