
ಕಲಬುರಗಿ,ಮೇ.21-ಇಟಲಿ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ಮೆಲೋಡಿ ಚಾಕಲೇಟ್ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ದೇಶದಲ್ಲಿ ಉದ್ಭವವಾಗಿರುವ ಆರ್ಥಿಕ ಬಿಕ್ಕಟ್ಟು, ಇಂಧನ ಸಮಸ್ಯೆ ಇತ್ಯಾದಿಗಳಿಗೆ ಪರಿಹಾರ ಹುಡುಕುವಲ್ಲಿ ವಿಳಂಬ ಧೋರಣೆ ತಾಳುವ ಮೋದಿ, ಮೆಲೋನಿ ಅವರಿಗೆ ಮೆಲೋಡಿ ಕೋಡೋದಕ್ಕೆ ತಡಮಾಡುವುದಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಟೀಕೆ ಮಾಡಿದ್ದಾರೆ.
ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ವಿಡಿಯೋ ಹಂಚಿಕೊಂಡಿರುವ ಸಚಿವರು, ಮೋದಿ ಮೆಲೋನಿ ಮೆಲೋಡಿ ಗಿಫ್ಟ್ಗೆ ಕಟಿಕಿಯಾಡಿದ್ದಾರೆ.
ದೇಶದ ಇಂಧನ ಸಮಸ್ಯೆ, ಆರ್ಥಿಕ ಸಂಕಷ್ಟಕ್ಕೆ ಪರಿಹಾರ ಹುಡುಕೋಕೆ ಅವಸರವಿಲ್ಲ, ಆದರೆ ಮಿಸ್ ಮೆಲೋನಿ ಅವರಿಗೆ ಮೆಲೋಡಿ ಕೊಡೋದನ್ನು ತಡಮಾಡುವಂತಿಲ್ಲ.
ಒಮ್ಮೆ ಯೋಚಿಸಿ,ಗಂಭೀರ ದ್ವಿಪಕ್ಷೀಯ ವಿಷಯಗಳು ಮತ್ತು ವಿದೇಶಾಂಗ ನೀತಿ ಚರ್ಚೆಯ ಮಧ್ಯೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೀಗೆ ಅಂದುಕೊಂಡಿರಬಹುದು: “ನಾನು ಮೆಲೋಡಿ ಚಾಕೊಲೇಟ್ ಪ್ಯಾಕ್ ತೆಗೆದುಕೊಂಡು ಹೋಗುತ್ತೇನೆ, ಇದರಿಂದ ಒಳ್ಳೆ ಕಂಟೆಂಟ್ ಮಾಡಬಹುದು” ಎಂದು. ಈ ಹಾಸ್ಯಾಸ್ಪದ ರೀಲ್ ಜನರ ಗಮನವನ್ನು ನಿಜವಾದ ವಿಷಯಗಳಿಂದ ಬೇರೆಡೆ ತಿರುಗಿಸುತ್ತದೆ ಎನ್ನುವುದು ಅವರ ಕಲ್ಪನೆಯಾಗಿತ್ತು. ಆದರೆ ಅದು ನಿಜಕ್ಕೂ ನಮ್ಮನ್ನೇ ಹಾಸ್ಯಮಾಡುತ್ತಿದೆ. ದೇಶಕ್ಕೆ ಬೇಕಿದ್ದದ್ದು ಒಬ್ಬ ಧೀಮಂತ ಪ್ರಧಾನಿ, ಒಬ್ಬ ಮುತ್ಸದ್ಧಿ. ಆದರೆ ದುರದೃಷ್ಟವಶಾತ್ ನಮಗೆ ಸಿಕ್ಕಿದ್ದು ಸ್ವಯಂಮೋಹಿ ಇನ್ಫ್ಲೂಯೆನ್ಸರ್ ಎಂದು ಪ್ರಿಯಾಂಕ್ ಕಿಡಿಕಾರಿದ್ದಾರೆ.





















