
ತುಮಕೂರು, ಜೂ. ೧- ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಮತ್ತು ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ವತಿಯಿಂದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಅವರ ಧರ್ಮಪತ್ನಿ ಲೇಟ್ ರಮಾಬಾಯಿ ಅವರ ಪರಿನಿಬ್ಬಾಣ ದಿವಸ್‌ನ್ನು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರ ಮೂಲಕ ಆಚರಿಸಲಾಯಿತು.
ಇಲ್ಲಿನ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ರಮಾಬಾಯಿರವರ ಪರಿನಿಬ್ಬಾಣ ದಿವಸ್ ಕುರಿತು ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಮತ್ತು ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್ ಮಾತನಾಡಿ, ರಮಾಬಾಯಿರವರು ವಿಧಿವಶರಾದ ಐದು ವರ್ಷಗಳ ತರುವಾಯ ಡಾ. ಬಿ.ಆರ್.ಅಂಬೇಡ್ಕರ್ ’ದಿ ಪಾರ್ಟಿಷನ್ ಆಫ್ ಇಂಡಿಯಾ’ ಎಂಬ ವಿದ್ವತ್ ಪೂರ್ಣ ಗ್ರಂಥವನ್ನು ಬರೆದು ಅದನ್ನು ಅವರ ಪತ್ನಿ ರಮಾಬಾಯಿ ಅವರಿಗೆ ಸಮರ್ಪಿಸಿದರು. ಈ ಕೃತಿಯು ೧೯ನೇ ಶತಮಾನದಲ್ಲಿ ಪತ್ನಿಯೊಬ್ಬರಿಗೆ ಸಮರ್ಪಣೆ ಮಾಡಿದ ಮೊಟ್ಟ ಮೊದಲ ಕೃತಿ ಎನ್ನಲಾಗಿದೆ.
ಅಂಬೇಡ್ಕರ್‌ರವರಿಂದ ರಚಿತವಾದ ಆ ಕೃತಿಯನ್ನು ರಮಾಬಾಯಿ ಅವರಿಗೆ ಸಮರ್ಪಿಸುವ ಸಲುವಾಗಿ ನಾಲ್ಕು ಸಾಲುಗಳನ್ನು ಬರೆಯುತ್ತಾ ಆಕೆಯ ಹೃದಯ ಸೌಜನ್ಯತೆ ಹಾಗೂ ಪರಿಶುದ್ಧ ಶೀಲ ಮತ್ತು ನಮಗೆ ಯಾವುದೇ ಹಿತಚಿಂತಕರು ಇಲ್ಲದಿದ್ದ ಆ ದಿನಗಳಲ್ಲಿ ನಮ್ಮ ಪಾಲಿಗೆ ಬಂದಿದ್ದ ಬಡತನ ಮತ್ತು ಸಂಕಷ್ಟಗಳಲ್ಲಿ ಕಾಂತಚಿತ್ತದಿಂದ ಮನಃಪೂರ್ವಕವಾಗಿ ನನ್ನನ್ನು ಸಂತೈಸುತ್ತಾ ಸಹಕರಿಸಿದ ರಮಾಗೆ ಈ ಕೃತಿ ಸಮರ್ಪಿತ ಎಂದು ಭಾವುಕರಾಗಿ ಬರೆದಿದ್ದಾರೆ ಎಂದರು.
