Home ಜಿಲ್ಲೆ ಮೈಸೂರು ಖರ್ಗೆಯವರ ಮಾತನ್ನು ಗಮನಿಸಿದರೆ ಎಂ ಬದಲಾವಣೆ ಆಗಬಹುದು: ಬಿ.ವೈ.ವಿಜಯೇಂದ್ರ

ಖರ್ಗೆಯವರ ಮಾತನ್ನು ಗಮನಿಸಿದರೆ ಎಂ ಬದಲಾವಣೆ ಆಗಬಹುದು: ಬಿ.ವೈ.ವಿಜಯೇಂದ್ರ

ಸಂಜೆವಾಣಿ ನ್ಯೂಸ್
ಮೈಸೂರು:ಏ.03:-
ಮಲ್ಲಿಕಾರ್ಜುನ ಖರ್ಗೆಯವರ ಮಾತನ್ನು ಗಮನಿಸಿದರೆ ರಾಜ್ಯದಲ್ಲಿ ಸಿಎಂ ಬದಲಾವಣೆ ಆಗಬಹುದು ಅನಿಸುತ್ತದೆ. ಆದರೆ, ಕೆಲವರು ಖರ್ಗೆ ಸಿಎಂ ಆಗಲಿ ಎನ್ನುತ್ತಾರೆ, ಮತ್ತೆ ಕೆಲವರು ಡಿ.ಕೆ.ಶಿವಕುಮಾರ್ ಮೇ 15ಕ್ಕೆ ಸಿಎಂ ಆಗುತ್ತಾರೆ ಎನ್ನುತ್ತಾರೆ. ನೋಡೋಣ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.


ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸೂತ್ತೂರು ಮಠಕ್ಕೆ ಭೇಟಿ ನೀಡಿ, ಶ್ರೀಗಳ ಆಶೀರ್ವಾದ ಪಡೆದ ವಿಜಯೇಂದ್ರ ಅವರು ಮಾಧ್ಯಮದವರ ಜೊತೆ ಮಾತನಾಡಿದರು. ಸ್ವಾಮೀಜಿಯನ್ನು ಭೇಟಿ ಮಾಡಿ, ಮೇ 9 ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಯಡಿಯೂರಪ್ಪ ಅವರ 50 ವರ್ಷದ ಅಭಿಮಾನೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದೇವೆ. ಕಾರ್ಯಕ್ರಮಕ್ಕೆ ಬರಲು ಸ್ವಾಮೀಜಿ ಒಪ್ಪಿದ್ದಾರೆ. ಮೇ 8 ರಂದು ಯಡಿಯೂರಪ್ಪ ಚಿತ್ರದುರ್ಗದ ಪುರ ಪ್ರವೇಶ ಮಾಡ್ತಾರೆ. ಅದ್ಧೂರಿಯಾಗಿ ಅವರಿಗೆ ಸ್ವಾಗತ ಕೋರುತ್ತೇವೆ. 9 ರಂದು ಅಮಿತ್ ಶಾ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸುತ್ತಾರೆ. ನಾಡಿನ ರೈತರು, ಮಹಿಳೆಯರು, ಸ್ವಾಮೀಜಿಗಳು ಎಲ್ಲರೂ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. 10 ಲಕ್ಷ ಜನ ಸೇರುವ ಐತಿಹಾಸಿಕ ಕಾರ್ಯಕ್ರಮ ಇದಾಗಲಿದೆ. ಕಾರ್ಯಕ್ರಮಕ್ಕಾಗಿ ಯಡಿಯೂರಪ್ಪ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಮಿನಿ ದಸರಾ ಮಾದರಿಯಲ್ಲಿ ಕಾರ್ಯಕ್ರಮ ಮಾಡುತ್ತೇವೆ ಎಂದು ಹೇಳಿದರು.


ಚುನಾವಣೆ ಸಮೀಪ ಕಾರ್ಯಕ್ರಮ ಆಯೋಜನೆ ಮಾಡಿದ್ರೆ, ವಿಜಯೇಂದ್ರ ಅಥವಾ ಬಿಜೆಪಿಗೆ ಬೂಸ್ಟ್ ಆಗುತ್ತಿತ್ತು. ಈಗ ಯಾವುದೇ ಚುನಾವಣೆ ಇಲ್ಲ, ಇದು ಯಡಿಯೂರಪ್ಪ ಅವರಿಗೆ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮ. ಈ ರಾಜ್ಯದಲ್ಲಿ ಅನೇಕರು ಅದೃಷ್ಟದ ಸಿಎಂ ಆಗಿದ್ದಾರೆ. ಆದ್ರೆ, ಯಡಿಯೂರಪ್ಪ ಅದೃಷ್ಟದ ಸಿಎಂ ಅಲ್ಲ. ಜನರಿಂದ ಜನರಿಗಾಗಿ ಜನರಿಗೋಸ್ಕರ ಇದ್ದವರು. ಅದಕ್ಕಾಗಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಗೋವಿಂದ ಕಾರಜೋಳ ಅವರ ಅಪೇಕ್ಷೆಯಂತೆ ಚಿತ್ರದುರ್ಗದಲ್ಲಿ ಮಾಡುತ್ತಿದ್ದೇವೆ ಎಂದು ಹೇಳಿದರು.


ಎರಡು ಕ್ಷೇತ್ರಗಳಲ್ಲಿ ಬೈ ಎಲೆಕ್ಷನ್ ಗೆಲ್ಲುವ ವಿಶ್ವಾಸ ಇಲ್ಲ ಅಂತ ಕಾಂಗ್ರೆಸ್ ಮುಖಂಡರೇ ನನಗೆ ಹೇಳಿದ್ದಾರೆ. ಫಲಿತಾಂಶ ಬಂದ ಮೇಲೆ ರಾಜ್ಯದ ಸಿಎಂ ಹಾಗೂ ಕಾಂಗ್ರೆಸ್?ಗೆ ಪಾಠವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಮೈಸೂರು ಪಂಜಾಬ್ ಆಗಿದೆ, ಡ್ರಗ್ಸ್ ಹಾವಳಿ ಜಾಸ್ತಿಯಾಗಿದೆ. ಕಾಂಗ್ರೆಸ್ ಸರ್ಕಾರ ಮನುಷ್ಯತ್ವ ಇಲ್ಲದ ಸರ್ಕಾರ. ಮೈಸೂರಿನಲ್ಲಿ 3 ವರ್ಷದಿಂದ ಒಂದೇ ಒಂದು ಅಭಿವೃದ್ಧಿ ಆಗಿಲ್ಲ. ರಾಜ್ಯದ ಅಭಿವೃದ್ಧಿಗೆ ಕಾಂಗ್ರೆಸ್ ಮನಸ್ಸು ಮಾಡಿಲ್ಲ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ಕೇವಲ ಕುರ್ಚಿ ಉಳಿಸಿಕೊಳ್ಳುವ ಹಪಾಹಪಿ ಅಷ್ಟೇ ಕಾಣಿಸುತ್ತಿದೆ. ದೆಹಲಿಗೆ ಒಬ್ಬರ ಹಿಂದೆ ಒಬ್ಬರು ಹೋಗ್ತಿದ್ದಾರೆ ಎಂದು ವಿಜಯೇಂದ್ರ ಟೀಕಿಸಿದರು. ಮಾಜಿ ಸಂಸದ ಪ್ರತಾಪಸಿಂಹ, ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ಗ್ರಾಮಾಂತರ ಅಧ್ಯಕ್ಷ ಎಂ.ಸುಬ್ಬಣ್ಣ ಇನ್ನಿತರರು ಇದ್ದರು.