Home ಜಿಲ್ಲೆ 29ರಂದು ಸಕಲ ಮರಾಠಾ ಸಮಾಜದಿಂದ ಅಂಬೇಡ್ಕರ್ ಜಯಂತಿ ಆಚರಣೆ: ದಾದಾ ಮಹಾರಾಜ ನಗರಕರ್

29ರಂದು ಸಕಲ ಮರಾಠಾ ಸಮಾಜದಿಂದ ಅಂಬೇಡ್ಕರ್ ಜಯಂತಿ ಆಚರಣೆ: ದಾದಾ ಮಹಾರಾಜ ನಗರಕರ್

ಬೀದರ್:ಏ.27: ಈ ತಿಂಗಳ 29ರಂದು ಸಾಯಂಕಾಲ 5 ಗಂಟೆಗೆ ನಗರದ ಅಂಬೇಡ್ಕರ್ ಹಾಗೂ ಛತ್ರಪತಿ ಶಿವಾಜಿ ಮಹಾರಾಜ ವೃತ್ತದ ಮಧ್ಯದಲ್ಲಿನ ರಸ್ತೆಯಲ್ಲಿ ಬೃಹತ್ ವೇದಿಕೆ ನಿರ್ಮಿಸಿ ಅಲ್ಲಿ ಸಂವಿಧಾನ ಶಿಲ್ಪಿ ಡಾ.ಭೀಮರಾವ ಅಂಬೇಡ್ಕರ್ ಅವರ ಜಯಂತ್ಯೋತ್ಸವ ಸಂಭ್ರಮ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದೆಂದು ಸಮಾಜದ ಪೂಜ್ಯರಾದ ದಾದಾ ಮಹಾರಾಜ ನಗರಕರ್ ತಿಳಿಸಿದರು.
ಭಾನುವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಹರಿದು ಹಂಚಿ ಹೋಗುತ್ತಿರುವ ಸಣ್ಣ ಸಣ್ಣ ಸಮಾಜಗಳನ್ನು ಒಂದು ಗೋಡಿಸುವುದು. ದಲಿತ ಸಮುದಾಯ ಹಾಗೂ ಮರಾಠಾ ಸಮುದಾಯಗಳನ್ನು ಒಗ್ಗೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಮರಾಠಾ ಸಮಾಜದಿಂದ ಅಂಬೇಡ್ಕರ್ ಜಯಂತಿ ಆಚರಿಸುತ್ತ ಬರುತ್ತಲಿದ್ದೇವೆ. ಈ ಮೊದಲು ಮಹಾರಾಷ್ಟ್ರದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವು. ಈ ವರ್ಷದಿಂದ ಕರ್ನಟಕದಲ್ಲಿಯೂ ಸಹ ಸಯ್ಯಾಜಿರಾವ ಗಾಯಕವಾಡ ಹಾಗೂ ಶಾಹೂ ಮಹಾರಾಜರ ತತ್ವಗಳನ್ನು ನಮ್ಮ ಸಮುದಾಯಕ್ಕೆ ಪರಿಚಯಿಸುವ ಕಾರ್ಯ ಮಾಡಬೇಕಾದ ಹಿನ್ನೆಲೆ ಈ ಕಾರ್ಯಕ್ರಮ ಸೂಕ್ತವಾಗಿದೆ ಎಂದರು.
ಅಣದುರ ವೈಶಾಲಿ ನಗರದ ಪೂಜ್ಯ ಭಂತೆ ಸಂಘರಕ್ಷಿತ ಅವರು ಮಾತನಾಡಿ, ಅಂಬೇಡ್ಕರ್ ಅವರು ಒಂದು ಸಮುದಾಯದ ಆಸ್ತಿ ಅಲ್ಲ ಅವರು ಸರ್ವ ಸಮುದಾಯದ ಬೆಳಕು. ಹಾಗಾಗಿ ಪರಸ್ಪರ ಸಮುದಾಯಗಳು ಸಾಮೂಹಿಕವಾಗಿ ಸೇರಿ ಇಂಥ ಮಹಾತ್ಮರ ಜಯಂತಿಗಳನ್ನು ಆಚರಿಸುತ್ತ ಬಂದರೆ ಧರ್ಮ ರಹಿತ, ಜಾತಿರಹಿತದಿಂದ ಕೂಡಿದ ಸಮಾಜ ಸಂಘಟಿಸಬಹುದಾಗಿದೆ ಎಂದರು.
ನ್ಯಾಯವಾದಿ ನಾರಾಯಣ ಗಣೇಶ ಮಾತನಾಡಿ, ಈ ಕಾರ್ಯಕ್ರಮವನ್ನು ಉದ್ಘಾಟಿಸಲು ಕಾರ್ಮಿಕ ಸಚಿವ ಸಂತೋಷ ಲಾಡ್ ಆಗಮಿಸುತ್ತಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಪೌರಾಡಳಿತ ಸಚಿವ ರಹಿಮ್ ಖಾನ್, ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರನ್ನು ಕಾರ್ಯಕ್ರಮಕ್ಕೆ ಅವ್ಹಾನಿಸಲಾಗುತ್ತಿದೆ. ಒಟ್ಟಾರೆ ಇದೊಂದು ಸರ್ವಧರ್ಮದ ಶಾಂತಿಯ ತೋಟ ಎಂಬಂತೆ ಎಲ್ಲ ಪಕ್ಷದವರನ್ನು ಸಹ ಕಾರ್ಯಕ್ರಮಕ್ಕೆ ಅವ್ಹಾನಿಸಿ ರಾಜಕೀಯ ರಹಿತ ಕಾರ್ಯಕ್ರಮವನ್ನಾಗಿ ಮಾಡಲಾಗುತ್ತದೆ ಎಂದರು.
ಲಿಡ್ಕರ್ ಬೋರ್ಡ್ ಅಧ್ಯಕ್ಷ ಮುಂಡರಗಿ ನಾಗರಾಜ ಮಾತನಾಡಿ, ಸಂತೋಷ ಲಾಡ್ ಅವರು ಪ್ರತಿಯೊಂದು ಜಿಲ್ಲೆಗಳಲ್ಲಿ ಇಂತಹ ಧರ್ಮಾಧಾರಿತ, ಜಾತಿ ರಹಿತ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಗಡಿ ಜಿಲ್ಲೆ ಬೀದರ್‍ನಲ್ಲಿ ಸಹ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.
ದಲಿತ ಮುಖಂಡರಾದ ಮಹೇಶ ಗೋರನಾಳಕರ್, ಬಾಬುರಾವ ಪಾಸ್ವಾನ್, ಮರಾಠಾ ಸಮಾಜದ ಗೋವಿಂದರಾವ ಜಾಧವ, ಭೋವಿ ವಡ್ಡರ್ ಸಮಾಜದ ಅಧ್ಯಕ್ಷ ತಾನಾಜಿ ಸಗರ್ ಮಾತನಾಡಿದರು. ದಲಿತ ಮುಖಂಡರಾದ ಡಾ.ಕಾಶಿನಾಥ ಚಲ್ವಾ, ಧನರಾಜ ಮುಸ್ತಾಪುರೆ ಹಾಗೂ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು.