Home ಜಿಲ್ಲೆ ಜಮಖಂಡಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ೧೩೫ನೇ ಜಯಂತಿ ಆಚರಣೆ

ಜಮಖಂಡಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ೧೩೫ನೇ ಜಯಂತಿ ಆಚರಣೆ

ಸಂಜೆ ವಾಣಿ ವಾರ್ತೆ
ಜಮಖಂಡಿ:ಏ.೧೪: ನಗರದ ತಾಲೂಕಾಡಳಿತ ಸೌಧದ ತಹಶಿಲ್ದಾರ ಸಭಾಭವನದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೫ನೇ ಜಯಂತಿಯನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.
ತಾಲೂಕಾಡಳಿತ, ತಾಲೂಕು ಪಂಚಾಯತ್, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಶ್ಯಾಮರಾವ ಘಾಟಗೆ ಮಾತನಾಡಿ, ಡಾ. ಅಂಬೇಡ್ಕರ್ ಅವರ ಜೀವನ ಮತ್ತು ಹೋರಾಟವನ್ನು ಸ್ಮರಿಸಿದರು. ಜಾತಿ ವ್ಯವಸ್ಥೆಯ ವಿರುದ್ಧ ಅವರು ನಡೆಸಿದ ಹೋರಾಟ ಮತ್ತು ಸಮಾನತೆಯ ಸಂದೇಶವನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. “ಶಿಕ್ಷಣ, ಸಂಘಟನೆ ಮತ್ತು ಹೋರಾಟ” ಎಂಬ ಅವರ ತತ್ವಗಳು ಇಂದಿಗೂ ಯುವಕರಿಗೆ ದಾರಿದೀಪವಾಗಿವೆ ಎಂದು ಹೇಳಿದರು.
ದಲಿತ ಮುಖಂಡ ಯಮನಪ್ಪ ಗುಣದಾಳ ಮಾತನಾಡಿ, ಅಂಬೇಡ್ಕರ್ ಅವರು ಕೇವಲ ದಲಿತರಿಗಾಗಿ ಮಾತ್ರವಲ್ಲ, ಇಡೀ ದೇಶದ ಜನರ ಹಕ್ಕುಗಳಿಗಾಗಿ ಹೋರಾಟ ನಡೆಸಿದ ಮಹಾನ್ ನಾಯಕರು ಎಂದರು. ದೇಶದ ಸಂವಿಧಾನವನ್ನು ರಚಿಸುವಲ್ಲಿ ಅವರು ಮಾಡಿದ ತ್ಯಾಗ ಅಪಾರವಾಗಿದೆ. ಸಂವಿಧಾನದ ಅರಿವು ವಿದ್ಯಾರ್ಥಿಗಳಲ್ಲಿ ಬಾಲ್ಯದಿಂದಲೇ ಮೂಡಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ್ ಮಾತನಾಡಿ, ಡಾ. ಅಂಬೇಡ್ಕರ್ ಅವರು ಕೇವಲ ಭಾರತ ರತ್ನವಲ್ಲ, ವಿಶ್ವ ರತ್ನ ಎಂದು ಹೇಳಿದರು. ಅವರ ತತ್ವ-ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ದೇಶ ಅಭಿವೃದ್ಧಿ ದಾರಿಗೆ ಸಾಗುತ್ತದೆ ಎಂದು ತಿಳಿಸಿದರು. ಸಂವಿಧಾನದ ಅರಿವು ಪ್ರತಿಯೊಬ್ಬರಿಗೂ ಅಗತ್ಯ ಎಂದು ಅವರು ಒತ್ತಿಹೇಳಿದರು.
ಕಾರ್ಯಕ್ರಮದ ನಂತರ ನಗರದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ವಿವಿಧ ಇಲಾಖೆ ಅಧಿಕಾರಿಗಳು, ದಲಿತ ಮುಖಂಡರು ಹಾಗೂ ಗಣ್ಯರು ಪುಷ್ಪನಮನ ಸಲ್ಲಿಸಿದರು.