
ಸಂಜೆವಾಣಿ ವಾರ್ತೆ
ಚಾಮರಾಜನಗರ, ಮೇ.10– ಪಶ್ವಿಮ ಬಂಗಾಳದಲ್ಲಿ ಪ್ರಥಮ ಬಾರಿ ಬಿಜೆಪಿಗೆ ಭಾರಿ ಬಹುಮತದೊಂದಿಗೆ ಮುಖ್ಯಮಂತ್ರಿಯಾಗಿ ಸುವೇಂದ್ರ ಅಧಿಕಾರಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಚಾಮರಾಜನಗರದಲ್ಲಿ ಹಿಂದು ಜಾಗೃತಿ ಸಮಿತಿಯಿಂದ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಲಾಯಿತು.
ನಗರದ ಶ್ರೀ ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ ಸಮಿತಿಯ ಅಧ್ಯಕ್ಷ ಶ್ರೀಕಂಠಸ್ವಾಮಿ ನೇತೃತ್ವದಲ್ಲಿ ಜಮಾಯಿಸಿದ ಹಿಂದು ಜಾಗೃತಿ ಸಮಿತಿಯ ಕಾರ್ಯಕರ್ತರು ಮುಖಂಡರು ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ, ಅಮಿತಾ ಶಾ ಹಾಗೂ ಮುಖ್ಯಮಂತ್ರಿ ಸುವೇಂದ್ರ ಅಧಿಕಾರಿ ಪರ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹಿಂದು ಜಾಗೃತಿ ಸಮಿತಿಯ ಅಧ್ಯಕ್ಷ ಶ್ರೀಕಂಠಸ್ವಾಮಿ ಮಾತನಾಡಿ, ಪಶ್ವಿಮ ಬಂಗಾಳದಲ್ಲಿ ಹಿಂದುಗಳ ವಿರೋಧಿ ಮಮತಾ ಬ್ಯಾನರ್ಜಿಯ 15 ವರ್ಷಗಳ ಆಡಳಿತಕ್ಕೆ ಅಂತ್ಯ ಹಾಡಿ, ಪ್ರಚಂಡ ಬಹುಮತದಿಂದ ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ.
ಸುವೇಂದ್ರ ಅಧಿಕಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವುದು ದೇಶದ ಪ್ರತಿಯೊಬ್ಬ ಹಿಂದುಗಳಿಗೆ ಸಂತಸವನ್ನು ಉಂಟು ಮಾಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಬಂಗಾಳದೇಶದ ನುಸುಳಗೋರರನ್ನು ತಡೆಯುವ ಜೊತೆಗೆ ಪಶ್ವಿಮ ಬಂಗಾಳದಲ್ಲಿ ಬಿಜೆಪಿಯ ಯುಗ ಆರಂಭವಾಗಿದೆ. ಬಿಜೆಪಿ ಸಂಸ್ಥಾಪಕರಾದ ಶ್ಯಾಂಪ್ರಕಾಶ್ ಮುಖರ್ಜಿ ಅವರ ಕನಸಿನಂತೆ ಬಿಜೆಪಿ ಅಧಿಕಾರ ಹಿಡಿಯುವ ಮೂಲಕ ಅವರ ಹೋರಾಟಕ್ಕೆ ಸಂದ ಜಯವಾಗಿದೆ. 22 ಕ್ಕು ಹೆಚ್ಚು ರಾಜ್ಯಗಳಲ್ಲಿ ಈಗಾಗಲೇ ಬಿಜೆಪಿ ಅಧಿಕಾರದಲ್ಲಿದೆ. ಮುಂದಿನ ದಿನಗಳಲ್ಲಿ ಕರ್ನಾಟಕ ಸೇರಿದಂತೆ ಇತರೇ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಕೃಷ್ಣಕುಮಾರ್, ಶಿವರಾಜು, ಮಹೇಶ್ಗೌಡ, ಮೊದಲಾದವರು ಇದ್ದರು.
