ಈ ಎಳೆಯನ್ನು ಹಿಡಿದು ಹೊರಟಾಗ ರಮಾಬಾಯಿ ಚರಿತ್ರೆಯನ್ನು ಕೂಡ ಇತಿಹಾಸ ಮರೆಮಾಚಬಾರದೆನಿಸಿತು. ರಮಾಬಾಯಿ ಅವರ ಜೀವನವೂ ಕೂಡ ತಲ್ಲಣಗಳನ್ನು ಸೃಷ್ಟಿ ಮಾಡುವ ಸಾಮಾಜಿಕ ಕ್ರೂರತೆಯನ್ನು ಬಿಂಬಿಸುವ ರೀತಿಯಲ್ಲಿ ಇಂದಿನ ಸಮಾಜಕ್ಕೆ ಮಾದರಿ ಎನಿಸಿದೆ. ಮಾನವ ಪ್ರೇಮಿ ಅಂಬೇಡ್ಕರ್‌ರವರ ಮಹಾ ಮಾನವತಾ ಹೋರಾಟಕ್ಕೆ ರಮಾಬಾಯಿ ಅವರ ತ್ಯಾಗ ಅನನ್ಯವಾಗಿದೆ ಎಂದು ಉಲ್ಲೇಖಿಸಿದ್ದಾರೆ. ಅಲ್ಲದೇ ತಮ್ಮ ಶ್ರೀಮತಿಯವರು ಪಟ್ಟ ತ್ಯಾಗ, ಪರಿಶ್ರಮ ಅನುಭವಿಸಿದ ನೋವು, ಹಸಿವು, ನಿದ್ರಾ ಹೀನತೆ, ಕ್ರೂರ ಬಡತನ, ನಿಂದನೆ, ತನ್ನ ಮಕ್ಕಳ ಸಾವಿನ ಆಕ್ರಂದನಗಳನ್ನು ತಾನೇ ನುಂಗಿಕೊಂಡು ಅಂಬೇಡ್ಕರರಿಗೂ ತಾಯಿತನ ತುಂಬಿದ್ದೇ ಅಂಬೇಡ್ಕರ್‌ರವರ ಈ ಮಟ್ಟದ ಸಾಧನೆಗೆ ಕಾರಣವಾಗಿತ್ತು ಎಂದರು.
ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಮತ್ತು ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾ ಕಾರ್ಯಧ್ಯಕ್ಷರಾದ ಕೆಸ್ತೂರು ನರಸಿಂಹಮೂರ್ತಿ ಮಾತನಾಡಿ, ಜಗತ್ತಿನ ಮಹಾಪುರುಷನ ಕೈಹಿಡಿದ ಯಾವ ಹೆಣ್ಣು ಕೂಡ ಅನುಭವಿಸದೇ ಇರುವ ಯಾತನೆಯನ್ನು ರಮಾಬಾಯಿ ಅಂಬೇಡ್ಕರ್ ಅವರು ಅನುಭವಿಸಿದ್ದರು. ಅವರ ನಾಲ್ಕು ಮಕ್ಕಳ ಸಾವಿನ ಸಂದರ್ಭಗಳಲ್ಲಿ ಅನುಭವಿಸಿದ್ದು, ಕರಾಳ ಕ್ಷಣಗಳು ಎನ್ನಲಾಗಿದ್ದು, ಅಂಬೇಡ್ಕರ್‌ರವರು ಎರಡು ಮಕ್ಕಳ ಸಾವಿನ ಸಂದರ್ಭದಲ್ಲಿ ವಿದೇಶದಲ್ಲಿದ್ದರು. ಅಲ್ಲದೇ ಅವರ ನಾಲ್ಕು ಮಕ್ಕಳ ಸಾವಿನಲ್ಲಿ ಇಬ್ಬರು ಮಕ್ಕಳ ಮುಖವನ್ನೇ ನೋಡಲಾಗಲಿಲ್ಲ.
ಅಂತಹ ಸನ್ನಿವೇಶಗಳು ಎದುರಾಗಿದ್ದವಲ್ಲದೇ, ತಮ್ಮ ಪುತ್ರ ರಮೇಶ ವಿಧಿವಶರಾದಾಗ ಅಂಬೇಡ್ಕರ್‌ರವರು ಅಮೆರಿಕದಲ್ಲಿದ್ದರು, ಗಂಗಾಧರ ವಿಧಿವಶರಾದಂತಹ ಸಂದರ್ಭದಲ್ಲಿ ಇಂಗ್ಲೆಂಡ್‌ನಲ್ಲಿದ್ದರು, ಮಗಳು, ಕೊನೆಯ ಮಗ ರಾಜರತ್ನ ವಿಧಿವಶರಾದಂತಹ ಸಂದರ್ಭದಲ್ಲಿ ಅವರುಗಳನ್ನು ಅಪ್ಪಿ ಮುದ್ದಾಡಿ ಭಾವುಕರಾಗಿ ಅತ್ಯಂತ ದುಃಖಬ್ರಾಂತರಾಗಿ ಚಿಕ್ಕ ಮಗುವಿನಂತೆ ಅತ್ತ ಸನ್ನಿವೇಶಗಳನ್ನು ಸಹ ಅಂಬೇಡ್ಕರ್‌ರವರಿಂದ ರಚಿತವಾದ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿಸಿದರು.