
ಬೀದರ್, ಮೇ 8: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೀದರ್ ವತಿಯಿಂದ ಆಯೋಜಿಸಿದ್ದ ಆಂಗ್ಲ ವಿಭಾಗದ ಮುಖ್ಯಸ್ಥರು ಹಾಗೂ ಸಹ ಪ್ರಾಧ್ಯಾಪಕರಾದ ಡಾ. ಶೀಲಾ ಎಸ್. ಬಿರಾದಾರ ಅವರ ವಯೋನಿವೃತ್ತಿ ಬೀಳ್ಕೊಡುಗೆ ಸಮಾರಂಭ ಭಾವನಾತ್ಮಕ ಹಾಗೂ ಅರ್ಥಪೂರ್ಣವಾಗಿ ನಡೆಯಿತು.
ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದ ಅಕ್ಕಮಹಾದೇವಿ ಮಹಿಳಾ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ಪೆÇ್ರ. ಲೀಲಾವತಿ ಚಕೋತೆ ಮಾತನಾಡಿ, “ಡಾ. ಶೀಲಾ ಬಿರಾದಾರ ಅವರ ವ್ಯಕ್ತಿತ್ವ ಅತ್ಯಂತ ಎತ್ತರದದ್ದು. ನನ್ನ ವಿದ್ಯಾರ್ಥಿನಿಯಾಗಿದ್ದ ಅವರು ಜೀವನದಲ್ಲಿ ಎಷ್ಟೇ ಕಷ್ಟಗಳ ಸಿಡಿಲು ಬಂದರೂ ಅದನ್ನು ಲೆಕ್ಕಿಸದೆ ತಮ್ಮ ಗುರಿಯತ್ತ ಸಾಗಿದ್ದು ಸಂತಸದ ಸಂಗತಿ” ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವೆಂಕಟೇಶ್ವರ ವಿಶ್ವವಿದ್ಯಾಲಯದ ಸಂಶೋಧನಾ ಮೇಲ್ವಿಚಾರಕರಾದ ಡಾ. ಉಮಾಕಾಂತ ಎಸ್. ಪಾಟೀಲ್ ಮಾತನಾಡಿ, “ಡಾ. ಶೀಲಾ ಅವರು ಅಧ್ಯಯನ ಮತ್ತು ಅಧ್ಯಾಪನವನ್ನೇ ತಮ್ಮ ಜೀವಾಳವನ್ನಾಗಿ ಮಾಡಿಕೊಂಡಿದ್ದರು. ಕಾಲೇಜಿಗೆ ಹೆಚ್ಚಿನ ಸಮಯ ನೀಡಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದರು. ತಮ್ಮ ಕಾಲೇಜಿನ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಕಾಣುತ್ತಾ, ಅವರಲ್ಲಿ ವೈಚಾರಿಕ ಹಾಗೂ ನೈತಿಕ ಮೌಲ್ಯಗಳನ್ನು ಬಿತ್ತಿದ್ದರು” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಕೇಂದ್ರಬಿಂದುವಾಗಿದ್ದ ಡಾ. ಶೀಲಾ ಎಸ್. ಬಿರಾದಾರ ಅವರು ತಮ್ಮ ಜೀವನದ ಅನುಭವಗಳು, ಸಾಧನೆಗಳು ಹಾಗೂ ನಡೆದು ಬಂದ ಹಾದಿಯನ್ನು ಹಂಚಿಕೊಂಡು ಎಲ್ಲರನ್ನೂ ಭಾವುಕರನ್ನಾಗಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪೆÇ್ರ. ಶಂಕರ ಗಣಗೊಂಡ ಮಾತನಾಡಿ, “ಡಾ. ಶೀಲಾ ಬಿರಾದಾರ ಅವರು ಕಾಲೇಜಿನಲ್ಲಿ ಎನ್‍ಎಸ್‍ಎಸ್ ಅಧಿಕಾರಿಗಳಾಗಿ, ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಹಾಗೂ ಅನೇಕ ಸಮಿತಿಗಳ ಸಂಚಾಲಕರಾಗಿ ಸಮರ್ಪಕ ಸೇವೆ ಸಲ್ಲಿಸಿದ್ದಾರೆ. ಅವರ ಪಾಠ ಪ್ರವಚನಗಳು ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಿವೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ. ಶೀಲಾ ಬಿರಾದಾರ ಅವರ ವೃತ್ತಿಬಾಂಧವರು, ಕುಟುಂಬ ಸದಸ್ಯರು, ಕಾಲೇಜಿನ ಪ್ರಾಧ್ಯಾಪಕರು, ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಮಾತನಾಡಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಕಾರ್ಯಕ್ರಮವನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಿಬ್ಬಂದಿ ಕಾರ್ಯದರ್ಶಿಗಳಾದ ಡಾ. ರಾಜಕುಮಾರ ಅಲ್ಲೂರೆ ಹಾಗೂ ಡಾ. ಪಲ್ಲೇದ ಮಹೇಶ್ವರಿ ಸಂಯೋಜಿಸಿದರು. ಡಾ. ಸುಮನ್ ಬಾಯಿ ಸಿಂದೆ ಮತ್ತು ಪ್ರೇಮಲತಾ ಮುನೋಳಿ ಕಾರ್ಯಕ್ರಮ ನಿರೂಪಿಸಿದರು. ಆರಂಭದಲ್ಲಿ ಡಾ. ಅಶೋಕ ಕೋರೆ ಸ್ವಾಗತಿಸಿದರು. ವಿದ್ಯಾರ್ಥಿನಿ ಕು. ಶ್ರೇಯಾ ಪ್ರಾರ್ಥನಾ ಗೀತೆ ಹಾಡಿದರು. ಮಲ್ಲಿಕಾರ್ಜುನ ಹಾಡಿದ “ಮಾ, ಮೇ ತೇರಾ ಲಾಡ್ಲಾ…” ಗೀತೆ ಕಾರ್ಯಕ್ರಮಕ್ಕೆ ಭಾವನಾತ್ಮಕ ಸ್ಪರ್ಶ ನೀಡಿತು. ಕೊನೆಯಲ್ಲಿ ಸಾಂಸ್ಕøತಿಕ ಸಮಿತಿಯ ಸಂಚಾಲಕರಾದ ಡಾ. ಎಲೀಶ್ ದೇವದಾಸ ವಂದಿಸಿದರು.






















