
ಬಾದಾಮಿ, ಮೇ9: ನೇಕಾರ ಅಭಿವೃದ್ಧಿ ನಿಗಮ ಸ್ಥಾಪನೆ, ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ನೇಕಾರ ಸಮಾಜದವರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ನೇಕಾರ ಸಮಾಜದವರ ಪರವಾಗಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಇದುವರೆಗೆ ನೇಕಾರ ಸಮಾಜಕ್ಕೆ ರೂ.95 ಲಕ್ಷ ಅನುದಾನ ನೀಡಲಾಗಿದೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ಅವರು ಸಮೀಪದ ಬನಶಂಕರಿಯಲ್ಲಿ ಶುಕ್ರವಾರ ಅಖಿಲ ಭಾರತ ದೇವಾಂಗ(ನೇಕಾರ) ಜಾಗೃತಿ ಸಮಾವೇಶ-2026, ಶ್ರೀ ದಯಾನಂದ ಪುರಿ ಮಹಾಸ್ವಾಮಿಜಿಯವರ 36 ನೇ ವರ್ಷದ ಪಟ್ಟಾಭಿಷೇಕ ಹಾಗೂ ತುಲಾಭಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಈಗಾಗಲೇ ನೇಕಾರ ಸಮಾಜದ ವಿವಿದ ಯೋಜನೆಗಳಿಗೆ ರೂ.95 ಲಕ್ಷ ಅನುದಾನ ನೀಡಲಾಗಿದೆ. ಇನ್ನು ರೂ.10 ಲಕ್ಷ ಅನುದಾನ ನೀಡಲಾಗುವುದು. ಸಮಾಜ ಬಾಂಧವರು ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಸತ್ಪ್ರಜೆಗಳಾಗಿ ರೂಪಿಸಬೇಕು. ನೇಕಾರ ಸಮಾಜಕ್ಕೆ ನನ್ನ ಕೈಲಾದಷ್ಟು ಕೆಲಸ ಮಾಡುತ್ತೇನೆ. ನಿಮ್ಮ ಸಮಾಜದ ಯಾವುದೇ ಕೆಲಸಗಳಿದ್ದರೆ ತಿಳಿಸಿ, ನಾನು ಪ್ರಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಅಖಿಲ ಭಾರತ ದೇವಾಂಗ(ನೇಕಾರ) ಜಾಗೃತಿ ಸಮಾವೇಶದ ಸಮಿತಿಯ ಅಧ್ಯಕ್ಷ ರವೀಂದ್ರ ಕಲಬುರ್ಗಿ ಮಾತನಾಡಿ ರಾಜ್ಯ ಸಭಾ ಸದಸ್ಯ ಕೆ.ನಾರಾಯಣ ಅವರು ನೇಕಾರ ಸಮಾಜದ ಯಾವುದೇ ಪಂಗಡಗಳಿದ್ದರೂ ಕನಿಷ್ಟ ರೂ.20 ಲಕ್ಷ ಅನುದಾನ ನೀಡಿದ್ದಾರೆ. ಕೆ.ನಾರಾಯಣ, ಪ್ರೀತಿ ಕಾಮಕರ, ಉಮಾಶ್ರೀ ಹೊರತುಪಡಿಸಿದರೆ ನೇಕಾರ ಸಮಾಜ ರಾಜಕೀಯವಾಗಿ ಹಿಂದುಳಿದಿದೆ. ಸಮಾಜ ಜಾಗೃತರಾಗಬೇಕಿದೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಮುಂದುವರೆಯಬೇಕಾಗಿದೆ. ಸಂಘಟಿತರಾಗಬೇಕಿದೆ. ಕೈಮಗ್ಗ ನಿಗಮ, ಪವರಲೂಮ್ ನಿಗಮಕ್ಕೆ ನೇಕಾರರನ್ನೇ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತರಬೇಕು ಎಂದು ಶಾಸಕರಿಗೆ ಮನವಿ ಮಾಡಿದರು.
ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಮಾತನಾಡಿ ನೇಕಾರ ಸಮಾಜದ ಯಾವುದೇ ಕೆಲಸಗಳಿದ್ದರೆ ರಾಜ್ಯ ಹಾಗೂ ಕೇಂದ್ರ ಸರಕಾರದಿಂದ ಕೆಲಸ ಮಾಡಿಕೊಡಲಾಗುವುದು. ಸಮಾಜ ಬಾಂಧವರು ಸಂಘಟಿತರಾಗಿ, ಜಾಗೃತರಾಗಬೇಕು. ನಾವು ಪಕ್ಷಾತೀತವಾಗಿ ಕೆಲಸ ಮಾಡುತ್ತೇವೆ. ನೇಕಾ ಸಮಾಜದವರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪನೆ ಮಾಡಿ ನಾನು ಆರ್ಥಿಕ ಸಹಕಾರ ನೀಡುತ್ತೇನೆ ಎಂದು ಹೇಳಿದರು.
ಶ್ರೀ ಹಂಪಿ ಹೇಮಕೂಟದ ದಯಾನಂದ ಪುರಿ ಮಹಾಸ್ವಾಮೀಜಿಯವರು ಸಾನಿಧ್ಯ ವಹಿಸಿ ಅಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಅವರು ವಚನಕಾರ ಶ್ರೀ ದೇವರದಾಸಿಮಯ್ಯನವರ ಇಂಗ್ಲೀಷ್ ವಚನಗಳ ಕೃತಿ ಬಿಡುಗಡೆ ಮಾಡಿದರು. ರಾಜ್ಯಸಭಾ ಸದಸ್ಯ ಕೆ.ನಾರಾಯಣ್ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಸಮಾಜದವರು ಒಬ್ಬನೇ ಒಬ್ಬ ಐಎಎಸ್, ಕೆಎಎಸ್ ಅಧಿಕಾರಿಗಳು ಇಲ್ಲ. ರಾಜಕೀಯ ಪ್ರಾತಿನಿಧ್ಯ ಇಲ್ಲ. ಹೀಗಾದರೆ ಸಮ್ಮ ಸಮಾಜದ ಗತಿ ಏನು?. ಸಮಾಜ ಬಾಂಧವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಉತ್ತಮ ಅಧಿಕಾರಿಗಳನ್ನಾಗಿ ಮಾಡಲು ಪಣ ತೊಡಬೇಕು ಎಂದು ಹೇಳಿದರು. ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ ನೇಕಾರ ಸಮಾಜದವರು ಇಂದು ಬಹಳ ಸಂಕಷ್ಟದಲ್ಲಿದ್ದಾರೆ. ಬಟ್ಟೆ ನೇಯ್ಗೆಯಿಂದ ಜೀವನ ನಡೆಸದೇ ಬೇರೆ ಉದ್ಯೋಗ ಮಾಡುತ್ತಿದ್ದಾರೆ. ನಾನು ಸಹ ಸಮಾಜದ ಕಷ್ಟಗಳನ್ನು ಅರಿತಿದ್ದೇನೆ. ನಾನು ನಿಮ್ಮ ಸಮಾಜದ ಪರವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು. ವೇದಿಕೆಯ ಮೇಲೆ ನೇಕಾರ ಸಮಾಜದ ಹಿರಿಯರಾದ ಬಿ.ಆರ್.ಗಿರಿಯಪ್ಪ, ಎಸ್.ಆರ್.ಸಿದ್ದಲಿಂಗನ್ನವರ, ಗೋವಿಂದಪ್ಪ, ಗಣೇಶ, ಎಂ.ಪಿ.ಉಮಾಶಂಕರ, ಬಿ.ಪಿ.ವಿನಾಯಕ ಕಾಮಕರ, ಬಿ.ಎಸ್.ಸೋಮಶೇಖರ, ಎಲ್ಲ ಜಿಲ್ಲೆಯ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು ಹಾಜರಿದ್ದರು. ಸಂಕಣ್ಣ ಕರಡಿಗುಡ್ಡ ಸ್ವಾಗತಿಸಿದರು. ಟಿ.ರಾಜೇಶ ಪ್ರಾಸ್ತಾವಿಕವಾಗಿ ಮಾತನಾಡಿದರು.





















