
ಶ್ರೀನಗರ: ಜೂ.೩೦-ಜುಲೈ ೩ರಿಂದ ಬಹು ನಿರೀಕ್ಷಿತ ಅಮರನಾಥ ಯಾತ್ರೆ ಪ್ರಾರಂಭವಾಗಲಿದ್ದು, ಜಮ್ಮು ಕಾಶ್ಮೀರದಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ತಪಾಸಣೆ ನಡೆಸಲು ಹೆಚ್ಚುವರಿ ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ.
ಪಹಲ್ಗಾಮ್ ಉಗ್ರರ ದಾಳಿ ಬಳಿಕ, ಯಾತ್ರಾರ್ಥಿಗಳ ಸುರಕ್ಷತೆ, ಭದ್ರತೆ ದೃಷ್ಟಿಯಿಂದ ಜಮ್ಮುವಿನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಅರೆಸೇನಾ ಪಡೆಗಳು ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಿದ್ದು, ಯಾತ್ರಾರ್ಥಿಗಳಿಗೆ ಸುಗಮ ಯಾತ್ರೆಯ ಅನುಭವ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ.
ರಾಷ್ಟ್ರೀಯ ಹೆದ್ದಾರಿಗಳು, ನಗರದ ಹೊರವಲಯ, ಮೂಲ ಶಿಬಿರ ಭಗವತಿ ನಗರಕ್ಕೆ ಹೋಗುವ ಮಾರ್ಗಗಳು ಸೇರಿದಂತೆ ಸೂಕ್ಷ್ಮ ವಲಯಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಿದ್ದು, ದಿನದ ೨೪ ತಾಸು ಕಟ್ಟೆಚ್ಚರ ವಹಿಸಲಾಗಿದೆ. ಇನ್ನೂ ಹೋಟೆಲ್, ಗೆಸ್ಟ್ ಹೌಸ್‌ಗಳ ಮೇಲೆಯೂ ಹದ್ದಿನ ಕಣ್ಣಿಡಲಾಗಿದೆ.
ಅಮರನಾಥ ಯಾತ್ರೆಗೆ ೫೦ ಸಾವಿರ ಯಾತ್ರಾರ್ಥಿಗಳಿಗೆ ವಸತಿ ಸೌಲಭ್ಯ ಮಾಡಿರುವುದಾಗಿ ಜಮ್ಮು ಕಾಶ್ಮೀರ ಆಡಳಿತ ಮಂಡಳಿ ತಿಳಿಸಿದೆ.
ಆದರೆ, ಪಹಲ್ಗಾಮ್ ದಾಳಿಯ ಬಳಿಕ ಅಮರನಾಥ ಯಾತ್ರೆಗೆ ನೋಂದಾಯಿಸಿಕೊಳ್ಳುವ ಭಕ್ತರ ಸಂಖ್ಯೆ ೧೦%ನಷ್ಟು ಇಳಿಕೆಯಾಗಿದೆ ಎಂದು ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ತಿಳಿಸಿದ್ದಾರೆ.