Home ಜಿಲ್ಲೆ ಕಲಬುರಗಿ ರಾಜ್ಯಮಟ್ಟದ ಮಕ್ಕಳ ಹಕ್ಕುಗಳ ಸಂಸತ್‍ಗೆ ಮೀನಾಕ್ಷಿ, ಬಸಮ್ಮ ಆಯ್ಕೆ

ರಾಜ್ಯಮಟ್ಟದ ಮಕ್ಕಳ ಹಕ್ಕುಗಳ ಸಂಸತ್‍ಗೆ ಮೀನಾಕ್ಷಿ, ಬಸಮ್ಮ ಆಯ್ಕೆ

ಕಲಬುರಗಿ,ನ.3-ನಗರದ ಮದರ್ ತೆರೇಸಾ ಸಭಾಂಗಣ ಸೈನ್ಟ್ ಮೇರಿ ಚರ್ಚಿನಲ್ಲಿ ಸೋಮವಾರ ಜಿಲ್ಲಾಮಟ್ಟದ ಸಂಸತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಹಾನಗರ ಪಾಲಿಕೆ ಸದಸ್ಯೆ ಹಾಗೂ ಮಹಿಳಾ ಕಾಂಗ್ರೆಸ್ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷರಾದ ಲತಾ ರವಿ ರಾಠೋಡ್ ಅವರು ನೆರವೇರಿಸಿ ತಾವು ನಡೆದು ಬಂದ ದಾರಿ ಮತ್ತು ಮಹಿಳೆಯಾಗಿ ಶಿಕ್ಷಣವನ್ನು ಯಾವ ರೀತಿ ಪಡೆದುಕೊಂಡರು ಮತ್ತು ಮಹಿಳೆ ಶಿಕ್ಷಣ ಪಡೆದುಕೊಂಡರೆ ಏನೆಲ್ಲ ಸಾಧಿಸಬಹುದು ಎಂಬುದರ ಕುರಿತು ಸವಿಸ್ತಾರವಾಗಿ ಹೆಣ್ಣು ಮಕ್ಕಳಿಗೆ ಆತ್ಮಸ್ಥೈರ್ಯವನ್ನು ತುಂಬುವ ನಿಟ್ಟಿನಲ್ಲಿ ಮಾತನಾಡಿದರು.
ಸೇಂಟ್ ಮೇರಿ ಚರ್ಚ್ ದೈವಾನುಗ್ರಹ ಮಾತೆ ಮಹಾದೇವಾಲಯದ ಮಹಾಗುರುಗಳಾದ ಹಾಗೂ ಪ್ರಾಂಶುಪಾಲರಾದ ಫಾದರ್ ಪ್ರವೀಣ್ ಜೋಸೆಫ್ ಅವರು ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ್ದರು. ಮತ್ತೋರ್ವ ಅತಿಥಿಗಳಾಗಿ ಆಗಮಿಸಿದ ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಸೂರ್ಯಕಾಂತ್ ಜಮಖಂಡಿ ಅವರು ಮಕ್ಕಳಿಗೆ ಶಿಕ್ಷಣದ ಕುರಿತು ವಿವರವಾಗಿ ತಿಳಿಸಿದ್ದಲ್ಲದೆ ಮಕ್ಕಳು ಯಾವುದೇ ಕಾರಣಕ್ಕೂ ಶಾಲೆಯಿಂದ ಹೊರಗೂಳಿಯಬಾರದು ಮಕ್ಕಳಿಗೆ ಶಿಕ್ಷಣ ಅಮೂಲ್ಯವಾದ ಅಸ್ತ್ರ ಎಂಬುದನ್ನು ವಿವರಿಸಿದರು. ಅದೇ ರೀತಿಯಾಗಿ ಇನ್ನೋರ್ವ ಅತಿಥಿಯಾದಂತ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ವಿಶ್ವರಾಧ ಇಜೇರಿ ಅವರು ಮಾತನಾಡಿ ಮಕ್ಕಳು ಮಕ್ಕಳಾಗಿ ಇರುತ್ತಾರೆ ಅವರಿಗೆ ಬದುಕುವ ಹಕ್ಕು ಭಾಗವಹಿಸುವ ಹಕ್ಕು ರಕ್ಷಣೆಯ ಹಕ್ಕು ವಿಕಾಸ ಒಂದು ಹಕ್ಕಿನ ಕುರಿತು ಸವಿಸ್ತಾರವಾದ ಮಕ್ಕಳ ಹಕ್ಕುಗಳ ಬಗ್ಗೆ ಕುರಿತು ತಿಳಿಸಿದರು. ಮಾರ್ಗದರ್ಶಿ ಸಂಸ್ಥೆ ನಿರ್ದೇಶಕ ಆನಂದರಾಜ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಈ ಮಕ್ಕಳ ಸಂಸತ್ತು ಯಾವ ರೀತಿಯಿಂದ ನಡೆಯುತ್ತದೆ ಮತ್ತು ಈ ಜಿಲ್ಲಾಮಟ್ಟದ ಮಕ್ಕಳ ಸಂಸತ್ 2026ರ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ಮಾಡಲು ಅವಕಾಶ ದೊರಕುವುದಾಗಿ ತಿಳಿಸಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಭರತೇಶ ಶೀಲವಂತ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಎನ್‍ಐಸಿಯು ಬಸವರಾಜ್, ಡಾನ್ ಬಾಸ್ಕೋ ಸಂಸ್ಥೆ ಸಹ ನಿರ್ದೇಶಕಿ ಗೀತಾ, ಸಮಾಜ ಸೇವಕ ಸಂತೋಷ್ ಕುಮಾರ್ ತೀರ್ಪುಗಾರರಾಗಿದ್ದರು.
ಮಿಣಜಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಕುಮಾರಿ ಮೀನಾಕ್ಷಿ, ಸರಕಾರಿ ಬಾಲಕಿಯರ ಬಾಲಮಂದಿರದ ಕುಮಾರಿ ಬಸಮ್ಮ ಅವರು ಜಿಲ್ಲಾ ಮಟ್ಟದದಿಂದ ರಾಜ್ಯ ಮಟ್ಟದ ಮಕ್ಕಳ ಹಕ್ಕುಗಳ ಸಂಸತ್ 2026 ಕ್ಕೆ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರಿ ಬಾಲಕರ ಪರಿವೀಕ್ಷಣ ನಿಲಯದ ಅಧೀಕ್ಷಕರು ಹಾಗೂ ಪ್ರಭಾರಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಮಕ್ಕಳ ಸಹಾಯವಾಣಿ ಸಂಯೋಕ ಬಸವರಾಜ್ ತೆಂಗಳಿ, ಮಕ್ಕಳ ಸಹಾಯವಾಣಿ ಆಪ್ತಸಮಾಲೋಚಕ ಮಲ್ಲಯ್ಯ ಗುತ್ತೇದಾರ್ ಮತ್ತು ಜಿಲ್ಲೆಯ ವಿವಿಧ ಸರಕಾರಿ ಶಾಲೆಯ ಮಕ್ಕಳು ಸರ್ಕಾರಿ ಬಾಲಕಿಯರ ಬಾಲ ಮಂದಿರದ ಮಕ್ಕಳು ಹಾಗೂ ವಿವಿಧ ಶಾಲೆಯ ಶಿಕ್ಷಕ ವೃಂದದವರು ಮಾರ್ಗದರ್ಶಿ ಸಂಸ್ಥೆಯ ಸಿಬ್ಬಂದಿಯವರು ಭಾಗವಹಿಸಿದ್ದರು. ಮಾರ್ಗದರ್ಶಿ ಸಂಸ್ಥೆ ಸಂಯೋಜಕರಾದ ಶೀತಲ್ ಅವರು ಸ್ವಾಗತಿಸಿದರು. ಕುಮಾರಿ ಪ್ರಿಯಾಂಕಾ ಕಾರ್ಯಕ್ರಮ ನಿರೂಪಣೆಯನ್ನು ಮಾಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಮಕ್ಕಳಿಗೂ ಪ್ರಶಸ್ತಿ ಪತ್ರವನ್ನು ವಿತರಣೆ ಮಾಡಲಾಯಿತು.