
ವಿಜಯಪುರ, ಅ. 16: ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಸಾರ್ವಜನಿಕವಾಗಿ ತಮ್ಮ ವಿರುದ್ಧ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಪರಶುರಾಮಸಿಂಗ್ ರಜಪೂತ, ಈ ಕುರಿತು ಪೆÇಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮನ್ನು ಉದ್ದೇಶಿಸಿ ‘ಮಟಾಶ್ ಮಾಡುವೆ’ ಎಂಬ ರೀತಿಯಲ್ಲಿ ಯತ್ನಾಳರು ಹೇಳಿಕೆ ನೀಡಿದ್ದಾರೆ. ಇದರಿಂದ ಜೀವ ಭೀತಿ ಎದುರಾಗಿದ್ದು, ಪೆÇಲೀಸ್ ರಕ್ಷಣೆ ನೀಡಬೇಕು. ಈ ಕುರಿತು ಪೆÇಲೀಸ್ ಮಹಾ ನಿರೀಕ್ಷಕರಿಗೂ ಪತ್ರ ಬರೆಯುವುದಾಗಿ ತಿಳಿಸಿದರು.
ತಾವು ಸ್ವಂತ ಪರಿಶ್ರಮದಿಂದ ಸಂಪಾದಿಸಿರುವ ಹಣದಿಂದ ಬಂಗಾರ ಧರಿಸಿದರೆ ತಪ್ಪೇನು ಎಂದು ಪ್ರಶ್ನಿಸಿದ ಅವರು, ಯತ್ನಾಳರ ???ತ ಭ್ರಷ್ಟಾಚಾರ ಹಾಗೂ ನಕಲಿ ಹಿಂದೂತ್ವದ ಮುಖವಾಡವನ್ನು ಬಯಲಿಗೆಳೆಯುತ್ತಿರುವುದರಿಂದ ತಮ್ಮ ವಿರುದ್ಧ ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು.
ಲೀಸ್ ಅವ್ಯವಹಾರಕ್ಕೆ ಎಸ್ಐಟಿ ತನಿಖೆ
ಎಲ್ಬಿಎಸ್ ಮಾರುಕಟ್ಟೆ ಪ್ರಾಂಗಣ ಹಾಗೂ ಜಲನಗರದ ವಾಣಿಜ್ಯ ಸಂಕೀರ್ಣಗಳ ಲೀಸ್ ನವೀಕರಣದಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ನಡೆದಿದೆ ಎಂಬ ಆರೋಪಗಳ ಕುರಿತು ಎಸ್ಐಟಿ ತನಿಖೆ ನಡೆಸಬೇಕು. ತನಿಖೆ ನಡೆದರೆ ಎಲ್ಲ ಸತ್ಯಾಂಶವೂ ಹೊರಬರಲಿದೆ ಎಂದು ರಜಪೂತ ಹೇಳಿದರು.
ಗೋಶಾಲೆ ಹೆಸರಿನಲ್ಲಿಯೂ ಹಣ ಸಂಗ್ರಹಿಸಲಾಗಿದೆ ಎಂದು ಆರೋಪಿಸಿದ ಅವರು, ಈ ವಿಚಾರದಲ್ಲಿ ತಾವು ಪ್ರಶ್ನಿಸಿದ್ದರಿಂದ ತಮ್ಮ ವಿರುದ್ಧ ಯತ್ನಾಳರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ನಗರದ ರಸ್ತೆ, ಕುಡಿಯುವ ನೀರು ಹಾಗೂ ಭೂಗತ ಕೇಬಲ್ ಸಮಸ್ಯೆಗಳತ್ತ ಶಾಸಕರು ಗಮನಹರಿಸಬೇಕು. ಸಮಸ್ಯೆ ಪರಿಹರಿಸುವ ಬದಲು ಟೀಕೆ, ಆರೋಪ ಹಾಗೂ ವೈಯಕ್ತಿಕ ವಾಗ್ದಾಳಿಯಲ್ಲೇ ತೊಡಗಿದ್ದಾರೆ ಎಂದು ಟೀಕಿಸಿದರು.
ರಚನೆಯೇ ಆಗದ ಜೆಸಿಬಿಗೆ ಅಭ್ಯರ್ಥಿಗಳನ್ನು ಘೋಷಿಸಿರುವುದು ಹಾಸ್ಯಾಸ್ಪದ. ಗಣೇಶೋತ್ಸವದ ವೇಳೆ ಘೋಷಣೆ ಮಾಡುವುದಾಗಿ ಹೇಳಿದ್ದರೂ ದಸರಾ ಬಂದರೂ ಘೋಷಣೆ ಮಾಡಿಲ್ಲ ಎಂದು ವ್ಯಂಗ್ಯವಾಡಿದರು.
ಯುವಕರು ಯತ್ನಾಳರ ಹಿಂದೆ ಹೋಗಿ ಪ್ರಕರಣಗಳಲ್ಲಿ ಸಿಲುಕಿಕೊಳ್ಳಬಾರದು. ತಮ್ಮ ಹೋರಾಟದಲ್ಲಿ ಯುವಕರನ್ನು ಬಳಸಿಕೊಳ್ಳಬಾರದು ಎಂದು ಸಲಹೆ ನೀಡಿದರು.
ವಿಜಯೇಂದ್ರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ
ಯತ್ನಾಳರು ತಮ್ಮ ತಂದೆಗೆ ಸೂಕ್ತ ಗೌರವ ನೀಡಿಲ್ಲ. ಹೀಗಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಬಗ್ಗೆ ಟೀಕಿಸುವ ನೈತಿಕ ಅರ್ಹತೆ ಅವರಿಗಿಲ್ಲ ಎಂದು ಪರಶುರಾಮಸಿಂಗ್ ರಜಪೂತ ಹೇಳಿದರು.
ವಿಜಯೇಂದ್ರ ಹಾಗೂ ಬಿ.ಎಸ್. ರಾಘವೇಂದ್ರ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಗೌರವದಿಂದ ನಡೆಸಿಕೊಳ್ಳುತ್ತಿರುವುದು ರಾಜ್ಯದ ಜನತೆಗೆ ತಿಳಿದಿದೆ. ತಂದೆಗೆ ಗೌರವ ನೀಡದ ವ್ಯಕ್ತಿಯಿಂದ ವಿಜಯೇಂದ್ರ ಅವರು ಪಾಠ ಕಲಿಯಬೇಕಿಲ್ಲ ಎಂದು ಹೇಳಿದರು.
ಗಾಣಿಗ ಸಮಾಜಕ್ಕೆ ಅಗೌರವ: ನಂದು ಗಡಗಿ
ಗಾಣಿಗ ಸಮುದಾಯದ ಕುರಿತು ಶಾಸಕ ಯತ್ನಾಳರು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಯುವ ಮುಖಂಡ ನಂದು ಗಡಗಿ ಆರೋಪಿಸಿದರು.
ಸಮುದಾಯದ ಕುರಿತು ಕೀಳುಮಟ್ಟದ ಪದ ಬಳಕೆ ಮಾಡಿರುವುದು ಖಂಡನೀಯ. ಯತ್ನಾಳರ ಸುತ್ತ ಕಮಿಷನ್ ಏಜೆಂಟರು ಸೇರಿಕೊಂಡಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ. ಹಿಂದೂ ಯುವಕರನ್ನು ದಾರಿ ತಪ್ಪಿಸುವ ಕೆಲಸ ಮಾಡಬಾರದು ಎಂದು ಅವರು ಹೇಳಿದರು.























