Home ಮುಖಪುಟ ಸುದ್ದಿ ಪೌರತ್ವ ನಿರ್ಧಾರ,ನ್ಯಾಯಯುತ ಪ್ರಕ್ರಿಯೆ ಅಗತ್ಯ

ಪೌರತ್ವ ನಿರ್ಧಾರ,ನ್ಯಾಯಯುತ ಪ್ರಕ್ರಿಯೆ ಅಗತ್ಯ

ನವದೆಹಲಿ,ಜು.೧೩:ಪೌರತ್ವ ಅಥವಾ ವಿದೇಶಿ ಪ್ರಜೆ ಎಂಬ ಸ್ಥಾನಮಾನವನ್ನು ನಿರ್ಧರಿಸುವಾಗ ಪ್ರಕ್ರಿಯೆಯು ಸಂಪೂರ್ಣವಾಗಿ ‘ನ್ಯಾಯಯುತ, ಕಾನೂನುಬದ್ಧ ಮತ್ತು ತಾರ್ಕಿಕ’ವಾಗಿರಬೇಕು ಎಂದು ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ.

ಅಸ್ಸಾಂನ ೨೭ ನಿವಾಸಿಗಳನ್ನು ‘ವಿದೇಶಿಗರು’ ಎಂದು ಘೋಷಿಸಿದ್ದ ಗುವಾಹಟಿ ಹೈಕೋರ್ಟ್‌ನ ಆದೇಶಗಳನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಅಲ್ಲದೆ, ಈ ಪ್ರಕರಣಗಳನ್ನು ಹೊಸದಾಗಿ ಪರಿಶೀಲಿಸುವಂತೆ ಸಂಬಂಧಪಟ್ಟ ವಿದೇಶಿಯರ ನ್ಯಾಯಾಧಿಕರಣಗಳಿಗೆ ಮರು ಆದೇಶಿಸಿದೆ

ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಈ ೨೭ ಮೇಲ್ಮನವಿಗಳನ್ನು ಪುರಸ್ಕರಿಸಿ ಈ ತೀರ್ಪು ಪ್ರಕಟಿಸಿದೆ. ಪೌರತ್ವವು ಅತ್ಯುನ್ನತ ಸಾಂವಿಧಾನಿಕ ಮತ್ತು ಕಾನೂನು ಪ್ರಾಮುಖ್ಯತೆಯನ್ನು ಹೊಂದಿರುವ ವಿಷಯವಾಗಿದ್ದು, ಇದರ ನಿರ್ಧಾರದ ವೇಳೆ ನ್ಯಾಯಸಮ್ಮತತೆಯ ತತ್ವಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಪೀಠ ಒತ್ತಿಹೇಳಿದೆ.

“ಪೌರತ್ವ ಮತ್ತು ವಿದೇಶಿ ಸ್ಥಾನಮಾನದ ವಿಷಯಗಳು ಅತ್ಯಂತ ಸೂಕ್ಷ್ಮ ಹಾಗೂ ಕಾನೂನು ಮಹತ್ವವನ್ನು ಹೊಂದಿವೆ. ಅರ್ಹರಲ್ಲದ ವ್ಯಕ್ತಿಗಳು ಸುಳ್ಳು ದಾಖಲೆಗಳ ಮೂಲಕ ಅಥವಾ ಕಾನೂನಿನ ವಿಳಂಬದ ದುರುಪಯೋಗಪಡಿಸಿಕೊಂಡು ಭಾರತೀಯ ಪೌರತ್ವವನ್ನು ಪಡೆಯದಂತೆ ತಡೆಯಲು ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಹಕ್ಕಿದೆ. ಆದರೆ, ಈ ಪ್ರಕ್ರಿಯೆಯಲ್ಲಿ ನಿಗದಿಪಡಿಸಲಾದ ಸಾಂವಿಧಾನಿಕ ಸುರಕ್ಷತಾ ಕ್ರಮಗಳು ಮತ್ತು ನ್ಯಾಯಸಮ್ಮತತೆಯನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸುವಂತಿಲ್ಲ,” ಎಂದು ಸುಪ್ರೀಂ ಕೋರ್ಟ್ ಪೀಠ ಸ್ಪಷ್ಟಪಡಿಸಿದೆ.

ಅಲ್ಲದೆ, ವಿದೇಶಿಯರ ಕಾಯ್ದೆ ೧೯೪೬ರ ಸೆಕ್ಷನ್ ೯ರ ಅಡಿಯಲ್ಲಿ ತಾವೊಬ್ಬರು ಭಾರತೀಯ ಪ್ರಜೆ ಎಂದು ಸಾಬೀತುಪಡಿಸುವ ಹೊಣೆಗಾರಿಕೆ ಅರ್ಜಿದಾರರ ಮೇಲೆಯೇ ಇರುತ್ತದೆ ಎಂದು ಕೋರ್ಟ್ ನೆನಪಿಸಿದೆ.

ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ೨೭ ವ್ಯಕ್ತಿಗಳಲ್ಲಿ ಪ್ರಮುಖರಾದ ಸಬಿತ್ರಿ ದೇಯ್, ಅಜ್ಬಹರ್ ಅಲಿ, ಮೊಹಮ್ಮದ್ ಅಕ್ಬರ್ ಅಲಿ, ಅಬೇದಾ ಖಾತುನ್ ಮತ್ತು ಅನೋವರಾ ಖಾತುನ್ ಅವರು, “ಹಳೆಯ ಮತದಾರರ ಪಟ್ಟಿಗಳಲ್ಲಿ ಕೇವಲ ಕಾಗುಣಿತ ತಪ್ಪುಗಳು ಮತ್ತು ಹೆಸರಿನಲ್ಲಿದ್ದ ಸಣ್ಣಪುಟ್ಟ ವ್ಯತ್ಯಾಸಗಳಂತಹ ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ನಮ್ಮನ್ನು ವಿದೇಶಿಗರು ಎಂದು ಘೋಷಿಸಲಾಗಿದೆ,” ಎಂದು ನ್ಯಾಯಾಲಯಕ್ಕೆ ದೂರಿದ್ದರು.

ಸುಪ್ರೀಂ ಕೋರ್ಟ್‌ನ ಈ ಆದೇಶವು ಕೇವಲ ನ್ಯಾಯಯುತ ವಿಚಾರಣೆಯನ್ನು ಖಚಿತಪಡಿಸಿಕೊಳ್ಳಲು ನೀಡಲಾಗಿದೆಯೇ ಹೊರತು, ಅರ್ಜಿದಾರರ ಪೌರತ್ವದ ಅರ್ಹತೆಯನ್ನು ಕೋರ್ಟ್ ಪರಿಶೀಲಿಸಿಲ್ಲ. “ನಾವು ಅರ್ಜಿದಾರರು ಸಲ್ಲಿಸಿರುವ ಯಾವುದೇ ದಾಖಲೆಗಳ ಸಿಂಧುತ್ವ, ಸತ್ಯಾಸತ್ಯತೆ ಅಥವಾ ಪೌರತ್ವದ ಅರ್ಹತೆಯ ಬಗ್ಗೆ ಯಾವುದೇ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿಲ್ಲ. ಇದನ್ನು ನ್ಯಾಯಾಧಿಕರಣಗಳು ಸ್ವತಂತ್ರವಾಗಿ ನಿರ್ಧರಿಸಬೇಕು. ಒಂದು ವೇಳೆ ನ್ಯಾಯಾಧಿಕರಣದ ಮುಂದೆ ಪೌರತ್ವ ಸಾಬೀತುಪಡಿಸಲು ವಿಫಲರಾದರೆ, ಈ ರಿಮಾಂಡ್ ಆದೇಶವು ಅವರಿಗೆ ಯಾವುದೇ ಹೆಚ್ಚುವರಿ ರಕ್ಷಣೆ ನೀಡುವುದಿಲ್ಲ,” ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ಹಳೆಯ ಆದೇಶಗಳಿಂದ ಪ್ರಭಾವಿತರಾಗದೆ, ವಿದೇಶಿಯರ ಕಾಯ್ದೆ ೧೯೪೬ ಮತ್ತು ವಿದೇಶಿಯರ (ನ್ಯಾಯಾಧಿಕರಣ) ಆದೇಶ ೧೯೬೪ರ ಅಡಿಯಲ್ಲಿ ಸಂಪೂರ್ಣವಾಗಿ ಸ್ವತಂತ್ರವಾಗಿ ಮತ್ತು ನಿಯಮಾನುಸಾರ ಹೊಸ ವಿಚಾರಣೆ ನಡೆಸಿ ತೀರ್ಪು ನೀಡುವಂತೆ ಟ್ರಿಬ್ಯುನಲ್‌ಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

  • ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
  • ಅಸ್ಸಾಂನ ೨೭ ‘ವಿದೇಶಿಗರು’ ಎಂಬ ಹೈಕೋರ್ಟ್ ಆದೇಶ ರದ್ದು
  • ಮರು ವಿಚಾರಣೆಗೆ ವಿದೇಶಿಯರ ನ್ಯಾಯಾಧಿಕರಣಕ್ಕೆ ನಿರ್ದೇಶನ