
ನವದೆಹಲಿ, ಜು.೧-ತಿಂಗಳ ಮೊದಲ ದಿನವೇ ಗ್ರಾಹಕರಿಗೆ ಬಹುದೊಡ್ಡ ಬದಲಾವಣೆ ಕಂಡು ಬಂದಿದ್ದು, ತೈಲ ಕಂಪನಿಯು ಇಂದಿನಿಂದ ೧೯ ಕೆಜಿ ವಾಣಿಜ್ಯ ಎಲ್ ಪಿಜಿ ಸಿಲಿಂಡರ್ ಗಳ ಬೆಲೆಯಲ್ಲಿ ೫೮.೫೦ ರೂ. ಇಳಿಕೆ ಮಾಡಿದೆ. ಆದರೆ ೧೪.೨ ಕೆಜಿ ಗೃಹ ಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ.
ಪ್ರತಿ ತಿಂಗಳ ಮೊದಲ ದಿನದಂದು ತೈಲ ಮಾರುಕಟ್ಟೆ ಕಂಪನಿಗಳು ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಪರಿಷ್ಕರಿಸುತ್ತವೆ. ಈ ತಿಂಗಳು ಸಿಲಿಂಡರ್ ಬೆಲೆ ಕಡಿಮೆಯಾಗಿದೆ.
ತೈಲ ಕಂಪನಿಗಳು ೧೯ ಕೆಜಿ ವಾಣಿಜ್ಯ ಸಿಲಿಂಡರ್ ದರವನ್ನು ಸುಮಾರು ೫೮.೫೦ ರೂ.ಗಳಷ್ಟು ಕಡಿಮೆ ಮಾಡಿವೆ. ಆದರೆ ೧೪.೨ ಕೆಜಿ ಗೃಹ ಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ.
ತೈಲ ಮಾರುಕಟ್ಟೆ ಕಂಪನಿಗಳು ಬಿಡುಗಡೆ ಮಾಡಿದ ಹೊಸ ದರ ಪಟ್ಟಿಯ ಪ್ರಕಾರ, ದೆಹಲಿಯಲ್ಲಿ ೧೯ ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ೧,೬೬೫ ರೂ. ಆಗಿದೆ. ಜೂನ್‌ನಲ್ಲಿ ೧೯ ಕೆಜಿ ಸಿಲಿಂಡರ್ ಬೆಲೆ ೧೭೨೩.೫೦ ರೂ. ಆಗಿತ್ತು.
ಕೋಲ್ಕತ್ತಾದಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ ೧೮೨೬ ರೂ. ಗಳ ಬದಲಾಗಿ ೧೭೬೯ ರೂಪಾಯಿಗೆ ಸಿಗಲಿದೆ. ಮುಂಬೈನಲ್ಲಿ ೧೬೭೪.೫೦ ರೂ.ಗಳ ಬದಲಿಗೆ ೧೬೧೬ ರೂ ಮತ್ತು ಚೆನ್ನೈನಲ್ಲಿ ೧೮೨೩.೫೦ ರೂ.ಗಳ ಬದಲಿಗೆ ೧೮೮೧ ರೂ.ಗೆ ೧೯ ಕೆಜಿ ಎಲ್‌ಪಿಜಿ ಸಿಲಿಂಡರ್ ದೊರೆಯಲಿದೆ.
ಬೆಂಗಳೂರಿನಲ್ಲಿಯೂ ದರ ಪರಿಷ್ಕರಣೆಯಾಗಿದೆ. ವಾಣಿಜ್ಯ ಸಿಲಿಂಡರ್ ಬೆಲೆ ೫೮.೫೦ ರೂ.ಗಳಷ್ಟು ಕಡಿಮೆಯಾಗಿದೆ. ಗೃಹ ಬಳಕೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ವಾಣಿಜ್ಯ ಸಿಲಿಂಡರ್ ಅಗ್ಗವಾಗುತ್ತಿರುವುದರಿಂದ, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳಲ್ಲಿ ಬೆಲೆ ಕಡಿಮೆಯಾಗುತ್ತಿರುವ ನಿರೀಕ್ಷೆ ಇದೆ.
ಏಪ್ರಿಲ್‌ನಲ್ಲಿ ೪೧ ರೂ. ಹಾಗೂ ಮೇ ತಿಂಗಳಲ್ಲಿ ೧೪.೫೦ ರೂ. ಮತ್ತು ಜೂನ್‌ನಲ್ಲಿ ೨೪ ರೂ.ಗಳಷ್ಟು ಇಳಿಕೆ ಮಾಡಲಾಗಿದೆ.