
ಚೆನ್ನೈ,ಮೇ.೬- ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಚಿತ್ರ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷವನ್ನು ಕಾಂಗ್ರೆಸ್ ಬೆಂಬಲಿಸಲು ಮುಂದಾಗಿರುವ ಬೆನ್ನಲ್ಲೇ , ಕಾಂಗ್ರೆಸ್, ಡಿಎಂಕೆಯ ಬೆನ್ನಿಗೆ ಇರಿದಿದೆ ಎಂದು ಡಿಎಂಕೆ ಗಂಭೀರ ಆರೋಪ ಮಾಡಿದೆ
ನಿನ್ನೆ ರಾತ್ರಿ ನಡೆದ ವರ್ಚುವಲ್ ಸಭೆಯಲ್ಲಿ ಕಾಂಗ್ರೆಸ್ ಪಕ್ಷ, ಟಿವಿಕೆಗೆ ಸರ್ಕಾರ ರಚಿಸಲು ಷರತ್ತುಬದ್ಧ ಬೆಂಬಲ ನೀಡಲು ನಿರ್ಣಯ ಅಂಗೀಕರಿಸಿದೆ. ಜೊತೆಗೆ ಕೆಲವು ಮಂಡಳಿಗಳಲ್ಲಿ ಕ್ಯಾಬಿನೆಟ್ ಹುದ್ದೆಗಳು ಮತ್ತು ಅಧ್ಯಕ್ಷ ಸ್ಥಾನಗಳಿಗೆ ಬೇಡಿಕೆ ಇಟ್ಟಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಡಿಎಂಕೆ ವಕ್ತಾರ ಸರವಣನ್ ಅಣ್ಣಾದೊರೈ, ತಮಿಳುನಾಡಿನಲ್ಲಿ ಕಾಂಗ್ರೆಸ್ ನಾಯಕರು ವಿಜಯ್ ಅವರ ಟಿವಿಕೆ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಮುಂದಾಗುವ ಮೂಲಕ ಡಿಎಂಕೆಯ ಬೆನ್ನಿಗೆ ಚೂರಿ ಹಾಕಿದ್ದಾರೆ. ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ೫ ಸ್ಥಾನ ಗೆಲ್ಲಲು ಸಾಧ್ಯವಾಗಿದ್ದು ಅದು ಡಿಎಂಕೆ ಮುಖ್ಯಸ್ಥ ಎಂ,ಕೆ ಸ್ಟಾಲಿನ್ ಅವರಿಂದ ಎನ್ನುವುದನ್ನು ಮರೆಯಬಾರದು ಎಂದಿದ್ದಾರೆ
ಚುನಾವಣಾ ಪೂರ್ವ ಮಿತ್ರ ಪಕ್ಷವಾದ ಡಿಎಂಕೆ ಮಾತುಗಳನ್ನು ಕೇಳದ ಕಾಂಗ್ರೆಸ್ ಟಿವಿಕೆ ಜೊತೆ ಮೈತ್ರಿ ಮಾಡಿಕೊಳ್ಳುವ ಮೂಲಕ ಡಿಎಂಕೆಗೆ ಮೋಸ ಮಾಡಿದೆ ಎಂದು ಆರೋಪಿಸಿದ್ದಾರೆ
ಬಿಜೆಪಿ ಮತ್ತು ಆರೆಸ್‌ಎಸ್ ನಾಯಕರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯನ್ನು “ಪಪ್ಪು” ಎಂದು ಟ್ರೋಲ್ ಮಾಡುತ್ತಿದ್ದಾಗ, ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿದ್ದು ಡಿಎಂಕೆ ಮುಖ್ಯಸ್ಥ ಎಂ,ಕೆ ಸ್ಟಾಲಿನ್ ಎನ್ನುವುದನ್ನು ಕಾಂಗ್ರೆಸ್ ಮರೆಯಬಾರದು ಎಂದು ಹರಿಹಾಯ್ದಿದ್ದಾರೆ
ರಾಜ್ಯ ಕಾಂಗ್ರೆಸ್ ತಿರ್ಮಾನಕ್ಕೆ: ಕೆಸಿವಿ
