Home ಜಿಲ್ಲೆ ಬಾಚವಾರ ಅರಣ್ಯ ಪ್ರದೇಶದಲ್ಲಿ ಅಕ್ರಮ ಮರಳು ಸಾಗಾಣಿಕೆ ಆರೋಪ

ಬಾಚವಾರ ಅರಣ್ಯ ಪ್ರದೇಶದಲ್ಲಿ ಅಕ್ರಮ ಮರಳು ಸಾಗಾಣಿಕೆ ಆರೋಪ

ಯಾದಗಿರಿ:ಮಾ.೮: ಜಿಲ್ಲೆಯ ಯಾದಗಿರಿ ತಾಲೂಕಿನ ಬಾಚವಾರ ಗ್ರಾಮದ ಅರಣ್ಯ ಪ್ರದೇಶಗಳಲ್ಲಿ ಅಕ್ರಮ ