
ಬೆಂಗಳೂರು, ಮೇ ೨೧- ರಾಜ್ಯ ಬಿಜೆಪಿ ಅಧ್ಯಕ್ಷರ ನೇಮಕಾತಿ ಸಂಬಂಧ ಅಭಿಪ್ರಾಯ ಸಂಗ್ರಹ ಪ್ರಕ್ರಿಯೆ ನಡೆದಿದ್ದು, ಹಾಲಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮುಂದುವರೆಯುತ್ತಾರೆಯೇ, ಇಲ್ಲವೇ ರಾಜ್ಯ ಬಿಜೆಪಿಗೆ ಹೊಸ ಸಾರಥಿ ನೇಮಕವಾಗುತ್ತಾರೆಯೇ ಎಂಬ ಕುತೂಹಲ ಮೂಡಿದೆ.
ರಾಜ್ಯ ಬಿಜೆಪಿಗೆ ಪೂರ್ಣಾವಧಿ ಅಧ್ಯಕ್ಷರ ನೇಮಕ ಸಂಬಂಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ರವರ ಸೂಚನೆಯಂತೆ ಬಿಜೆಪಿಯ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಶಿವಪ್ರಕಾಶ್ ಅವರು ನಿನ್ನೆ ಬೆಂಗಳೂರಿಗೆ ಆಗಮಿಸಿದ್ದು, ಇಂದು ನೂತನ ಅಧ್ಯಕ್ಷರ ನೇಮಕಾತಿ ಸಂಬಂಧ ಎಲ್ಲರ ಅಭಿಪ್ರಾಯಗಳನ್ನು ಆಲಿಸಿದರು.
ಬೆಂಗಳೂರಿನ ಬಿಜೆಪಿ ಪ್ರಧಾನ ಕಚೇರಿಯಲ್ಲಿಂದು ಇಡೀ ದಿನ ರಾಷ್ಟ್ರೀಯ ಸಂಘಟನಾ ಸಹ ಕಾರ್ಯದರ್ಶಿ ಶಿವಪ್ರಕಾಶ್ ಅವರು ಬಿಜೆಪಿಯ ಎಲ್ಲಾ ಶಾಸಕರು, ಸಂಸದರು, ಪ್ರಮುಖ ಮುಖಂಡರು, ಪದಾಧಿಕಾರಿಗಳು ಹಾಗೂ ಹಿರಿಯ ನಾಯಕರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ನೂತನ ಅಧ್ಯಕ್ಷರ ಆಯ್ಕೆ ಸಂಬಂಧ ಅವರ ಅಭಿಪ್ರಾಯಗಳನ್ನು ಆಲಿಸಿದರು.
ಶಾಸಕರು, ಸಂಸದರು, ಪ್ರಮುಖ ನಾಯಕರುಗಳ ಪ್ರತ್ಯೇಕ ಭೇಟಿಯ ನಂತರ ಶಿವಪ್ರಕಾಶ್ ಅವರು ರಾಜ್ಯ ಕೋರ್ ಕಮಿಟಿ ಸಭೆಯಲ್ಲೂ ಪಾಲ್ಗೊಂಡು ನೂತನ ರಾಜ್ಯಾಧ್ಯಕ್ಷರ ನೇಮಕಾತಿ ಸಂಬಂಧ ಪ್ರಮುಖ ಮುಖಂಡರ ಜತೆಯೂ ಸಮಾಲೋಚನೆ ನಡೆಸಿದರು.
ರಾಜ್ಯ ಬಿಜೆಪಿಗೆ ನೂತನ ಅಧ್ಯಕ್ಷರ ಆಯ್ಕೆ ಸಂಬಂಧ ಎಲ್ಲರ ಅಭಿಪ್ರಾಯಗಳನ್ನು ಸಂಗ್ರಹಿಸಿರುವ ಶಿವಪ್ರಕಾಶ್ ಅವರು ನಾಳೆ ದೆಹಲಿಗೆ ತೆರಳಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ರವರಿಗೆ ನೂತನ ಅಧ್ಯಕ್ಷರ ನೇಮಕಾತಿ ಸಂಬಂಧ ಮುಖಂಡರುಗಳ ಅಭಿಪ್ರಾಯಗಳ ವರದಿಯನ್ನು ಸಲ್ಲಿಸುವರು.
ಈ ವರದಿ ಆಧರಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು ಹಾಗೂ ಹಿರಿಯ ನಾಯಕರುಗಳ ಜತೆ ಮತ್ತೊಮ್ಮೆ ಸಮಾಲೋಚನೆ ನಡೆಸಿ ನೂತನ ಅಧ್ಯಕ್ಷರ ಆಯ್ಕೆಯನ್ನು ಪ್ರಕಟಿಸುವರು ಎಂದು ಹೇಳಲಾಗಿದೆ.
ಇದೇ ತಿಂಗಳ ೨೫ ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ರಾಜ್ಯಕ್ಕೆ ಆಗಮಿಸಲಿದ್ದು, ಆ ಸಂದರ್ಭದಲ್ಲಿ ಅವರು ನೂತನ ಅಧ್ಯಕ್ಷರ ಆಯ್ಕೆಯನ್ನು ಅಂತಿಮಗೊಳಿಸುವರು ಎಂದು ಬಿಜೆಪಿಯ ಮೂಲಗಳು ಹೇಳಿವೆ.
ಹಾಲಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಪರ ಒಲವು ಹೆಚ್ಚಿದ್ದು, ಅವರೇ ಅಧ್ಯಕ್ಷರಾಗಿ ಮುಂದುವರೆಯುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಲಾಗಿದೆ.
























