Home ಜಿಲ್ಲೆ ಕಲಬುರಗಿ ಸಂಗೊಳಗಿ ಸಿ ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಪೂರ್ಣಗೊಳಿಸಲು ಆಗ್ರಹಬಾಕಿ ಕಾಮಗಾರಿ ಮುಗಿಸಲು ಎಇಇ ಸಂಗಮೇಶ ಅವರಿಗೆ...

ಸಂಗೊಳಗಿ ಸಿ ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಪೂರ್ಣಗೊಳಿಸಲು ಆಗ್ರಹಬಾಕಿ ಕಾಮಗಾರಿ ಮುಗಿಸಲು ಎಇಇ ಸಂಗಮೇಶ ಅವರಿಗೆ ಒಂದು ವಾರದ ಗಡುವು

ಕಲಬುರಗಿ,ಅ.16-ಆಳಂದ ತಾಲ್ಲೂಕಿನ ಸಂಗೊಳಗಿ (ಸಿ) ಗ್ರಾಮದಲ್ಲಿ ನಡೆಯುತ್ತಿರುವ ಜಲ ಜೀವನ್ ಮಿಷನ್ (ಜೆಜೆಎಂ) ಕಾಮಗಾರಿ ವಿಳಂಬವಾಗಿದ್ದು, ರಸ್ತೆಗಳಲ್ಲಿ ತೋಡಿರುವ ಗುಂಡಿಗಳನ್ನು ಮುಚ್ಚದೆ ಹಾಗೂ ಅಗತ್ಯ ಸ್ಥಳಗಳಲ್ಲಿ ನೀರು ಪೂರೈಕೆ ವ್ಯವಸ್ಥೆ ಮಾಡದಿರುವುದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.
ಕಾಮಗಾರಿ ಅಪೂರ್ಣವಾಗಿರುವುದರಿಂದ ಕುಡಿಯುವ ನೀರಿನ ಸೌಲಭ್ಯ ಹಾಗೂ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳಿಂದ ವಾಹನ ಸವಾರರು, ಪಾದಚಾರಿಗಳು ಮತ್ತು ಶಾಲಾ ಮಕ್ಕಳು ಸಂಚರಿಸಲು ತೊಂದರೆಯಾಗುತ್ತಿದೆ.
ಈ ಕುರಿತು ದಲಿತ ಸೇನೆ ವಿದ್ಯಾರ್ಥಿ ಒಕ್ಕೂಟದ ವಿಭಾಗೀಯ ಅಧ್ಯಕ್ಷ ಕಪಿಲ ಜೆ. ವಾಲಿ ಅವರು, ಜೆಜೆಎಂ ಇಲಾಖೆಯ ಎಇಇ ಸಂಗಮೇಶ ಅವರನ್ನು ಸಂಪರ್ಕಿಸಿ ಕಾಮಗಾರಿ ವಿಳಂಬದ ಬಗ್ಗೆ ಚರ್ಚಿಸಿದರು. ಬಾಕಿ ಉಳಿದಿರುವ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವುದು, ರಸ್ತೆ ಗುಂಡಿಗಳನ್ನು ಮುಚ್ಚುವುದು ಹಾಗೂ ಅಗತ್ಯ ಸ್ಥಳಗಳಲ್ಲಿ ನೀರು ಪೂರೈಕೆ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದರು.
ಸಾರ್ವಜನಿಕರಿಗೆ ತೊಂದರೆಯಾಗದಂತೆ ಗುಣಮಟ್ಟದ ಕಾಮಗಾರಿ ಕೈಗೊಂಡು, ಒಂದು ವಾರದೊಳಗೆ ಬಾಕಿ ಕೆಲಸವನ್ನು ಸಂಪೂರ್ಣವಾಗಿ ಮುಗಿಸಬೇಕು ಎಂದು ಗಡುವು ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಇಇ ಸಂಗಮೇಶ ಅವರು, ಒಂದು ವಾರದೊಳಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು.
ಅಧಿಕಾರಿಗಳು ನೀಡಿದ ಭರವಸೆಯಂತೆ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಗ್ರಾಮಸ್ಥರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು ಎಂದು ಕಪಿಲ ಜೆ. ವಾಲಿ ಆಗ್ರಹಿಸಿದ್ದಾರೆ.