Home ಜಿಲ್ಲೆ ಮೈಸೂರು ಅರ್ಹ ಎಲ್ಲಾ ಫಲಾನುಭವಿಗಳಿಗೆ ಪಂಚ ಗ್ಯಾರೆಂಟಿ ಯೋಜನೆಗಳು ತಲುಪಬೇಕು: ಅರುಣ್ ಕುಮಾರ್

ಅರ್ಹ ಎಲ್ಲಾ ಫಲಾನುಭವಿಗಳಿಗೆ ಪಂಚ ಗ್ಯಾರೆಂಟಿ ಯೋಜನೆಗಳು ತಲುಪಬೇಕು: ಅರುಣ್ ಕುಮಾರ್

ಸಂಜೆವಾಣಿ ನ್ಯೂಸ್
ಮೈಸೂರು: ಮೇ.10:-
ಜಿಲ್ಲೆಯ ಎಲ್ಲಾ ಅರ್ಹ ಫಲಾನುಭವಿಗಳಿಗೆ ಪಂಚ ಗ್ಯಾರೆಂಟಿ ಯೋಜನೆಗಳ ಸೌಲಭ್ಯಗಳು ತಲುಪಬೇಕು ಈ ನಿಟ್ಟಿನಲ್ಲಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು ಎಂದು ಗ್ಯಾರೆಂಟಿ ಯೋಜನೆಗಳ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷರಾದ ಅರುಣ್ ಕುಮಾರ್ ಅವರು ತಿಳಿಸಿದರು.


ಇಂದು ಜಿಲ್ಲಾ ಪಂಚಾಯತ್ ನ ಡಿ ದೇವರಾಜ ಅರಸು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಪ್ರಾಧಿಕಾರದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೆಲವು ಜನರಿಗೆ ಗೃಹಲಕ್ಷ್ಮಿ ಹಣ ದೊರೆಯುತ್ತಿಲ್ಲ ಎಂಬ ದೂರು ಇದೆ ಎಂದು ಸಭೆಯಲ್ಲಿ ಕೇಳಿದಾಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಮಾಹಿತಿ ನೀಡಿ ಯಾರು ಆದಾಯ ತೆರಿಗೆ ಪಾವತಿದಾರರು ಇದ್ದಾರೆ ಅವರಿಗೆ ಗೃಹ ಲಕ್ಷ್ಮಿ ಹಣ ನೀಡಲು ನಿಯಮದಲ್ಲಿ ಅವಕಾಶವಿಲ್ಲ ಯಾರಾದರೂ ಅರ್ಹ ಫಲಾನುಭವಿಗಳು ಇದ್ದರೆ ಪರೀಕ್ಷಿಸಿ ಸೇರ್ಪಡೆ ಮಾಡಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.
ಬಿ ಪಿ ಎಲ್ ಕಾರ್ಡ್ ಮಾಡಿಸಲು ಪೆÇೀರ್ಟಲ್ ಓಪನ್ ಆದಾಗ ಪತ್ರಿಕಾ ಪ್ರಕಟಣೆ ನೀಡಿ ಸಾರ್ವಜನಿಕರಿಗೆ ಮಾಹಿತಿ ದೊರೆಯುವಂತೆ ಮಾಡಬೇಕು. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಬಿಪಿಎಲ್ ಕಾರ್ಡ್ ಅತ್ಯವಶ್ಯಕವಾಗಿದೆ. ಬಿಪಿಎಲ್ ಕಾರ್ಡ್ ಇಲ್ಲದೆ ಇದ್ದರೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ಹಾಗೂ ಸ್ಕ್ಯಾನಿಂಗ್ ಸೌಲಭ್ಯಗಳು ದೊರೆಯುವುದಿಲ್ಲ. ಆದ್ದರಿಂದ ಅರ್ಹರಿಗೆ ಬಿಪಿಎಲ್ ಕಾರ್ಡಗಳನ್ನು ನೀಡಲು ಕ್ರಮವಹಿಸುವಂತೆ ಆಹಾರ ಇಲಾಖೆಯ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು.


ಬಸ್ ನಿಲ್ದಾಣಗಳಲ್ಲಿ ಕುಡಿಯುವ ನೀರಿನ ಆರ್ ಓ ಘಟಕಗಳನ್ನು ಅಳವಡಿಸಿ. ಕೆ ಎಸ್ ಆರ್ ಟಿ ಸಿ ಬಸ್ ಗಳಲ್ಲಿ ಟಿಕೆಟ್ ಹಣವನ್ನು ಆನ್ ಲೈನ್ ನಲ್ಲಿಯೂ ಪಾವತಿ ವ್ಯವಸ್ಥೆ ಇರುವ ಬಗ್ಗೆ ಫಲಕಗಳನ್ನು ಅಳವಡಿಸಿ ಈ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ಮಾಡಬೇಕು. ನಿರ್ವಾಹಕರು ಪ್ರಯಾಣಿಕರೊಂದಿಗೆ ಸೌಜನ್ಯ ಯುತವಾಗಿ ವರ್ತಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಳಾದ ಎಸ್ ಯುಕೇಶ್ ಕುಮಾರ್ ಅವರು ಮಾತನಾಡಿ ಗೃಹ ಲಕ್ಷ್ಮಿ ಹಣವನ್ನು ಯಾವುದೇ ಬ್ಯಾಂಕ್ ನವರು ಸಾಲಕ್ಕೆ ವಜಾ ಮಾಡಿಕೊಳ್ಳದೆ ಮಾನವೀಯತೆ ಆದಾರದ ಮೇಲೆ ಫಲಾನುಭವಿಗಳಿಗೆ ನೀಡಬೇಕು. ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿ ಮರಣ ಹೊಂದಿದರೆ ಅವರಿಗೆ ಹಣ ಪಾವತಿ ಆಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.


