
ನವದೆಹಲಿ, ಜು. ೧೩-ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಇತ್ತೀಚಿನ ವಿದೇಶಿ ಪ್ರವಾಸದ ಕುರಿತು ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷ ಕಾಂಗ್ರೆಸ್ ನಡುವೆ ರಾಷ್ಟ್ರೀಯ ಮಟ್ಟದಲ್ಲಿ ತೀವ್ರ ವಾಗ್ದಾಳಿ ಆರಂಭವಾಗಿದ್ದು, ಹೊಸ ರಾಜಕೀಯ ಸಂಘರ್ಷಕ್ಕೆ ನಾಂದಿ ಹಾಡಿದೆ.
ರಾಹುಲ್ ಗಾಂಧಿ ಅವರ ಪ್ರವಾಸದ ಹಿಂದೆ ಇರುವ ’ರಹಸ್ಯ’ವೇನು ಎಂದು ಬಿಜೆಪಿ ಬಹಿರಂಗವಾಗಿ ಪ್ರಶ್ನಿಸಿದೆ. ಇಂದು ನಡೆದ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ, ರಾಹುಲ್ ಗಾಂಧಿ ಅವರು ಯುರೋಪ್ ಪ್ರವಾಸ ಮುಗಿಸಿ ವಾಪಸಾಗುತ್ತಿರುವ ದೃಶ್ಯಗಳನ್ನು ಮುಂದಿಟ್ಟುಕೊಂಡು ಬಿಜೆಪಿ ವಾಗ್ದಾಳಿ ನಡೆಸಿದೆ.
“ರಾಹುಲ್ ಗಾಂಧಿ ಅವರು ಯುರೋಪ್ಗೆ ಏಕೆ ಹೋಗಿದ್ದರು ಅಲ್ಲಿ ಅವರು ಯಾರನ್ನು ಭೇಟಿಯಾದರು ಅವರ ಭೇಟಿಯ ಹಿಂದಿನ ನಿಜವಾದ ಉದ್ದೇಶವೇನು” ಎಂಬ ಸಾಲು ಸಾಲು ಪ್ರಶ್ನೆಗಳನ್ನು ಬಿಜೆಪಿ ಮುನ್ನೆಲೆಗೆ ತಂದಿದೆ. ಈ ಭೇಟಿಯ ಸಂಪೂರ್ಣ ವಿವರಗಳನ್ನು ದೇಶದ ಜನತೆಯ ಮುಂದೆ ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ನಾಯಕರು ಕಟುವಾಗಿ ಆಗ್ರಹಿಸಿದ್ದಾರೆ.
ಇದೇ ವೇಳೆ ವಿವಾದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪಕ್ಷದ ಆಂತರಿಕ ಮೂಲಗಳು, ರಾಹುಲ್ ಗಾಂಧಿ ಅವರು ಯುರೋಪ್ ಪ್ರವಾಸದಲ್ಲಿದ್ದದ್ದು ನಿಜ. ಆದರೆ ಅದು ಸಂಪೂರ್ಣ ವೈಯಕ್ತಿಕ ಹಾಗೂ ಪೂರ್ವ ನಿರ್ಧರಿತ ಭೇಟಿಯಾಗಿತ್ತು ಎಂದು ಸ್ಪಷ್ಟಪಡಿಸಿವೆ.
ರಾಷ್ಟ್ರೀಯ ಸುದ್ದಿ ವಾಹಿನಿಯ ನೇರಪ್ರಸಾರದ ಚರ್ಚೆಯಲ್ಲಿ ಭಾಗವಹಿಸಿ ಬಿಜೆಪಿಯ ಆರೋಪಗಳಿಗೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಕಾಂಗ್ರೆಸ್ ವಕ್ತಾರ ಅತುಲ್ ಲೋಂಧೆ ಪಾಟೀಲ್, ಬಿಜೆಪಿಯ ತಂತ್ರಗಾರಿಕೆಯನ್ನು ತರಾಟೆಗೆ ತೆಗೆದುಕೊಂಡರು. “ದೇಶದಲ್ಲಿ ಪ್ರಸ್ತುತ ಎದುರಾಗಿರುವ ಆರ್ಥಿಕ ಬಿಕ್ಕಟ್ಟು, ನಿರುದ್ಯೋಗ ಮತ್ತು ಸರ್ಕಾರದ ವೈಫಲ್ಯಗಳಿಂದ ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ಇಂತಹ ಅನಗತ್ಯ ಮತ್ತು ಆಧಾರ ರಹಿತ ವಿವಾದಗಳನ್ನು ಸೃಷ್ಟಿಸುತ್ತಿದೆ,” ಎಂದು ಅವರು ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.
ರಾಹುಲ್ ಗಾಂಧಿ ಅವರ ಪ್ರತಿ ನಡೆಗೂ ರಾಜಕೀಯ ಬಣ್ಣ ಬಳಿಯುವ ಮೂಲಕ ಬಿಜೆಪಿ ತನ್ನ ರಾಜಕೀಯ ದ್ವೇಷವನ್ನು ಪ್ರದರ್ಶಿಸುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದು, ಈ ವಿದೇಶಿ ಪ್ರವಾಸದ ವಿವಾದ ಮುಂಬರುವ ದಿನಗಳಲ್ಲಿ ಸಂಸತ್ತಿನ ಒಳಗೂ ಮತ್ತು ಹೊರಗೂ ಮತ್ತಷ್ಟು ಸದ್ದು ಮಾಡುವ ಮುನ್ಸೂಚನೆ ನೀಡಿದೆ.
- ಕಾಂಗ್ರೆಸ್ ತೀಕ್ಷ್ಣ ತಿರುಗೇಟು!
- ರಾಹುಲ್ ಎಲ್ಲಿಗೆ ಹೋಗಿದ್ದರು
- ಯಾರನ್ನು ಭೇಟಿಯಾದರು
- ವಿವರ ಬಹಿರಂಗಪಡಿಸಲು ಕೇಸರಿ ಪಡೆ ಪಟ್ಟು
- ಸರ್ಕಾರದ ವೈಫಲ್ಯ ಮುಚ್ಚಿಹಾಕುವ ಯತ್ನ ಎಂದ ಹಸ್ತ ಪಾಳಯ






























