
ಯಾದಗಿರಿ:ಮೇ.೭:ದೋರನಹಳ್ಳಿ ಹಲವು ತಿಂಗಳಿನಿAದ ವೇತನವಿಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ದೋರನಹಳ್ಳಿ ಪಟ್ಟಣ ಪಂಚಾಯತಿಯ ಪೌರ ಕಾರ್ಮಿಕರ ಬಾಕಿ ವೇತನವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಪಟ್ಟಣದ ವಿವಿಧ ಸಂಘಟನೆಗಳ ಮುಖಂಡರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂಬAಧ ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಹಾಗೂ ಪಟ್ಟಣ ಪಂಚಾಯತಿ ದೋರನಹಳ್ಳಿ ಮುಖ್ಯಾಧಿಕಾರಿಗಳಿಗೆ ಗುರುವಾರ ಮನವಿ ಪತ್ರ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ಮುಖಂಡರು, ದೋರನಹಳ್ಳಿ ಗ್ರಾಮ ಪಂಚಾಯತಿ ಅವಧಿಯಲ್ಲಿ ಸುಮಾರು ನಾಲ್ಕು ತಿಂಗಳ ಕಾಲ ಪೌರ ಕಾರ್ಮಿಕರಿಗೆ ವೇತನ ಪಾವತಿಯಾಗದೇ ಬಾಕಿ ಉಳಿದಿದ್ದು, ನಂತರ ಪಟ್ಟಣ ಪಂಚಾಯತಿಯಾಗಿ ಪರಿವರ್ತನೆಯಾದ ಮೇಲೂ ಕಳೆದ ನಾಲ್ಕು ತಿಂಗಳಿನಿAದ ವೇತನ ಬಿಡುಗಡೆಯಾಗಿಲ್ಲ ಎಂದು ಆರೋಪಿಸಿದರು. ಒಟ್ಟು ಹಲವು ತಿಂಗಳ ವೇತನ ಬಾಕಿ ಉಳಿದಿರುವುದರಿಂದ ಪೌರ ಕಾರ್ಮಿಕರು ಮತ್ತು ಅವರ ಕುಟುಂಬಗಳು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ತಿಳಿಸಿದರು.
ಪಟ್ಟಣದ ಸ್ವಚ್ಛತೆ, ಚರಂಡಿ ನಿರ್ವಹಣೆ, ಕಸ ವಿಲೇವಾರಿ ಸೇರಿದಂತೆ ಸಾರ್ವಜನಿಕ ಆರೋಗ್ಯ ಕಾಪಾಡುವ ಮಹತ್ವದ ಕಾರ್ಯಗಳಲ್ಲಿ ಪೌರ ಕಾರ್ಮಿಕರು ಪ್ರತಿದಿನ ದುಡಿಯುತ್ತಿದ್ದಾರೆ. ಆದರೆ ಅವರಿಗೆ ಸಮಯಕ್ಕೆ ಸರಿಯಾಗಿ ವೇತನ ಪಾವತಿಯಾಗದಿರುವುದು ನೋವು ತಂದಿದೆ. ದಿನಗೂಲಿ ಆಧಾರದಲ್ಲಿ ಜೀವನ ನಡೆಸುತ್ತಿರುವ ಕಾರ್ಮಿಕರಿಗೆ ಮನೆ ಬಾಡಿಗೆ, ಮಕ್ಕಳ ಶಿಕ್ಷಣ, ಆರೋಗ್ಯ ವೆಚ್ಚ ಸೇರಿದಂತೆ ನಿತ್ಯ ಜೀವನ ನಿರ್ವಹಣೆಯೇ ಕಷ್ಟಕರವಾಗಿರುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪೌರ ಕಾರ್ಮಿಕರ ಸೇವೆಯನ್ನು ಸರ್ಕಾರ ಹಾಗೂ ಸ್ಥಳೀಯ ಆಡಳಿತ ಗಂಭೀರವಾಗಿ ಪರಿಗಣಿಸಬೇಕು. ಬಾಕಿ ಇರುವ ಎಲ್ಲಾ ವೇತನವನ್ನು ತಕ್ಷಣ ಬಿಡುಗಡೆ ಮಾಡುವುದರ ಜೊತೆಗೆ ಮುಂದಿನ ದಿನಗಳಲ್ಲಿ ಪ್ರತಿ ತಿಂಗಳು ನಿಯಮಿತವಾಗಿ ವೇತನ ಪಾವತಿಸಲು ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಒತ್ತಾಯಿಸಿದರು.
ಪೌರ ಕಾರ್ಮಿಕರು ಪಟ್ಟಣದ ಸ್ವಚ್ಛತೆ ಮತ್ತು ಸಾರ್ವಜನಿಕ ಸೇವೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದು, ಅವರ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡಬಾರದು. ಕಾರ್ಮಿಕರ ಹಿತದೃಷ್ಟಿಯಿಂದ ತಕ್ಷಣ ಸ್ಪಂದಿಸಿ ಅಗತ್ಯ ಕ್ರಮ ಜರುಗಿಸಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಸಿದ್ದು ಪಟೇದಾರ, ಅಮರೇಶ್ ತೇಲಗೂರು, ಚಂದ್ರು ಹಲಗಿ, ಸದ್ದಾಂ ಹುಸೇನ್, ಅಂಬ್ರೇಶ ನಾಟೇಕಾರ, ಕಿರಣ್ ಗುಂಟ್ನೂರ, ಶಂಕರ್ ಜಾಗಿದಾರ, ಸಿದ್ದು ಜಡಬ ಸೇರಿದಂತೆ ಹಲವರು ಉಪಸ್ಥಿತರಿದ್ದರು.






















