Home ಜಿಲ್ಲೆ ಮೈಸೂರು ಪುರುಷರ ಸಾಧನೆಗೆ ಮಹಿಳೆಯರ ಪಾತ್ರ ಪ್ರಮುಖವಾದ್ದು: ಮಲ್ಲಿಕಾರ್ಜುನ್

ಪುರುಷರ ಸಾಧನೆಗೆ ಮಹಿಳೆಯರ ಪಾತ್ರ ಪ್ರಮುಖವಾದ್ದು: ಮಲ್ಲಿಕಾರ್ಜುನ್

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಏ.12:
ಮಹಿಳೆಯರ ಸಾಧನೆಗೆ ಪುರುಷರ ಸಹಕಾರ ಹೇಗೆ ಅಗತ್ಯವೋ ಅದೇ ರೀತಿ ಪುರುಷರ ಸಾಧನೆಗೂ ಮಹಿಳೆಯರ ಪಾತ್ರ ಅಷ್ಟೇ ಪ್ರಮುಖವಾದದ್ದು ಎಂದು ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ತಿಳಿಸಿದರು.


ತಾಲ್ಲೂಕಿನ ಕಸಬಾ ಹೋಬಳಿಯ ಪುರ ಗ್ರಾಮ ಶ್ರೀ ಕ್ಷೇತ್ರ ಮಾದೇಶ್ವರಸ್ವಾಮಿ ಬೆಟ್ಟದಲ್ಲಿ ಅಖಿಲ ಕರ್ನಾಟಕ ಒಕ್ಕಲಿಗ ಸಂಘ ಮಹಿಳಾ ಮತ್ತು ಪುರುಷ ಘಟಕ ಕೃಷಿಕ ಸಮಾಜ, ತಾಲ್ಲೂಕು ನಾಗರೀಕ ರೈತ ಹಿತರಕ್ಷಣ ಸಮಿತಿ ಆಯೋಜಿಸಿದ್ದ 32ನೇ ವರ್ಷದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಜ್ಯೋತಿ ಬೆಳಗಿಸುವ ಮುಖಂತರ ಉದ್ಘಾಟಿಸಿ ಮಾತನಾಡಿದರು.


