Home ಜಿಲ್ಲೆ ಕಲಬುರಗಿ ಆಂಧ್ರಪ್ರದೇಶದ ವಿದ್ಯುತ್‍ಜಾಲ ದುರಸ್ತಿಗೆ ಜೆಸ್ಕಾಂ ಸಾಥ್

ಆಂಧ್ರಪ್ರದೇಶದ ವಿದ್ಯುತ್‍ಜಾಲ ದುರಸ್ತಿಗೆ ಜೆಸ್ಕಾಂ ಸಾಥ್

ಕಲಬುರಗಿ, ನ.3: ಆಂಧ್ರಪ್ರದೇಶದಲ್ಲಿ ಅರ್ನಬ್ ಚಂಡಮಾರುತದಿಂದ ಹಾನಿಗೊಳಗಾಗಿರುವ ವಿದ್ಯುತ್ ಜಾಲವನ್ನು ತ್ವರಿತವಾಗಿ ಪುನರ್‍ಸ್ಥಾಪಿಸುವ ಕಾರ್ಯಕ್ಕೆ ನೆರವಾಗಲು ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ (ಜೆಸ್ಕಾಂ) ವತಿಯಿಂದ 15 ಅಧಿಕಾರಿಗಳು ಹಾಗೂ 100 ಸಿಬ್ಬಂದಿಯ ತಂಡವನ್ನು ಸೋಮವಾರ ಆಂಧ್ರಪ್ರದೇಶಕ್ಕೆ ಕಳುಹಿಸಿಕೊಡಲಾಗಿದೆ.
ರಾಜ್ಯ ಸರ್ಕಾರದ ಆದೇಶದಂತೆ, ಜೆಸ್ಕಾಂ ಅಧ್ಯಕ್ಷರಾದ ಪ್ರವೀಣ್ ಪಾಟೀಲ್ ಹರವಾಳ ಅವರ ನೇತೃತ್ವದಲ್ಲಿ ಈ ಕಾರ್ಯ ಕೈಗೊಳ್ಳಲಾಗಿದ್ದು, ವಿದ್ಯುತ್ ಜಾಲದ ದುರಸ್ತಿ ಹಾಗೂ ಪುನರ್‍ಸ್ಥಾಪನೆಗೆ ಅಧಿಕಾರಿಗಳು ಮತ್ತು ಸಿಬ್ಬಂದಿಯ ಜತೆಗೆ ಕ್ರೇನ್ ಅಳವಡಿಸಿದ ಲಾರಿ, ಟ್ರ್ಯಾಕ್ಟರ್ ಡ್ರಿಲಿಂಗ್ ಮಷಿನ್ ಮತ್ತು ಅಗತ್ಯವಿರುವ ವಿವಿಧ ಸಾಮಗ್ರಿಗಳನ್ನು ಕಳುಹಿಸಲಾಗಿದೆ.
ಚಂಡಮಾರುತದಿಂದ ಹಾನಿಗೊಳಗಾಗಿರುವ ವಿದ್ಯುತ್ ಕಂಬಗಳು, ತಂತಿಗಳು ಹಾಗೂ ಇತರ ವಿದ್ಯುತ್ ಮೂಲಸೌಕರ್ಯಗಳ ದುರಸ್ತಿ ಕಾರ್ಯದಲ್ಲಿ ಈ ತಂಡ ತೊಡಗಿಸಿಕೊಳ್ಳಲಿದೆ. ಇದರಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯನ್ನು ಶೀಘ್ರವಾಗಿ ಪುನಾರಂಭಿಸಲು ಸಹಕಾರಿಯಾಗಲಿದೆ.
ಈ ಹಿಂದೆ ಒಡಿಶಾ ರಾಜ್ಯದಲ್ಲಿಯೂ ಚಂಡಮಾರುತದಿಂದ ವಿದ್ಯುತ್ ಮೂಲಸೌಕರ್ಯ ಹಾನಿಯಾದ ಸಂದರ್ಭದಲ್ಲಿ ಜೆಸ್ಕಾಂ ವತಿಯಿಂದ ಅಗತ್ಯ ನೆರವು ನೀಡಲಾಗಿತ್ತು. ಪ್ರಕೃತಿ ವಿಕೋಪಗಳಂತಹ ತುರ್ತು ಸಂದರ್ಭಗಳಲ್ಲಿ ಮಾನವೀಯ ನೆಲೆಯಲ್ಲಿ ಇತರ ರಾಜ್ಯಗಳ ವಿದ್ಯುತ್ ವ್ಯವಸ್ಥೆಯ ಪುನರ್‍ಸ್ಥಾಪನೆಗೆ ಜೆಸ್ಕಾಂ ಸದಾ ಸಹಕಾರ ನೀಡುತ್ತದೆ ಎಂದು ಜೆಸ್ಕಾಂ ಅಧ್ಯಕ್ಷರಾದ ಪ್ರವೀಣ್ ಪಾಟೀಲ್ ಹರವಾಳ ಅವರು ತಿಳಿಸಿದ್ದಾರೆ.