Home ಜಿಲ್ಲೆ ವಿಜಯಪುರದಲ್ಲಿ ಹಜ್ ಭವನ ನಿರ್ಮಾಣಕ್ಕೆ ಒತ್ತಾಯ

ವಿಜಯಪುರದಲ್ಲಿ ಹಜ್ ಭವನ ನಿರ್ಮಾಣಕ್ಕೆ ಒತ್ತಾಯ

ವಿಜಯಪುರ, ಅ. 16: ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಿಂದ ಹಜ್ ಮತ್ತು ಉಮರಾ ಯಾತ್ರೆಗೆ ತೆರಳುವ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ವಿಜಯಪುರದಲ್ಲಿ ಹಜ್ ಭವನ ನಿರ್ಮಿಸಬೇಕು ಎಂದು ವಿಜಯಪುರ ಹಜ್ ಭವನ ನಿರ್ಮಾಣ ಹಾಗೂ ಅಲ್ಪಸಂಖ್ಯಾತ ಸಮಿತಿ ಅಧ್ಯಕ್ಷ ಯಾಕೂಬ್ ನಾಟೀಕಾರ ಒತ್ತಾಯಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ಜಿಲ್ಲೆಗಳಿಂದ ಪ್ರತಿವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಹಜ್ ಹಾಗೂ ಉಮರಾ ಯಾತ್ರೆ ಕೈಗೊಳ್ಳುತ್ತಾರೆ. ಹಜ್ ಯಾತ್ರೆಗೆ ಸಂಬಂಧಿಸಿದ ತರಬೇತಿ, ಲಸಿಕೆ ಸೇರಿದಂತೆ ವಿವಿಧ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಬೆಂಗಳೂರಿಗೆ ತೆರಳಬೇಕಾಗಿರುವುದರಿಂದ ಯಾತ್ರಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿಜಯಪುರದಲ್ಲಿಯೇ ಹಜ್ ಭವನ ನಿರ್ಮಿಸಿದರೆ ಯಾತ್ರಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಕಲಬುರಗಿ, ಮಂಗಳೂರು ಹಾಗೂ ಬೀದರ್ ಜಿಲ್ಲೆಗಳಲ್ಲಿ ಹಜ್ ಭವನ ನಿರ್ಮಾಣಕ್ಕೆ ಈಗಾಗಲೇ ಮಂಜೂರಾತಿ ದೊರೆತಿದೆ. ಇದೇ ಮಾದರಿಯಲ್ಲಿ ವಿಜಯಪುರದಲ್ಲೂ ಹಜ್ ಭವನ ನಿರ್ಮಾಣಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಚಿಂತಕ ಡಾ. ಎಂ.ಎಸ್. ಮುಜಾವರ ಮಾತನಾಡಿ, ವಿಜಯಪುರ ವಿಮಾನ ನಿಲ್ದಾಣದ ಸಮೀಪ ಹಜ್ ಭವನ ನಿರ್ಮಾಣಕ್ಕೆ ಸೂಕ್ತ ಜಮೀನು ಲಭ್ಯವಿದ್ದು, ಅಲ್ಲಿ ಭವನ ನಿರ್ಮಾಣಕ್ಕೆ ಜಾಗ ಒದಗಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.
ಸರ್ಫರಾಜ್ ಮಿರ್ದೆ ಮಾತನಾಡಿ, ಹಜ್ ಭವನ ನಿರ್ಮಾಣದ ಕುರಿತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಸಚಿವ ಯು.ಟಿ. ಖಾದರ್ ಅವರಿಗೆ ಸಮಿತಿ ವತಿಯಿಂದ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಈ ಬೇಡಿಕೆಗೆ ಸರ್ಕಾರದ ಗಮನ ಸೆಳೆಯಲು ಸಮಿತಿಯನ್ನು ನೋಂದಣಿ ಮಾಡಲಾಗಿದೆ. ಹಜ್ ಭವನದ ಜತೆಗೆ ಅಲ್ಪಸಂಖ್ಯಾತ ಭವನ ನಿರ್ಮಾಣವಾದರೆ ಸಮುದಾಯದ ಯುವಕರ ಶ್ರೇಯೋಭಿವೃದ್ಧಿಗೆ ಸಂಬಂಧಿಸಿದ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಅನುಕೂಲವಾಗಲಿದೆ ಎಂದರು.
ಎಂ.ಎಂ. ಮುಲ್ಲಾ, ಆಸೀಫ್ ಬಾಗವಾನ, ಸಂಘಟನಾ ಕಾರ್ಯದರ್ಶಿ ಮಹಮ್ಮದ್ ಯಾಕೂಬ್ ಮದ್ನಾಳ, ಅಬೂಬಕರ ಮನಿಯಾರ, ಶಫೀಯುರ್ ರೆಹಮಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.