Home ಜಿಲ್ಲೆ ಡಾ. ಅಂಬೇಡ್ಕರ್ ಅವರ ೧೩೫ನೇ ಜಯಂತಿ ಆಚರಣೆಗೆ

ಡಾ. ಅಂಬೇಡ್ಕರ್ ಅವರ ೧೩೫ನೇ ಜಯಂತಿ ಆಚರಣೆಗೆ


ಗದಗ,ಏ.೧೫: ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗದಗದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೫ನೇ ಜಯಂತಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು.


ಕಾರ್ಯಕ್ರಮದ ಅಂಗವಾಗಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಡಾ. ಸುರೇಶ್ ವಿ. ನಾಡಗೌಡರ ಅವರು, ಡಾ. ಅಂಬೇಡ್ಕರ್ ಅವರು ಭಾರತದ ಸಂವಿಧಾನದ ಮೂಲಕ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಮಾನವ ಹಕ್ಕುಗಳ ಮೌಲ್ಯಗಳನ್ನು ಸ್ಥಾಪಿಸಿದ ಮಹಾನ್ ದಾರ್ಶನಿಕರು ಎಂದು ಹೇಳಿದರು. ಸಮಾಜದ ಹಿಂದುಳಿದ ವರ್ಗಗಳ ಉನ್ನತಿಗಾಗಿ ಅವರು ಮಾಡಿದ ಹೋರಾಟವು ಇಂದಿಗೂ ಪ್ರಸ್ತುತವಾಗಿದ್ದು, “ಶಿಕ್ಷಣ ಸರ್ವರಿಗೂ ? ಸಮ ಬಾಳು, ಸಮ ಪಾಲು” ಎಂಬ ಅವರ ಆಶಯವು ಸಮಾನತೆಯ ಸಮಾಜ ನಿರ್ಮಾಣಕ್ಕೆ ಮಾರ್ಗದರ್ಶಕವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಸಂವಿಧಾನಾತ್ಮಕ ಮೌಲ್ಯಗಳನ್ನು ಅಳವಡಿಸಿಕೊಂಡು ನ್ಯಾಯ, ಸಮಾನತೆ ಮತ್ತು ಬಾಂಧವ್ಯವನ್ನು ಜೀವನದಲ್ಲಿ ಅನುಸರಿಸುವುದು ಪ್ರತಿಯೊಬ್ಬರ ಕರ್ತವ್ಯವೆಂದು ಅವರು ಹೇಳಿದರು.


ಕಾರ್ಯಕ್ರಮದಲ್ಲಿ ಮಾತನಾಡಿದ ಅಧೀಕ್ಷಕರಾದ ಶಶಿಭೂಷಣ ದೇವೂರ ಅವರು, ಡಾ. ಅಂಬೇಡ್ಕರ್ ಅವರ ಜೀವನ ಹಾಗೂ ಸಾಧನೆಗಳು ಶ್ರಮ, ದೃಢನಿಶ್ಚಯ ಮತ್ತು ಶಿಕ್ಷಣದ ಮಹತ್ವವನ್ನು ಪ್ರತಿಪಾದಿಸುತ್ತವೆ ಎಂದು ತಿಳಿಸಿದರು. ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆಗಳನ್ನು ಸಮಾಜದಲ್ಲಿ ಅಳವಡಿಸುವುದು ಪ್ರತಿಯೊಬ್ಬ ನಾಗರಿಕನ ಹೊಣೆಗಾರಿಕೆಯಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜಕರಾದ ಪ್ರಕಾಶ್ ಮಾಚೇನಹಳ್ಳಿ, ಡಾ. ಅಂಬೇಡ್ಕರ್ ಅವರ ಚಿಂತನೆಗಳು ಯುವಪೀಳಿಗೆಗೆ ಸಾಮಾಜಿಕ ಜವಾಬ್ದಾರಿತ್ವ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ಅರಿವು ಮೂಡಿಸುತ್ತವೆ ಎಂದು ಹೇಳಿದರು. ಉಪನ್ಯಾಸಕರಾದ ಡಾ. ಸಂತೋಷಕುಮಾರ, ಚಂದ್ರಪ್ಪ ಬಾರಂಗಿ ಹಾಗೂ ಪ್ರವೀಣ್ ಅಂಕಲಕೋಟಿ ಅವರು ಡಾ. ಅಂಬೇಡ್ಕರ್ ಅವರ ಸಾಮಾಜಿಕ ಸುಧಾರಣಾ ಚಳುವಳಿ, ಶಿಕ್ಷಣದ ಮಹತ್ವ ಹಾಗೂ ಸಮಾನತೆಯ ಪರಿಕಲ್ಪನೆಗಳ ಕುರಿತು ತಮ್ಮ ವಿಚಾರಗಳನ್ನು ಹಂಚಿಕೊAಡರು.


ಕಾರ್ಯಕ್ರಮದಲ್ಲಿ, ಮೃತ್ಯುಂಜಯ ಮೆಣಸಿನಕಾಯಿ, ವಿಶೇಷಾಧಿಕಾರಿಗಳಾದ ಶ್ರೀ ಉಮೇಶ್ ಬಾರಕೇರ, ಎಂ.ಬಿ. ಚನ್ನಪ್ಪಗೌಡರ, ಡಾ. ಗಿರೀಶ್ ದೀಕ್ಷಿತ್, ಡಾ. ಶ್ರೀಧರ ಹಾದಿಮನಿ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಸುರೇಶ್ ಲಮಾಣಿ ಸ್ವಾಗತ ಕೋರಿದರು. ವಿದ್ಯಾರ್ಥಿನಿಯಾದ ಕು. ಪೂರ್ಣಿಮಾ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಡಾ. ಅಂಬೇಡ್ಕರ್ ಅವರ ಆದರ್ಶಗಳಿಗೆ ಗೌರವ ನಮನ ಸಲ್ಲಿಸಿದರು.