
ಕಲಬುರಗಿ,ಏ.15-ಡಾ.ಬಿ.ಆರ್. ಅಂಬೇಡ್ಕರ್ ಅವರು ಕೇವಲ ಸಂವಿಧಾನ ಶಿಲ್ಪಿಯಲ್ಲ. ಬದಲಾಗಿ ಮಾನವೀಯತೆ, ಸಮಾನತೆ ಮತ್ತು ಮಾನವ ಘನತೆಯನ್ನು ಎತ್ತಿ ಹಿಡಿದ ಮಹಾನ್ ನೇತಾರ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಡಾ.ಶಿವರಂಜನ ಸತ್ಯಂಪೇಟೆ ಅಭಿಪ್ರಾಯಪಟ್ಟರು.
ನೂತನ ವಿದ್ಯಾಲಯ ಸಂಸ್ಥೆಯ ಎನ್ ವಿ ಕಲಾ ಶ್ರೀ ಕನ್ಹಯ್ಯಲಾಲ್ ಮಾಲು ವಿಜ್ಞಾನ ಹಾಗೂ ಡಾ. ಪಾಂಡುರಂಗರಾವ ಪತ್ಕಿ ವಾಣಿಜ್ಯ ಮಹಾವಿದ್ಯಾಲಯದ ಐ.ಕ್ಯೂಎ.ಸಿ. ಹಾಗೂ ಎನ್.ಎಸ್. ಎಸ್. ಘಟಕದ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಆಚರಣೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ಸಾಮಾಜಿಕ ಸಮಾನತೆ, ಭ್ರಾತೃತ್ವ, ಶಿಕ್ಷಣ, ಸ್ವಾವಲಂಬನೆ, ಮಹಿಳಾ ಹಕ್ಕುಗಳ ಪರ ಹೋರಾಡಿದ ಬಾಬಾಸಾಹೇಬರು ಮಾನವೀಯತೆಯ ಮಹಾಸಾಗರ ಆಗಿದ್ದರು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ದಯಾನಂದ ಶಾಸ್ತ್ರೀ ಮಾತನಾಡಿ, ಅಂಬೇಡ್ಕರ್ ಅವರು ಸಮಾಜದ ಉನ್ನತಿಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟವರು. ಅವರ ಜೀವನಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಉಪ ಪ್ರಾಚಾರ್ಯ ಡಾ.ಗುರುಮಧ್ವಾಚಾರ್ಯ ನವಲಿ, ಕಾಲೇಜಿನ ಉದ್ಯೋಗಿಗಳ ಸಂಘದ ಕಾರ್ಯದರ್ಶಿ ಭಾರತಿ ಎಸ್.ಆರ್. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಡಾ.ಮಹೇಶಕುಮಾರ ಈ ಬಡಿಗೇರ ಪರಿಚಯಿಸಿದರು. ಡಾ. ಮಲ್ಲಿನಾಥ ತಳವಾರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ರಾಘು ನಿರೂಪಿಸಿ ವಂದಿಸಿದರು.






















