Home ಕ್ರೈಂ ಸುದ್ದಿಗಳು 9.43 ಕೋಟಿ ಮೌಲ್ಯದ ಸ್ವತ್ತು, ಸೈಬರ್ ವಂಚನೆ ಹಣ ಸಂತ್ರಸ್ತರಿಗೆ ಮರುಪಾವತಿ

9.43 ಕೋಟಿ ಮೌಲ್ಯದ ಸ್ವತ್ತು, ಸೈಬರ್ ವಂಚನೆ ಹಣ ಸಂತ್ರಸ್ತರಿಗೆ ಮರುಪಾವತಿ

ವಿಜಯಪುರ, ನ. 3: ವಿಜಯಪುರ ಜಿಲ್ಲಾ ಪೆÇಲೀಸರು ವಿವಿಧ ಸ್ವತ್ತಿನ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಚಿನ್ನ, ಬೆಳ್ಳಿ, ನಗದು, ವಾಹನಗಳು ಸೇರಿದಂತೆ ಒಟ್ಟು 5.23 ಕೋಟಿ ಮೌಲ್ಯದ ಸ್ವತ್ತನ್ನು ಕಾನೂನುಬದ್ಧ ಮಾಲೀಕರಿಗೆ ಹಿಂದಿರುಗಿಸಲು ಕ್ರಮ ಕೈಗೊಂಡಿದ್ದು, ಸೈಬರ್ ವಂಚನೆ ಪ್ರಕರಣಗಳಲ್ಲಿ ವಂಚನೆಗೊಳಗಾದ 4.19 ಕೋಟಿ ಹಣವನ್ನು ಪತ್ತೆಹಚ್ಚಿ ಸಂತ್ರಸ್ತರಿಗೆ ಮರುಪಾವತಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೆÇಲೀಸ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಅಪರಾಧ ಮುಕ್ತ ವಾತಾವರಣ ನಿರ್ಮಿಸುವ ಉದ್ದೇಶದಿಂದ ಜಿಲ್ಲಾ ಪೆÇಲೀಸ್ ಇಲಾಖೆ ಕೈಗೊಂಡಿರುವ ಜನಸ್ನೇಹಿ ಹಾಗೂ ಅಪರಾಧ ತಡೆ ಕಾರ್ಯಾಚರಣೆಗಳ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

5.23 ಕೋಟಿ ಮೌಲ್ಯದ ಸ್ವತ್ತು ವಶ

2026ರ ಫೆ. 11ರಿಂದ ನ. 1ರವರೆಗೆ ಜಿಲ್ಲೆಯ ವಿವಿಧ ಪೆÇಲೀಸ್ ಠಾಣೆಗಳಲ್ಲಿ ದಾಖಲಾದ ಸುಮಾರು 115 ಸ್ವತ್ತಿನ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಿ, ಅವರಿಂದ 5,23,66,285 ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡ ಸ್ವತ್ತಿನಲ್ಲಿ 1.794 ಕೆಜಿ ಚಿನ್ನ (39,99,250), 8.919 ಕೆಜಿ ಬೆಳ್ಳಿ (21,08,000), 1,35,99,250 ನಗದು, 46 ದ್ವಿಚಕ್ರ ವಾಹನಗಳು (21,12,000), 16 ನಾಲ್ಕುಚಕ್ರ ವಾಹನಗಳು (1,26,01,533) ಹಾಗೂ ಪಂಪ್‍ಸೆಟ್, ಬ್ಯಾಟರಿ, ನಾಲ್ಕು ಕ್ವಿಂಟಾಲ್ ಹತ್ತಿ ಸೇರಿದಂತೆ 3,35,000 ಮೌಲ್ಯದ ಇತರೆ ವಸ್ತುಗಳು ಸೇರಿವೆ.
ನ್ಯಾಯಾಲಯದ ಆದೇಶದಂತೆ ಸಂಬಂಧಪಟ್ಟ ದೂರುದಾರರು ಹಾಗೂ ಕಾನೂನುಬದ್ಧ ಮಾಲೀಕರಿಗೆ ಈ ಸ್ವತ್ತುಗಳನ್ನು ಹಿಂದಿರುಗಿಸಲು ಕ್ರಮ ಕೈಗೊಳ್ಳಲಾಗಿದೆ. ಆರೋಪಿಗಳನ್ನು ಪತ್ತೆಹಚ್ಚಿ ಸ್ವತ್ತು ಮತ್ತು ಹಣ ವಶಪಡಿಸಿಕೊಳ್ಳುವಲ್ಲಿ ಪೆÇಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಗಲಿರುಳು ಶ್ರಮಿಸಿದ್ದಾರೆ ಎಂದು ತಿಳಿಸಿದರು.

