
ಕಲಬುರಗಿ,ನ.3-ಕರ್ನಾಟಕ ಸರ್ಕಾರವು ನಂದಿನಿ ಹಾಲಿನ ದರವನ್ನು ಹೆಚ್ಚಿಸಿರುವ ಬೆನ್ನಲ್ಲೇ ಬಸ್ ಪ್ರಯಾಣ ದರವನ್ನೂ ಹೆಚ್ಚಿಸಲು ಮುಂದಾಗಿರುವುದು ರಾಜ್ಯದ ಜನಸಾಮಾನ್ಯರ ಆರ್ಥಿಕ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮುವೀನ್ ಅಹಮದ್ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಅಗತ್ಯ ವಸ್ತುಗಳು, ಅಡುಗೆ ಅನಿಲ, ವಿದ್ಯುತ್ ಸೇರಿದಂತೆ ದಿನನಿತ್ಯದ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಹಾಲಿನ ದರ ಏರಿಕೆಯು ಬಡವರು ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಮತ್ತೊಂದು ಆರ್ಥಿಕ ಹೊರೆಯಾಗಿದೆ. ಹಾಲು ಪ್ರತಿಯೊಂದು ಕುಟುಂಬದ ದೈನಂದಿನ ಅಗತ್ಯವಾಗಿದ್ದು, ಮಕ್ಕಳ ಪೌಷ್ಟಿಕ ಆಹಾರದಿಂದ ಹಿಡಿದು ಚಹಾ ಅಂಗಡಿಗಳು, ಸಣ್ಣ ಹೋಟೆಲ್ಗಳು ಹಾಗೂ ಹಾಲಿನ ಉತ್ಪನ್ನಗಳ ಉದ್ಯಮದವರೆಗೂ ಇದರ ಪರಿಣಾಮ ಉಂಟಾಗಲಿದೆ. ಅದೇ ರೀತಿ, ಸಾರಿಗೆ ಸಚಿವರು ಬಸ್ ಪ್ರಯಾಣ ದರ ಹೆಚ್ಚಳದ ಕುರಿತು ನೀಡಿರುವ ಹೇಳಿಕೆಯೂ ಆತಂಕಕಾರಿಯಾಗಿದೆ. ದಿನಗೂಲಿ ಕಾರ್ಮಿಕರು, ಖಾಸಗಿ ಉದ್ಯೋಗಿಗಳು, ಸಣ್ಣ ವ್ಯಾಪಾರಿಗಳು, ವಿದ್ಯಾರ್ಥಿಗಳು ಹಾಗೂ ಪ್ರತಿನಿತ್ಯ ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಿರುವ ಕೆಳಮಧ್ಯಮ ವರ್ಗದ ಜನರು ಇದರಿಂದ ತೀವ್ರ ತೊಂದರೆ ಅನುಭವಿಸಲಿದ್ದಾರೆ. ಸಾರಿಗೆ ಸಂಸ್ಥೆಗಳ ಆರ್ಥಿಕ ನಿರ್ವಹಣೆಯಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಜವಾಬ್ದಾರಿಯನ್ನು ಸಂಪೂರ್ಣವಾಗಿ ಪ್ರಯಾಣಿಕರ ಮೇಲೆ ವರ್ಗಾಯಿಸುವುದು ಸರಿಯಲ್ಲ. ಸರ್ಕಾರವು ಅಗತ್ಯ ಅನುದಾನ ಒದಗಿಸಿ, ಬಸ್ ಪ್ರಯಾಣ ದರ ಹೆಚ್ಚಳದ ಪ್ರಸ್ತಾವನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನೊಂದೆಡೆ, ರಾಜ್ಯದ ಕಬ್ಬು ಬೆಳೆಗಾರರು ತಮ್ಮ ಉತ್ಪನ್ನಗಳಿಗೆ ಸೂಕ್ತ ಮತ್ತು