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಪ್ರತಿಕ್ರಿಯಿಸಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಜೊತೆ ನಡೆದ ಮಾತುಕತೆ ನಂತರ ತಮಿಳುನಾಡಿನಲ್ಲಿ ಜಾತ್ಯಾತೀತ ಪಕ್ಷವನ್ನು ಬೆಂಬಲಿಸುವ ಜೊತೆಗೆ ಕೋಮುವಾದಿ ಬಿಜೆಪಿ ಮತ್ತು ಅದರ ಮಿತ್ರ ಪಕ್ಷವನ್ನು ಅಧಿಕಾರದಿಂದ ದೂರ ಇಡಲು ಟಿವಿಕೆ ಮುಖ್ಯಸ್ಥ ವಿಜಯ್ ಅವರ ಮನವಿ ಮೇರೆಗೆ ಟಿವಿಕೆಗೆ ಬೆಂಬಲ ನೀಡುವ ಬಗ್ಗೆ ಕೈಗೊಳ್ಳುವ ಅಧಿಕಾರವನ್ನು ತಮಿಳುನಾಡು ಕಾಂಗ್ರೆಸ್ ಸಮಿತಿಗೆ ನೀಡಲಾಗಿದೆ ಎಂದು ಹೇಳಿದ್ಧಾರೆ
ತಮಿಳುನಾಡು ವಿಧಾನಸಭೆ ಚುನಾವಣೆ ಪ್ರಕಟವಾದ ನಂತರ ಕಾಂಗ್ರೆಸ್ ಪಕ್ಷ ಟಿವಿಕೆ ಜೊತೆ ಮೈತ್ರಿ ಮಾಡಿಕೊಳ್ಳಲು ಉದ್ದೇಶಿಸಿತ್ತು ರಾಜ್ಯ ನಾಯಕರು ರಾಷ್ಟ್ರೀಯ ನಾಯಕರಿಗೆ ಮನವಿ ಮಾಡಿದ್ದರೂ ಕಿವಿಗೊಟ್ಟಿರಲಿಲ್ಲ, ಈಗ ಚುನಾವಣಾ ಫಲಿತಾಂಶದ ನಂತರ ಮೈತ್ರಿ ಮಾಡಿಕೊಳ್ಳಲು ಮುಂದಾಗಿದೆ
ಟಿವಿಕೆ ಪಕ್ಷಕ್ಕೆ ಷರತ್ತು ವಿಧಿಸಿರುವ ಹಿನ್ನೆಲೆಯಲ್ಲಿ ಟಿವಿಕೆ ಪ್ರತಿಕ್ರಿಯೆ ನೋಡಿಕೊಂಡು ಔಪಚಾರಿಕ ಪತ್ರವನ್ನು ನಾಳೆ ನೀಡುವ ನಿರೀಕ್ಷೆ ಇದೆ ನಂತರ ಕಾಂಗ್ರೆಸ್ ಶಾಸಕರು ಪನೈಯೂರ್‍ನಲ್ಲಿ ವಿಜಯ್ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ
ವಿಜಯ್ ಅವರ ಎರಡು ವರ್ಷದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ೧೦೮ ಸ್ಥಾನಗಳೊಂದಿಗೆ ತಮಿಳುನಾಡಿನಲ್ಲಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಹುಮತಕ್ಕೆ ೧೧ ಸ್ಥಾನಗಳ ಕೊರತೆ ಎದುರಾಗಿದೆ
ಈ ಹಿನ್ನೆಲೆಯಲ್ಲಿ, ವಿಜಯ್ ಅವರು ಕಾಂಗ್ರೆಸ್ ಮತ್ತು ಚುನಾವಣೆಗೆ ಮುನ್ನ ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಗತಿಪರ ಮೈತ್ರಿಕೂಟದ ಭಾಗವಾಗಿದ್ದ ವಿಸಿಕೆ, ಸಿಪಿಐ, ಸಿಪಿಐ(ಎಂ) ಮತ್ತು ಐಯುಎಂಎಲ್ ಸೇರಿದಂತೆ ಇತರ ಪಕ್ಷಗಳನ್ನು ಸಂಪರ್ಕಿಸಿದ್ದಾರೆ. ೨೩೪ ಸದಸ್ಯರ ವಿಧಾನಸಭೆಯಲ್ಲಿ ಐಯುಎಂಎಲ್, ಸಿಪಿಐ, ಸಿಪಿಐ(ಎಂ) ಮತ್ತು ವಿಸಿಕೆ ತಲಾ ಎರಡು ಸ್ಥಾನಗಳನ್ನು ಗೆದ್ದಿವೆ.ಅದರ ಬೆಂಬಲ ಪಡೆಯುವ ಸಾಧ್ಯತೆ ಇದೆ

