4.19 ಕೋಟಿ ಸೈಬರ್ ವಂಚನೆ ಹಣ ವಾಪಸ್

ಇತ್ತೀಚಿನ ದಿನಗಳಲ್ಲಿ ಯುಪಿಐ, ಕ್ಯೂಆರ್ ಕೋಡ್, ಡಿಜಿಟಲ್ ಅರೆಸ್ಟ್, ನಕಲಿ ಹೂಡಿಕೆ ಮತ್ತು ಷೇರು ಮಾರುಕಟ್ಟೆ, ಆನ್‍ಲೈನ್ ಟಾಸ್ಕ್ ಹಾಗೂ ಉದ್ಯೋಗ, ನಕಲಿ ಗ್ರಾಹಕ ಸೇವಾ ಕೇಂದ್ರ, ಸಾಮಾಜಿಕ ಜಾಲತಾಣಗಳ ನಕಲಿ ಖಾತೆ, ಒಟಿಪಿ ಕಳವು ಮತ್ತು ಸಿಮ್ ಸ್ವಾಪ್ ಸೇರಿದಂತೆ ವಿವಿಧ ರೀತಿಯ ಸೈಬರ್ ವಂಚನೆಗಳು ಹೆಚ್ಚಾಗುತ್ತಿವೆ.
ಅಕ್ಟೋಬರ್ ತಿಂಗಳನ್ನು ‘ಸೈಬರ್ ಅವೇರನೆಸ್ ಮಾಸ’ ಆಗಿ ಆಚರಿಸಿ ಜಿಲ್ಲೆಯಾದ್ಯಂತ ಪೆÇಲೀಸ್ ಠಾಣೆಗಳ ಮೂಲಕ ಸಾರ್ವಜನಿಕರಲ್ಲಿ ಸೈಬರ್ ಅಪರಾಧಗಳ ಕುರಿತು ಜಾಗೃತಿ ಮೂಡಿಸಲಾಗಿದೆ ಎಂದು ಹೇಳಿದರು.
ವಿಜಯಪುರ ಸೈಬರ್ ಕ್ರೈಂ ಪೆÇಲೀಸ್ ಠಾಣೆಯ ಸಿಬ್ಬಂದಿ ಸುಮಾರು 20 ಸೈಬರ್ ವಂಚನೆ ಪ್ರಕರಣಗಳಲ್ಲಿ ಒಟ್ಟು 4,19,68,162 ಹಣವನ್ನು ಪತ್ತೆಹಚ್ಚಿ ಸಂತ್ರಸ್ತರಿಗೆ ಮರುಪಾವತಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ವತ್ತಿನ ಪ್ರಕರಣಗಳು ಮತ್ತು ಸೈಬರ್ ವಂಚನೆ ಪ್ರಕರಣಗಳಲ್ಲಿ ಒಟ್ಟಾರೆ 9,43,34,447 ಮೌಲ್ಯದ ಚಿನ್ನ, ಬೆಳ್ಳಿ, ನಗದು ಹಾಗೂ ಇತರೆ ವಸ್ತುಗಳನ್ನು ಪತ್ತೆಹಚ್ಚಿ ಸಂತ್ರಸ್ತರಿಗೆ ಮರಳಿಸುವಲ್ಲಿ ವಿಜಯಪುರ ಜಿಲ್ಲಾ ಪೆÇಲೀಸರು ಯಶಸ್ವಿಯಾಗಿದ್ದಾರೆ.
ಸೈಬರ್ ವಂಚನೆಗೆ ಒಳಗಾದವರು ತಕ್ಷಣವೇ 1930 ಸಹಾಯವಾಣಿಗೆ ಕರೆ ಮಾಡಬೇಕು ಅಥವಾ www.cybercrime.gov.in ಮೂಲಕ ದೂರು ದಾಖಲಿಸಬೇಕು ಎಂದು ಅವರು ತಿಳಿಸಿದ್ದಾರೆ.

ಶಾಲಾ-ಕಾಲೇಜುಗಳಲ್ಲಿ ದೂರು ಪೆಟ್ಟಿಗೆ

ಯುವಜನರನ್ನು ಮಾದಕ ವ್ಯಸನ ಹಾಗೂ ಅಪರಾಧ ಚಟುವಟಿಕೆಗಳಿಂದ ದೂರವಿಡುವ ಉದ್ದೇಶದಿಂದ ಕರ್ನಾಟಕ ಸರ್ಕಾರದ ‘Operation RISE’ ಹಾಗೂ ‘#BedaBro’ ಅಭಿಯಾನದ ಭಾಗವಾಗಿ ಜಿಲ್ಲೆಯ ಪ್ರೌಢಶಾಲೆ, ಪಿಯು ಹಾಗೂ ಪದವಿ ಕಾಲೇಜುಗಳು ಮತ್ತು ವಿದ್ಯಾರ್ಥಿ ವಸತಿನಿಲಯಗಳಲ್ಲಿ ‘Complaint Box’ ಅಳವಡಿಸುವ ಕಾರ್ಯಕ್ರಮ ಕೈಗೊಳ್ಳಲಾಗಿದೆ.
ಈ ದೂರು ಪೆಟ್ಟಿಗೆಗಳ ಮೂಲಕ ಮಾದಕ ದ್ರವ್ಯಗಳ ಬಳಕೆ, ಮಾರಾಟ ಮತ್ತು ಸಾಗಾಟ, ರ್ಯಾಗಿಂಗ್, ಲೈಂಗಿಕ ಕಿರುಕುಳ ಹಾಗೂ ದೌರ್ಜನ್ಯ, ಸೈಬರ್ ಅಪರಾಧಗಳು ಮತ್ತು ಇತರೆ ಸಂಘಟಿತ ಅಪರಾಧ ಚಟುವಟಿಕೆಗಳ ಕುರಿತು ವಿದ್ಯಾರ್ಥಿಗಳು ದೂರು ನೀಡಬಹುದಾಗಿದೆ.
ದೂರು ನೀಡುವ ವಿದ್ಯಾರ್ಥಿಗಳ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು. ಪ್ರತಿ 15 ದಿನಗಳಿಗೊಮ್ಮೆ ಬೀಟ್ ಸಿಬ್ಬಂದಿ ಪ್ರಾಂಶುಪಾಲರನ್ನು ಭೇಟಿ ಮಾಡಿ ದೂರು ಪೆಟ್ಟಿಗೆ ಪರಿಶೀಲಿಸಲಿದ್ದು, ಅಗತ್ಯವಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳು ಯಾವುದೇ ಭಯ ಅಥವಾ ಹಿಂಜರಿಕೆಯಿಲ್ಲದೆ ತಮ್ಮ ಸಮಸ್ಯೆಗಳನ್ನು ಗೌಪ್ಯವಾಗಿ ಹಂಚಿಕೊಳ್ಳಲು ಈ ವ್ಯವಸ್ಥೆ ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.