ನ್ಯಾಯಯುತ ಬೆಲೆ ದೊರೆಯದೆ ಸಂಕಷ್ಟ ಎದುರಿಸುತ್ತಿದ್ದಾರೆ. ಕಬ್ಬು ಕಟಾವು, ಸಾಗಣೆ ಹಾಗೂ ಉತ್ಪಾದನಾ ವೆಚ್ಚಗಳು ನಿರಂತರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ಲಾಭದಾಯಕ ಬೆಲೆ ದೊರೆಯುವುದು ಅತ್ಯಗತ್ಯವಾಗಿದೆ. ಸಕ್ಕರೆ ಕಾರ್ಖಾನೆಗಳು ರೈತರಿಗೆ ಪಾವತಿಸಬೇಕಾದ ಬಾಕಿ ಹಣವನ್ನು ವಿಳಂಬವಿಲ್ಲದೆ ಪಾವತಿಸುವಂತೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ರೈತರ ಉತ್ಪಾದನಾ ವೆಚ್ಚ ಮತ್ತು ಶ್ರಮಕ್ಕೆ ತಕ್ಕಂತೆ ನ್ಯಾಯಯುತ ಬೆಲೆ ನಿಗದಿಪಡಿಸಿ ಅವರ ಹಿತಾಸಕ್ತಿಯನ್ನು ರಕ್ಷಿಸಬೇಕು. ಅದೇ ರೀತಿ, ರಾಜ್ಯದ ವಿವಿಧ ಭಾಗಗಳಲ್ಲಿ ಬರ ಪರಿಸ್ಥಿತಿಯಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಬೆಳೆ ನಷ್ಟ, ನೀರಿನ ಕೊರತೆ, ಜಾನುವಾರುಗಳಿಗೆ ಮೇವಿನ ಅಭಾವ ಹಾಗೂ ಕೃಷಿ ಸಾಲದ ಹೊರೆ ರೈತರ ಬದುಕನ್ನು ದುಸ್ತರಗೊಳಿಸಿದೆ. ಬರಪೀಡಿತ ಪ್ರದೇಶಗಳ ರೈತರಿಗೆ ಬೆಳೆ ನಷ್ಟ ಪರಿಹಾರವನ್ನು ವಿಳಂಬವಿಲ್ಲದೆ ತಕ್ಷಣ ಬಿಡುಗಡೆ ಮಾಡಬೇಕು. ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಮೂಲಕ ಗ್ರಾಮೀಣ ಜನರ ಬದುಕಿಗೆ ಸರ್ಕಾರ ಆಸರೆಯಾಗಬೇಕು. ಸರ್ಕಾರವು ಬೆಲೆ ಏರಿಕೆ ಮತ್ತು ಆದಾಯದ ಕುಸಿತದಿಂದ ಸಂಕಷ್ಟದಲ್ಲಿರುವ ಜನರ ವಾಸ್ತವಿಕ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ಒಂದೆಡೆ ಜನಸಾಮಾನ್ಯರು ಅಗತ್ಯ ವಸ್ತುಗಳ ಬೆಲೆ ಏರಿಕೆಯ ಹೊರೆ ಎದುರಿಸುತ್ತಿದ್ದರೆ, ಮತ್ತೊಂದೆಡೆ ರೈತರು ತಮ್ಮ ಬೆಳೆಗಳಿಗೆ ನ್ಯಾಯಯುತ ಬೆಲೆ ಹಾಗೂ ಬರ ಪರಿಹಾರಕ್ಕಾಗಿ ಕಾಯುವಂತಾಗಿದೆ. ಸರ್ಕಾರದ ಆದ್ಯತೆ ಜನರ ಮೇಲೆ ಆರ್ಥಿಕ ಹೊರೆ ಹೇರುವುದಾಗಿರದೆ, ರೈತರು, ಕಾರ್ಮಿಕರು, ಬಡವರು ಮತ್ತು ಮಧ್ಯಮ ವರ್ಗದವರ ಬದುಕಿಗೆ ಆರ್ಥಿಕ ಭದ್ರತೆ ಒದಗಿಸುವುದಾಗಿರಬೇಕು ಎಂದು ಒತ್ತಾಯಿಸಿದ್ದಾರೆ.