ಗ್ಯಾರೆಂಟಿ ಯೋಜನೆಗಳ ಪ್ರಾಧಿಕಾರದ ಉಪಾಧ್ಯಕ್ಷರಾದ ಶಿವಕುಮಾರ್ ಅವರು ಮಾತನಾಡಿ ಯಾರು ಮರಣ ಹೊಂದಿದ್ದಾರೆ ಅವರಿಗೂ ಹಣ ಹೋಗುತ್ತಿದೆ. ಅವರಿಗೆ ಸ್ಥಗಿತಗೊಳಿಸಬೇಕು ಹಾಗೂ ಮರಣದಿಂದ ಇಲ್ಲಿಯವರೆಗೆ ಅವರಿಗೆ ಪಾವತಿ ಆಗಿರುವ ಹಣವನ್ನು ಹಿಂಪಡೆಯಬೇಕು. ಮುಂದೆ ಯಾರೇ ಫಲಾನುಭವಿ ಮರಣ ಹೊಂದಿದರೆ ಆಟೋಮ್ಯಾಟಿಕ್ ಆಗಿ ಹಣ ಪಾವತಿ ಸ್ಥಗಿತವಾಗುವಂತೆ ತಂತ್ರಜ್ಞಾನ ಅಳವಡಿಸಿಕೊಳ್ಳಿ ಎಂದು ತಿಳಿಸಿದರು.


ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರ ಇಲಾಖೆಯ ಉಪ ನಿರ್ದೇಶಕರು ಮಾಹಿತಿ ನೀಡುತ್ತಾ ಜಿಲ್ಲೆಯಲ್ಲಿ 6,80,301 ಪಡಿತರ ಚೀಟಿಗಳು ಇವೆ. ಐ ಟಿ ಪಾವತಿ ಮಾಡಿರುವ ಹಾಗೂ 7.5 ಹೆಕ್ಟರ್ ಭೂಮಿ ಹೊಂದಿರುವವರ 23 ಸಾವಿರ ಕಾರ್ಡ್ ಗಳನ್ನು ಎ ಪಿ ಎಲ್ ಗೆ ಬದಲಾವಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಚೆಸ್ಕಾಂ ಅಧೀಕ್ಷಕ ಇಂಜಿನಿಯರ್ ಸುನಿಲ್ ಅವರು ಸಭೆಗೆ ಮಾಹಿತಿ ನೀಡುತ್ತಾ


ಜಿಲ್ಲೆಯಲ್ಲಿ 9,68,228 ಫಲಾನುಭವಿಗಳು ಗೃಹಜ್ಯೋತಿ ಯೋಜನೆಯಡಿ ನೋಂದಣಿ ಆಗಿದ್ದಾರೆ. 6548 ಫಲಾನುಭವಿಗಳು ನೋಂದಣಿಗೆ ಬಾಕಿ ಇದ್ದಾರೆ. ಶೇಕಡಾ 60 ರಷ್ಟು ಫಲಾನುಭವಿಗಳಿಗೆ ಶೂನ್ಯ ಬಿಲ್ ಬರುತ್ತದೆ. 40% ಫಲಾನುಭವಿಗಳು ಸರಾಸರಿಗಿಂತ ಹೆಚ್ಚಿನ ವಿದ್ಯುತ್ ಬಳಕೆ ಮಾಡುವುದರಿಂದ ಬಿಲ್ ಬರುತ್ತದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಉಪಾಧ್ಯಕ್ಷರಾದ ಹುಣಸೂರು ಬಸವಣ್ಣ, ಕರೀಗೌಡ ಬಿ ಎನ್, ತಾಲ್ಲೂಕು ಅಧ್ಯಕ್ಷರಾದ ನಿತಿನ್ ವೆಂಕಟೇಶ್, ಸದಸ್ಯರಾದ ಸಾ ಮಾ ಯೋಗೇಶ್, ಎಂ ಎಸ್ ಮಹದೇವ, ಲಲಿತಾ, ಅಬ್ದುಲ್ ಖಾದರ್ ಅವರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಮತ್ತಿತರು ಉಪಸ್ಥಿತರಿದ್ದರು.