
ಸಂಜೆವಾಣಿ ನ್ಯೂಸ್
ಮೈಸೂರು: ಏ.22:- ಕಬ್ಬು ಬೆಳೆಗಾರರಿಗೆ ರಾಜ್ಯ ಸರ್ಕಾರ ನಿಗದಿ ಮಾಡಿರುವ ಹೆಚ್ಚುವರಿ ನೂರು ರೂಪಾಯಿ ಪಾವತಿ ಮಾಡದಿರುವುದನ್ನು ಖಂಡಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ. ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ನೂರಾರು ರೈತರು ತಮ್ಮ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಲು ಯತ್ನಿಸಿದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ರೈತರನ್ನು ತಡೆದರು. ಇದರಿಂದ ತಳ್ಳಾಟ, ನೂಕಾಟವಾಯಿತು. ಕೊನೆಗೆ ಪೆÇೀರ್ಟಿಕೋದಲ್ಲಿ ಕುಳಿತ ರೈತರು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ಗ್ರಾಮೀಣ ಬ್ಯಾಂಕಿನ ರೈತರ ಸಾಲ ತೀರುವಳಿ ಪತ್ರ ನೀಡಬೇಕು. ರೈತರ ಸಾಲಕ್ಕೆ ಸಿಬಿಲ್ಸ್ ಸ್ಕೋರ್ ಪರಿಗಣಿಸಬಾರದು. ಕೃಷಿ ಭೂಮಿ ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಪತ್ರ ವಿತರಿಸಬೇಕೆಂದು ಆಗ್ರಹಿಸಿದರು.
ಈ ವೇಳೆ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ಮಾತನಾಡಿ, ರೈತರ ಸಂಕಷ್ಟ ಅರಿಯದ ಬಣ್ಣಾರಿ ಸಕ್ಕರೆ ಕಾರ್ಖಾನೆ ನಿರಂತರವಾಗಿ ಶೋಷಣೆ ಮಾಡುತ್ತಿದೆ. ಪ್ರತಿ ವರ್ಷ ಸರ್ಕಾರದ ಆದೇಶ ಉಲ್ಲಂಘನೆ ಮಾಡುತ್ತಲೇ ರೈತರನ್ನು ವಂಚಿಸುತ್ತಿರುವ ಬಣ್ಣಾರಿ ಕಾರ್ಖಾನೆ ಮಾಲೀಕರನ್ನು ಜೈಲಿಗೆ ಕಳಿಸಬೇಕು. ಇಂತಹ ಉಪಠಳದಿಂದಲೇ ರೈತರು ಕಬ್ಬು ಬೆಳೆ ಕಡಿಮೆ ಮಾಡಿದ್ದಾರೆ. 15 ಲಕ್ಷ ಟನ್ ಕಬ್ಬು ಅರೆಯುವ ಸಾಮರ್ಥ್ಯ ಇರುವ ಬಣ್ಣಾರಿ ಕಾರ್ಖಾನೆಗೆ ಕೇವಲ ಏಳೂವರೆ ಲಕ್ಷ ಟನ್ ಮಾತ್ರ ಸರಬರಾಜು ಮಾಡಿದ್ದಾರೆ. ಈ ಕಬ್ಬಿನ ಹೆಚ್ಚುವರಿ ಹಣ ಏಳೂವರೆ ಕೋಟಿ ರೈತರಿಗೆ ಪಾವತಿಸದೆ ನಾಟಕವಾಡುತ್ತಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಗಳು ಸಕ್ಕರೆ ಗೋಧಾಮ ವಶಕ್ಕೆ ಪಡೆದು, ಮಾರಾಟ ಮಾಡಿ ರೈತರ ಹಣ ಕೂಡಿಸಬೇಕು ಎಂದು ಒತ್ತಾಯಿಸಿದರು
ಈ ವೇಳೆ ಸ್ಥಳಕ್ಕೆ ಬಂದ ಲೀಡ್ ಬ್ಯಾಂಕ್ ಮುಖ್ಯಸ್ಥ ಕೃಷ್ಣಮೂರ್ತಿ ಚಿನ್ನ ಗಿರವಿ ಸಾಲಕ್ಕೆ ಸಿಬಿಲ್ ಸ್ಕೋರ್ ಕೇಳಬಾರದು. ಚಿನ್ನ ಪರೀಕ್ಷೆ ಮಾಡುವ ಶುಲ್ಕ 150 ರಿಂದ 200 ಪಡೆದುಕೊಳ್ಳಬಹುದು. ಹೆಚ್ಚುವರಿ ಪಡೆದುಕೊಂಡರೆ ದೂರು ನೀಡಿ ಎಂದು ತಿಳಿಸಿದರು.
ಕಾವೇರಿ ಗ್ರಾಮೀಣ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಪ್ರಮೋದ್ ನೋನಿ ಮಾತನಾಡಿ, ಒಟಿಎಸ್ ಸಾಲ ತೀರುವಳಿ ಕುರಿತು ಮೇ 8 ರಂದು ರಾಜ್ಯಮಟ್ಟದ ಕಾರ್ಯನಿರ್ವಾಹಕ ವವ್ಯಸ್ಥಾಪರ ಸಭೆ ನಡೆಸಿ ಸಮಸ್ಯೆ ಬಗೆಹರಿಸುವವರು ಎಂದರು
ಪ್ರತಿಭಟನೆಯಲ್ಲಿ ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ಮೂಕಳ್ಳಿ ಮಹದೇವಸ್ವಾಮಿ, ಪಟೇಲ್ ಶಿವಮೂರ್ತಿ, ಉಡಿಗಾಲ ರೇವಣ್ಣ, ಸೋಮಶೇಖರ್, ಮಾರ್ಬಳ್ಳಿ ನೀಲಕಂಠಪ್ಪ, ವರಕೋಡು ನಾಗೇಶ್, ಲಕ್ಷ್ಮೀಪುರ ವೆಂಕಟೇಶ್, ಕುರುಬೂರು ಸಿದ್ದೇಶ್, ದೇವನೂರು ವಿಜಯೇಂದ್ರ, ಮಹದೇವಸ್ವಾಮಿ, ಕೆಂಡಗಣ್ಣಪ್ಪ, ನಾಗೇಶ್, ಕುರುಬೂರು ಪ್ರದೀಪ್, ಪ್ರಸಾದ್ ನಾಯಕ, ಗೌರಿಶಂಕರ್, ಗುರುಸ್ವಾಮಿ, ಅಂಬಳೆ ಮಂಜುನಾಥ್, ಪರಶಿವಮೂರ್ತಿ, ಸಾತಗಳ್ಳಿ ಬಸವರಾಜ, ಸುಂದರಪ್ಪ, ಸತೀಶ್, ದೇವನೂರು ಮಹಾದೇವಪ್ಪ, ರಂಗರಾಜು, ಕೆಂಡಗಣ್ಣಸ್ವಾಮಿ, ಶಿವಸ್ವಾಮಿ, ರವಿಕುಮಾರ್, ನಂಜುಂಡಸ್ವಾಮಿ, ನಾಗೇಂದ್ರ, ಕಮಲಮ್ಮ ಸೇರಿದಂತೆ ಹಲವರು ಭಾಗವಹಿಸಿದ್ದರು.

























