
ಬೀದರ್:ಮೇ.೭: ಇತ್ತಿಚೀಗೆ ತಾಲೂಕಿನ ರಾಜನಾಳ ಗ್ರಾಮದಲ್ಲಿ ನಾಥ ಸಂಸ್ಥಾನ ಔಸಾ (ಜಿಲ್ಲೆ ಲಾತೂರ್) ಪರಂಪರೆಯ ಆದಿನಾಥ ಮೂರ್ತಿ ಸ್ಥಾಪನೆ ಹಾಗೂ ನಾಥಷಷ್ಠಿ ಉತ್ಸವದ ಅಂಗವಾಗಿ ಭವ್ಯ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು.
ನಾಥ ಸಂಸ್ಥಾನ ಔಸಾ ಪರಂಪರೆಯ ನಾಥಷಷ್ಠಿ ಉತ್ಸವವು ಸುಮಾರು ೨೩೦ ವರ್ಷಗಳ ಇತಿಹಾಸ ಹೊಂದಿದ ಮಹತ್ವದ ಭಕ್ತಿ ಪರಂಪರೆಯಾಗಿದೆ. ಶ್ರೀವಿಠ್ಠಲನು ನಾಥಷಷ್ಠಿ ಉತ್ಸವದ ಪ್ರಸಾದವನ್ನು ಸದ್ಗುರು ವೀರನಾಥ ಮಹಾರಾಜ ಔಸೆಕರ ಅವರಿಗೆ ಅನುಗ್ರಹಿಸಿದ ಹಿನ್ನೆಲೆ, ಅವರ ವಂಶಸ್ಥರಿAದಲೇ ಈ ಉತ್ಸವ ನಿರಂತರವಾಗಿ ಆಚರಿಸಲಾಗುತ್ತಿದೆ.
ಪ್ರತಿ ವರ್ಷದ ಉತ್ಸವಕ್ಕೆ ನಾಥ ಸಂಸ್ಥಾನದ ಪೀಠಾಧೀಶರಾದ ಸದ್ಗುರುಗಳು ಒಂದು ಗ್ರಾಮವನ್ನು ಆಯ್ಕೆ ಮಾಡುತ್ತಿದ್ದು, ಆ ಗ್ರಾಮದಲ್ಲಿರುವ ನಾಥ ಮಂದಿರದಲ್ಲಿ ಉತ್ಸವವನ್ನು ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಇದನ್ನು “ಸಂಚಾರಿ ನಾಥಷಷ್ಠಿ ಉತ್ಸವ” ಎಂದೂ ಕರೆಯಲಾಗುತ್ತದೆ. ಉತ್ಸವ ನಡೆಯುವ ಗ್ರಾಮದಲ್ಲಿ ನಾಥ ಮಂದಿರ ಸ್ಥಾಪಿಸುವ ಸಂಪ್ರದಾಯವಿದ್ದು, ಇದುವರೆಗೆ ಮಹಾರಾಷ್ಟ್ರ, ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ಉತ್ತರ ಪ್ರದೇಶಗಳಲ್ಲಿ ನೂರಾರು ನಾಥ ಮಂದಿರಗಳು ನಿರ್ಮಾಣಗೊಂಡಿವೆ.
೨೦೨೭ರಲ್ಲಿ ನಡೆಯಲಿರುವ ೨೩೦ನೇ ನಾಥಷಷ್ಠಿ ಉತ್ಸವವನ್ನು ತಾಲೂಕಿನ ರಾಜನಾಳ ಗ್ರಾಮದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಈ ಪ್ರಯುಕ್ತ ಇತ್ತಿಚೀಗೆ ಗ್ರಾಮಸ್ಥರು ಹಾಗೂ ಔಸೆಕರ ಮಹಾರಾಜರ ಸಹಕಾರದಿಂದ ಹೊಸ ದೇವಾಲಯ ನಿರ್ಮಿಸಿ, ಆದಿನಾಥರ ಆಸನ, ಶ್ರೀವಿಠ್ಠಲ-ರುಕ್ಮಿಣಿ ಮೂರ್ತಿಗಳು, ಶಿವಲಿಂಗ ಹಾಗೂ ರಾಧಾಕೃಷ್ಣ ಮೂರ್ತಿಗಳ ಪ್ರಾಣ ಪ್ರತಿಷ್ಠೆ ನೆರವೇರಿಸಲಾಯಿತು.
ಈ ಅಂಗವಾಗಿ ಮೂರು ದಿನಗಳ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ವೈಶಾಖ ಪೌರ್ಣಿಮೆಯಾದ ೨೦೨೬ರ ಮೇ ೧ರಂದು ಮುಖ್ಯ ಸಮಾರಂಭ ಭವ್ಯವಾಗಿ ಜರುಗಿತು. ಔಸಾದ ಬ್ರಹ್ಮವೃಂದವು ಪೂಜಾ ವಿಧಿಗಳನ್ನು ನೆರವೇರಿಸಿತು. ಸದ್ಗುರು ಗುರುಬಾಬಾ ಮಹಾರಾಜ, ಗೋರಖನಾಥ ಮಹಾರಾಜ, ಶ್ರೀರಂಗ ಮಹಾರಾಜ ಹಾಗೂ ಜ್ಞಾನರಾಜ ಮಹಾರಾಜ ಔಸೆಕರ ಅವರ ಸಾನ್ನಿಧ್ಯದಲ್ಲಿ ಪೂಜಾ ಕಾರ್ಯಗಳು ನಡೆದವು.
ಕಾರ್ಯಕ್ರಮಕ್ಕೆ ಮಾಜಿ ಕೇಂದ್ರ ಸಚಿವ ಭಗವಂತ ಖುಬಾ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಔಸೆಕರ ಮಹಾರಾಜರು ಹಾಗೂ ರಾಜನಾಳ ಗ್ರಾಮಸ್ಥರು ಅವರ ಸನ್ಮಾನ ನೆರವೇರಿಸಿದರು.
ಶ್ರೀ ಸ್ವಾಮಿ ಮಹಾರಾಜ ಸಲಗರ್ಕರ್, ಜ್ಞಾನರಾಜ ಮಹಾರಾಜ ಔಸೆಕರ ಹಾಗೂ ಶ್ರೀರಂಗ ಮಹಾರಾಜ ಔಸೆಕರ ಅವರ ಕೀರ್ತನ ಸೇವೆಗಳು ಭಕ್ತರ ಮನಸೆಳೆಯುವಂತಿದ್ದವು.
ವಿವಿಧ ರಾಜ್ಯಗಳಿಂದ ಆಗಮಿಸಿದ ಭಕ್ತರು ಹಾಗೂ ಗ್ರಾಮಸ್ಥರ ಭಾಗವಹಿಸುವಿಕೆಯಿಂದ ಉತ್ಸವ ಭಕ್ತಿಮಯ ವಾತಾವರಣದಲ್ಲಿ ಯಶಸ್ವಿಯಾಗಿ ನೆರವೇರಿತು.






















