
ಸಂಜೆವಾಣಿ ವಾರ್ತೆ,
ವಿಜಯಪುರ, ಜೂ. ೨೧: ಭಾರತೀಯ ಜನತಾ ಪಾರ್ಟಿ (ಬಿಜೆಪಿ) ವಿಜಯಪುರ ಜಿಲ್ಲಾ ಓಬಿಸಿ ಮೋರ್ಚಾ ವತಿಯಿಂದ ಪಕ್ಷದ ಜಿಲ್ಲಾ ಕಾರ್ಯಾಲಯದಲ್ಲಿ ನೂತನವಾಗಿ ರಾಜ್ಯಸಭೆಗೆ ಆಯ್ಕೆಯಾದ ಪ್ರೊ. ಎಂ. ನಾಗರಾಜ ಹಾಗೂ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾದ ರಘು ಕೌಟಿಲ್ಯ ಮತ್ತು ಲಿಂಗರಾಜ ಪಾಟೀಲ ಅವರನ್ನು ಅಭಿನಂದಿಸಿ ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಓಬಿಸಿ ಮೋರ್ಚಾ ಅಧ್ಯಕ್ಷ ಸಿದ್ದು ಬುಳ್ಳಾ, ಪ್ರಾಧ್ಯಾಪಕರಾಗಿ ಹಾಗೂ ಪಕ್ಷದ ಮಾಜಿ ಉಪಾಧ್ಯಕ್ಷರಾಗಿ ದಶಕಗಳ ಕಾಲ ಸೇವೆ ಸಲ್ಲಿಸಿರುವ ಪ್ರೊ. ಎಂ. ನಾಗರಾಜ ಅವರನ್ನು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ ಮಾಡಿರುವುದು ಹಿಂದುಳಿದ ವರ್ಗಗಳಿಗೆ ಬಿಜೆಪಿ ನೀಡಿರುವ ಮಹತ್ವದ ಗೌರವವಾಗಿದೆ ಎಂದು ಹೇಳಿದರು. ಇದು ಪಕ್ಷದ ಕಟ್ಟಕಡೆಯ ಕಾರ್ಯಕರ್ತರಿಗೂ ಪ್ರೇರಣೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಹಾಗೆಯೇ, ಓಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ಅವರು ವಿಧಾನಪರಿಷತ್ತಿಗೆ ಆಯ್ಕೆಯಾಗಿರುವುದು ಓಬಿಸಿ ಮೋರ್ಚಾದ ಸಂಘಟನಾ ಶಕ್ತಿ ಮತ್ತು ಶ್ರಮಕ್ಕೆ ದೊರೆತ ಜಯವಾಗಿದೆ. ಇದರಿಂದ ವಿಧಾನಸೌಧದಲ್ಲಿ ಹಿಂದುಳಿದ ವರ್ಗಗಳ ಧ್ವನಿ ಇನ್ನಷ್ಟು ಗಟ್ಟಿಯಾಗಲಿದೆ ಎಂದು ಹೇಳಿದರು.
ದೀರ್ಘಕಾಲದಿಂದ ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದ ಲಿಂಗರಾಜ ಪಾಟೀಲ ಅವರು ಮೇಲ್ಮನೆಗೆ ಆಯ್ಕೆಯಾಗಿರುವುದು, ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು ಬಿಜೆಪಿ ಎಂದಿಗೂ ಮರೆಯುವುದಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಸಿದ್ದು ಬುಳ್ಳಾ ತಿಳಿಸಿದರು.
ಕಾರ್ಯಕ್ರಮದಲ್ಲಿ ಓಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಡಬ್ಬಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಾಬು ಮಾಶ್ಯಾಳ ಹಾಗೂ ಈರಣ್ಣ ರಾವೂರ, ರಾಜ್ಯ ಯೋಜನೆ ಮತ್ತು ಸಂಯೋಜನೆ ವಿಭಾಗದ ಸಂಚಾಲಕ ರಾಜಕುಮಾರ ಸಗಾಯಿ, ಮಂಡಲ ಪ್ರಧಾನ ಕಾರ್ಯದರ್ಶಿ ಚಿನ್ನು ಚಿನಗುಂಡಿ, ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಮಂಜುನಾಥ ಮಿಸೆ, ರಾಜ್ಯ ಕಾರ್ಯಕಾರಿಣಿ ಸದಸ್ಯ ರವಿ ನಾಯ್ಕೋಡಿ ಸೇರಿದಂತೆ ರಾಜು ಬಿರಾದಾರ, ಅಪ್ಪು ಕುಂಬಾರ, ದಶರಥ ಕ್ಷೀರಸಾಗರ, ಬಸವರಾಜ ದಂಧರಗಿ, ಶರಣಬಸಪ್ಪ ಕುಂಬಾರ, ವಿಜು ಜೋಶಿ, ಲಕ್ಕು ಪಾಂಡಿಚೇರಿ, ಯಲ್ಲಪ್ಪ ಹದರಿ, ಶಿವಾನಂದ ದಳವಾಯಿ, ಪರಶುರಾಮ ಭೋಸಗಿ ಹಾಗೂ ಮಹಾದೇವ ಚಿನ್ನಾಕಟ್ಟಿ ಉಪಸ್ಥಿತರಿದ್ದರು.


