ಅಂತರರಾಷ್ಟ್ರೀಯ ಮಹಿಳಾ ದಿನವನ್ನು ತಾಲ್ಲೂಕು ಅಖಿಲ ಕರ್ನಾಟಕ ಒಕ್ಕಲಿಗ ಸಂಘ ಹಾಗೂ ಹಿರಿಯ ಕೃಷಿಕ ಸಮಾಜದ ಅಧ್ಯಕ್ಷ ನಾಟನಹಳ್ಳಿ ಗಂಗಾಧರ್ ನೇತೃತ್ವದಲ್ಲಿ ಹಲವು ವರ್ಷಗಳಿಂದ ಅತ್ಯಂತ ಅರ್ಥಪೂರ್ಣವಾದ ಕಾರ್ಯಕ್ರಮಗಳನ್ನು ಕೈಗೊಂಡು ಮಹಿಳಾ ಸಾಧಕರ ಗುರುತಿಸಿ ಗೌರವಿಸುವ ಕಾರ್ಯ ನಿಜಕ್ಕೂ ಸಂತೋಷದ ಸಂಗತಿ.ಮಹಿಳಾ ದಿನಾಚರಣೆ ಸಂದರ್ಭದಲ್ಲಿ ನಾವು ಎಲ್ಲರೂ ಒಟ್ಟಾಗಿ ಮಹಿಳೆಯರ ಗೌರವವನ್ನು ಹೆಚ್ಚಿಸಲು,ಅವರ ಸಾಮಥ್ರ್ಯವನ್ನು ಬೆಂಬಲಿಸಲು ಮತ್ತು ಸಮಾನತೆಯ ಸಮಾಜವನ್ನು ನಿರ್ಮಿಸಲು ಸಂಕಲ್ಪವನ್ನು ಮಾಡಬೇಕು. ಯಾವುದೇ ಮಹಿಳೆಯರ ಸಾಧನೆಯ ಹಿಂದೆ ಪುರುಷನ ನೆರಳಿರುತ್ತದೆ.ಪುರುಷರ ಹಿಂದೆ ನೆರಳಾಗಿ ನಿಂತು ಪುರುಷರ ಸಾಧನೆಗಳಿಗೆ ಮಹಿಳೆಯರ ಪಾತ್ರವೂ ಪ್ರಮುಖ ವಹಿಸಲಿದೆ ಎಂದ ಅವರು ಮಹಿಳೆಯರು ನಾನಾ ಕ್ಷೇತ್ರಗಳಲ್ಲಿ ತಮ್ಮದೇ ಆದ ಬದುಕಿನಲ್ಲಿ ಮುನ್ನಡೆಯುತ್ತಿದ್ದು, ಸರ್ಕಾರ ಅವರಿಗಾಗಿ ನಾನಾ ಯೋಜನೆಗಳನ್ನು ನೀಡುತ್ತಿದೆ. ಇದರ ಸದುಪಯೋಗ ಪಡೆದುಕೊಂಡು ಸ್ವಾವಲಂಬಿ ಬದುಕಿನತ್ತ ಮುನ್ನಡೆಯಬೇಕು. ಸಮಾಜ ಸುಧಾರಣೆಯಾಗಬೇಕಾದರೆ ಮಹಿಳೆಯರ ಪಾತ್ರ ಅತ್ಯವಶ್ಯ ಆದ್ದರಿಂದ ಮಹಿಳೆಯರು ಹೆಚ್ಚು ವಿದ್ಯಾವಂತರಾಗುವುದರೊಂದಿಗೆ ಸಮಾಜಿಕ ಪಿಡುಗುಗಳ ವಿರುದ್ಧ ಅವರಲ್ಲಿ ಜಾಗೃತಿ ಮತ್ತು ಅರಿವು ಮೂಡಿಸುವ ಕೆಲಸ ಸಂಘ ಸಂಸ್ಥೆಗಳ ಮೂಲಕ ಆಗಬೇಕು ಎಂದು ಮಲ್ಲಿಕಾರ್ಜುನ್ ತಿಳಿಸಿದರು.


ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ನಾಟನಹಳ್ಳಿ ಗಂಗಾಧರ್ ರವರ ನೇತೃತ್ವದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಒಕ್ಕಲಿಗರ ಮಹಿಳಾ ಸಂಘದ ಜಿಲ್ಲಾಧ್ಯಕ್ಷೆ ಸುಜಾತಕೃಷ್ಣೇಗೌಡ, ಕೃಷಿಕ ಸಮಾಜದ ತಾಲ್ಲೂಕು ಅಧ್ಯಕ್ಷ ನಾಟನಹಳ್ಳಿ ಗಂಗಾಧರ, ಅಖಿಲ ಕರ್ನಾಟಕ ಒಕ್ಕಲಿಗರ ಮಹಿಳಾ ತಾಲ್ಲೂಕು ಅಧ್ಯಕ್ಷ ಪ್ರೇಮ ನಾಗರಾಜು, ಕರವೇ ಜಿಲ್ಲಾ ಅಧ್ಯಕ್ಷ ಡಿ.ಎಸ್.ವೇಣು, ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಹೊನ್ನೇನಹಳ್ಳಿ ಸೋಮಶೇಖರ್, ಅಪ್ಪು ಸೇವಾ ಟ್ರಸ್ಟ್ ಅಧ್ಯಕ್ಷ ಕಾಮನಹಳ್ಳಿ ಮಹೇಶ್, ಚಿಕ್ಕೋನಹಳ್ಳಿ ಚೇತನ್ ಸೇರಿದಂತೆ ಹಲವರಿದ್ದರು.