Home ಮುಖಪುಟ ಸುದ್ದಿ ಪರಿಶಿಷ್ಟ ಸಮುದಾಯದ ಬೆನ್ನಿಗೆ ಚೂರಿ ಹಾಕಿದ ಕಾಂಗ್ರೆಸ್

ಪರಿಶಿಷ್ಟ ಸಮುದಾಯದ ಬೆನ್ನಿಗೆ ಚೂರಿ ಹಾಕಿದ ಕಾಂಗ್ರೆಸ್

ಬಿವೈವಿ ಟೀಕೆ

ಬೆಂಗಳೂರು, ಏ. ೨೫- ರಾಜ್ಯದ ಪರಿಶಿಷ್ಟ ಜಾತಿಯವರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಐತಿಹಾಸಿಕ ಮೋಸ ಮತ್ತು ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಟೀಕಿಸಿದ್ದಾರೆ.


ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಫೋಸ್ಟ್ ಮಾಡಿರುವ ಅವರು, ಹಿಂದಿನ ಬಿಜೆಪಿ ಸರ್ಕಾರವು ಪರಿಶಿಷ್ಟ ಜಾತಿಯವರಿಗೆ ಶೇ. ೧೫ ರಿಂದ ೧೭ ರಷ್ಟು ಮೀಸಲಾತಿಯನ್ನು ಹೆಚ್ಚಿಸಿತ್ತು ಆದರೆ, ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೀಸಲಾತಿ ಪ್ರಮಾಣವನ್ನು ಶೇ. ೧೫ಕ್ಕೆ ಸೀಮಿತ ಮಾಡಿ ಎಡಗೈ ಸಮುದಾಯದವರಿಗೆ ೫.೨೫ ಮತ್ತು ಬಲಗೈ ಸಮುದಾಯದವರಿಗೆ ೫.೨೫ ಮೀಸಲಾತಿ ನಿಗದಿ ಮಾಡಿ ಅನ್ಯಾಯವೆಸಗಿದೆ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಬಲಗೈ ಸಮುದಾಯದವರಿಗೆ ಶೇ. ೬ ಮತ್ತು ಎಡಗೈ ಸಮುದಾಯದವರಿಗೆ ಶೇ. ೫.೫ ಮೀಸಲಾತಿ ನೀಡಿತ್ತು ಎಂದು ಹೇಳಿದ್ದಾರೆ.


ಬಲಗೈ ಮತ್ತು ಎಡಗೈ ಸಮುದಾಯದವರಿಗೆ ಅನ್ಯಾಯ ಮಾಡಿರುವಜತೆಗೆ ಬಂಜಾರ,ಭೋವಿ, ಕೊರಚ ಹಾಗೂ ಕೊರಮ ಸಮುದಾಯಗಳಿಗೂ ಮೀಸಲಾತಿ ಪ್ರಮಾಣವನ್ನು ಕಡಿಮೆ ಮಾಡಿ ಅನ್ಯಾಯ ಮಾಡಲಾಗಿದೆ. ಈ ಮೂಲಕ ಈ ಸಮುದಾಯಗಳ ಬೆನ್ನಿಗೆ ರಾಜ್ಯ ಸರ್ಕಾರ ಚೂರಿ ಹಾಕಿದೆ ಎಂದು ಅವರು ಹೇಳಿದ್ದಾರೆ.
ನ್ಯಾಯಾಲಯದಲ್ಲಿ ತಡೆಯಾಜ್ಞೆ ಇಲ್ಲದಿದ್ದರೂ ರಾಜ್ಯಸರ್ಕಾರವೇ ಅಫಿಡಿವೇಟ್ ಸಲ್ಲಿಸಿ ಶೇ. ೧೭ರ ಮೀಸಲಾತಿಯನ್ನು ಶೆ. ೧೫ಕ್ಕೆ ಇಳಿಸಿದ್ದಾಗಿ ಒಪ್ಪಿಕೊಂಡಿದ್ದರ ಫಲ ಪರಿಶಿಷ್ಟ ಜಾತಿ ಮೀಸಲಾತಿ ಪ್ರಮಾಣವು ೧೭ ರಿಂದ ೧೫ ಕ್ಕೆ ಇಳಿಯಲು ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.


ರಾಜ್ಯ ಸರ್ಕಾರದಲ್ಲಿ ಲಕ್ಷಾಂತರ ಸರ್ಕಾರಿ ಹುದ್ದೆಗಳು ಖಾಲಿ ಇದ್ದರೂ ಯಾವುದನ್ನು ಭರ್ತಿ ಮಾಡದೆ ಒಳಮೀಸಲಾತಿ ಹೆಸರಿನಲ್ಲಿ ಎರಡೂವರೆ ವರ್ಷಗಳ ಅಮೂಲ್ಯ ಸಮಯವನ್ನು ಕಾಂಗ್ರೆಸ್ ಸರ್ಕಾರ ಹಾಳು ಮಾಡಿದೆ. ಉಳಿದಿರುವ ಕೆಲವ ೨ ವರ್ಷಗಳಲ್ಲಿ ಪರಿಶಿಷ್ಟ ಸಮುದಾಯಗಳು ಸೇರಿದಂತೆ ರಾಜ್ಯದ ಜನರ ಕಣ್ಣಿಗೆ ಮಣ್ಣೆರೆಚುವ ರೀತಿಯಲ್ಲಿ ನೇಮಕಾತಿಗೆ ಚಾಲನೆ ಕೊಡುವುದಾಗಿ ಸಮಜಾಯಿಷಿ ನೀಡಿದೆ ಎಂದು ಅವರು ಟೀಕಿಸಿದ್ದಾರೆ.


ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಸಮುದಾಯಗಳಿಗೆ ಮಾಡಿರುವ ಅನ್ಯಾಯಕ್ಕೆ ಭವಿಷ್ಯದಲ್ಲಿ ಬೆಲೆ ತೆತ್ತಲೇಬೇಕಾಗುತ್ತದೆ ಎಂಬುದನ್ನು ಕಾಂಗ್ರೆಸ್ ನಾಯಕರು ಮರೆಯಬಾರದು ಎಂದಿರುವ ಅವರು, ಈಗಲೂ ಕಾಂಗ್ರೆಸ್ ಸರ್ಕಾರಕ್ಕೆ ಪರಿಶಿಷ್ಟರ ಬಗ್ಗೆ ಬದ್ಧತೆ ಇದ್ದರೆ ಈಹಿಂದಿನ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಶೇ. ೧೭ರ ಮೀಸಲಾತಿ ಪ್ರಮಾಣವನ್ನು ಉಳಿಸಿಕೊಳ್ಳಲು ಸೂಕ್ತ ಕಾನೂನು ಹೋರಾಟ ನಡೆಸುವುದು ಒಳಿತು ಎಂದು ಅವರು ಹೇಳಿದ್ದಾರೆ.