
ಕಲಬುರಗಿ,ಏ 18: ಬಸವ ಜಯಂತಿ ನಿಮಿತ್ತ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳುವ ರಸ್ತೆಯ ಬಲಬದಿಯಲ್ಲಿ ಅಳವಡಿಸಿದ್ದ ಬೃಹತ್ ಗಾತ್ರದ ಡಿಜಿಟಲ್ ಪರದೆ, ಕಣ್ಣು ಕೋರೈಸುವ ವಿದ್ಯುತ್ ದೀಪಗಳನ್ನು ಹೊತ್ತಿದ್ದ ಕಮಾನು ಶುಕ್ರವಾರ ಸಂಜೆ ಬೀಸಿದ ಗಾಳಿಗೆ ನೆಲಕ್ಕೆ ಉರುಳಿತು.ಯಾರಿಗೂ ಯಾವುದೇ ಗಾಯಗಳಾಗಿಲ್ಲ.
ಇದರಿಂದಾಗಿ ಜಗತ್ ವೃತ್ತದ ಕಡೆಗೆ ಹೋಗುವ, ಎಸ್‍ವಿಪಿ ವೃತ್ತದ ಕಡೆಗೆ ಬರುವ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಸ್ಥಳಕ್ಕೆ ಧಾವಿಸಿದ ಜೆಸ್ಕಾಂ ಸಿಬ್ಬಂದಿ ಬೀದಿ ದೀಪದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದರು. ಅಲ್ಲದೇ, ಮರಾಠಿ ಮಂಡಳ ಕಚೇರಿ ಎದುರಿನ ವೇದಿಕೆಯಲ್ಲಿ ಅಳವಡಿಸಿದ್ದ ಡಿಜಿಟಲ್ ಪರದೆಯನ್ನು ತೆರವುಗೊಳಿಸಿದರು.
ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದ ಕಡೆಗೆ ಜಿಲ್ಲಾಧಿಕಾರಿ ಕಚೇರಿಯಿಂದ ವಾಹನಗಳು ಬರದಂತೆ ಬ್ಯಾರಿಕೇಡ್ ಹಾಕಿ ನಿಯಂತ್ರಿಸಲಾಯಿತು. ಸ್ವಲ್ಪ ಹೊತ್ತಿನ ನಂತರ ಕ್ರೇನ್‍ನಿಂದ ಕಮಾನನ್ನು ಮೇಲೆತ್ತಲಾಯಿತು.

























