Home ಜಿಲ್ಲೆ ಜನತೆಯ ಮನಸೋರೆಗೊಂಡ ಗ್ರಾಮೀಣ ಕಲೋತ್ಸವ ಕಾರ್ಯಕ್ರಮ

ಜನತೆಯ ಮನಸೋರೆಗೊಂಡ ಗ್ರಾಮೀಣ ಕಲೋತ್ಸವ ಕಾರ್ಯಕ್ರಮ

(ಸಂಜೆವಾಣಿ ವಾರ್ತೆ)

ಬಳ್ಳಾರಿ, ಮೇ.21: ಜಿಲ್ಲೆಯ ಸಿರುಗುಪ್ಪ ತಾಲೂಕಿನ ಶಾನವಾಸಪುರ  ಗ್ರಾಮದ ಬಯಲು ರಂಗ ಮಂದಿರ ವೇದಿಕೆಯಲ್ಲಿ ಮಂಗಳವಾರ ಸಂಜೆ  ಗ್ರಾಮೀಣ ಕಲೋತ್ಸವ 2026  ಕಾರ್ಯಕ್ರಮವನ್ನು ನೇತ್ರ ಕಲಾ ಸಂಘ ಸಿರುಗುಪ್ಪ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ವಿಶೇಷ ಘಟಕ ಯೋಜನೆ ಅಡಿಯಲ್ಲಿ ಆಯೋಜಿಸಲಾಗಿತ್ತು.

ಬಳ್ಳಾರಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ. ನಾಗರಾಜ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ನಾಡಿನ ಸಾಂಸ್ಕೃತಿಕ ಸಾಹಿತ್ಯಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಕಲಾಸಂಘ ಸಂಸ್ಥೆಗಳಿಗೆ ಕಾರ್ಯಕ್ರಮಗಳನ್ನು ಸಂಘಟಿಸಲು ಮತ್ತು ಅಸಂಘಟಿತ ಕಲಾವಿದರಿಗೂ  ಪ್ರತಿವರ್ಷವು ಧನ ಸಹಾಯ ನೀಡುತ್ತಿದ್ದು ಇದರಿಂದ ಗ್ರಾಮೀಣ ಭಾಗದ ಅಳಿವಿನಂಚಿನಲ್ಲಿರುವ ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ    ಧನ ಸಹಾಯ ನೀಡುವ ಮೂಲಕ  ಪ್ರೋತ್ಸಾಹಿಸುತ್ತಿದೆ. ಎಂದು ಹೇಳಿದರು.

ಅದರಂತೆ ನೇತ್ರಕಲಾ ಸಂಘವು 15 ವರ್ಷಗಳಿಂದ ನಿರಂತರ ಸಾಂಸ್ಕೃತಿಕ ಸಾಹಿತ್ಯಕ ಸಾಮಾಜಿಕ ಸೇವೆ ಜೊತೆಗೆ ಬೀದಿ ನಾಟಕ,ಆರೋಗ್ಯ ಜಾಗೃತಿ, ಬಾಲ್ಯ ವಿವಾಹ, ಅಸ್ಪೃಶ್ಯತೆ ಯಂತಹ ಜಾಗೃತಿ ಕಾರ್ಯಕ್ರಮಗಳನ್ನು ಇಂದಿಗೂ ನಡೆಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ ಎಂದು ಹೇಳಿದರು.

ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು  ಹಾಗೂ ಶಾನವಾಸಪುರ ಗ್ರಾಮ ಪಂಚಾಯಿತಿ ಆಡಳಿತ ಅಧಿಕಾರಿಗಳಾದ ಮಲ್ಲಿಕಾರ್ಜುನ ಅವರು ಅಧ್ಯಕ್ಷತೆ ವಹಿಸಿದರು.  ಗ್ರಾಮೀಣ ಪ್ರದೇಶದಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಾಂಸ್ಕೃತಿಕ ಜಾಗೃತಿ ಮೂಡಿಸುವ ಜೊತೆಗೆ ಯುವಕರಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಿ ಅನಾವರಣಗೊಳಿಸಲು ಇಂತಹ ಕಾರ್ಯಕ್ರಮಗಳು ಅವಶ್ಯಕತೆ ಎಂದು ಹೇಳಿದರು. ಹಳ್ಳಿಗಳಲ್ಲಿ ಜನಪದ ಕಲೆ  ನಶಿಸುತ್ತಿರುವ ಸಮಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಘ-ಸಂಸ್ಥೆಗಳು ಜೊತೆಗೂಡಿ ಕಲೆಗಳನ್ನು ಉಳಿಸುವ ಬೆಳೆಸುವ  ಕೆಲಸ ನಡೆಯುತ್ತಿರುವುದು ಅತ್ಯಂತ ಶ್ಲಾಘನೀಯ ಸಂಗತಿ ಎಂದರೆ ತಪ್ಪಾಗಲಾರದು ಅದರಂತೆ ಸಾರ್ವಜನಿಕರಾದ ನಾವು  ಪ್ರತಿಯೊಬ್ಬರೂ ಜನಪದ ಕಲೆಗಳನ್ನು ಉಳಿಸುವ ಮೂಲಕ ಇಂದಿನ ಯುವ ಪೀಳಿಗೆಯವರು ಕೂಡ ಕ್ರೀಡೆ,ಶಿಕ್ಷಣ, ಕೃಷಿ, ಆಧ್ಯಾತ್ಮ, ಜನಪದ ಮತ್ತು ಸಾಮಾಜಿಕ ಅಂಶಗಳನ್ನು ಮೈಗೂಡಿಸಿಕೊಂಡು ಗ್ರಾಮೀಣ ಭಾಗದ ಸೊಗಡನ್ನು ಜನಪದ ಕಲೆಯಿಂದಲೇ  ಪರಿಚಯಿಸಿದಾಗ ಜನಪದ ಕಲೆ ಉಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

 ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿಗಳ ಅಧಿಕಾರಿಗಳಾದ ಶ್ರೀ ವೀರೇಶ್ ಮತ್ತುಮತ್ತು ಊರಿನ ಹಿರಿಯ ಮುಖಂಡರಾದ ಎಂ. ಈರಪ್ಪ ವೈ. ನಾಗರಾಜ, ಸೋಮಪ್ಪ, ರಾಮಪ್ಪ, ಅಕ್ಬರ್ ಸಾಬ್, ತಿಪ್ಪೇರುದ್ರಗೌಡ, ಅಯ್ಯಪ್ಪ, ಬೈಲೂರು ನಾಗರಾಜ, ಬೈಲಾಟ ಅಕಾಡೆಮಿ ಮಾಜಿ ಸದಸ್ಯ ಹೆಚ್ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡಿ. ಮಹದೇವಿ  ಸಿರುಗುಪ್ಪ ತಂಡದಿಂದ ಸುಗಮ ಸಂಗೀತ,  ಮುತ್ತಣ್ಣ ಕುಡುದ್ರಾಳ್ ತಂಡದಿಂದ  ಜನಪದ ಸಂಗೀತ, ದೊಡ್ಡ ಹುಸೇನಪ್ಪ ಅರಳಿಗನೂರು ತಂಡದಿಂದ ವಚನ ಸಂಗೀತ, ಹರಿಕೃಷ್ಣ ಸಂಗನಕಲ್ಲು ತಂಡದವರಿಂದ ಡೊಳ್ಳು ಕುಣಿತ, ದಾಸರ ಶಕ್ಷವಲಿ ಜಾಲಿಬೆಂಚಿ ತಂಡದವರಿಂದ ತತ್ವಪದ ಗಾಯನ ಹಾಗೂ ಸುಮಿತ್ರ ಮಾನ್ವಿ ತಂಡದವರಿಂದ ಪೌರಾಣಿಕ ನಗೆ ನಾಟಕ ಶ್ರೀಕೃಷ್ಣ ಸಂಧಾನ ಎಂಬ ನಾಟಕವು ನೆರೆದಿದ್ದ ಸಾವಿರಾರು ಜನರನ್ನು ನಗೆಯಲಿ ತೇಲಿಸುತ್ತಾ ವೇದಿಕೆಯ ಸಾಂಸ್ಕೃತಿಕ ಸಂಗೀತ ಕಾರ್ಯಕ್ರಮಗಳು ಎಲ್ಲರನ್ನು ಮನರಂಜಿಸಿದರೆ ಮರಿಯಮ್ಮನಹಳ್ಳಿಯ ಜನಪದ ಕಲಾವಿದ ಹನುಮಯ್ಯ ಕಂಠದಲ್ಲಿ ಕೇಳಿ ಬಂದ  ಮಹರ್ಷಿ ವಾಲ್ಮೀಕಿ ಗೀತೆ ಜನರನ್ನು ಕುಣಿದು ಕುಪ್ಪಳಿಸುವಂತೆ ಮಾಡಿದ್ದು ವಿಶೇಷವಾಗಿತ್ತು. ಕಾರ್ಯಕ್ರಮದ ನಿರ್ವಹಣೆ ಮತ್ತು ನಿರೂಪಣೆಯನ್ನು ಶ್ರೀ ವೀರೇಶ ದಳವಾಯಿ ಕಾರ್ಯದರ್ಶಿ ನೇತ್ರಕಲಾ ಸಂಘ ಇವರು ನಿರ್ವಹಿಸಿದರು.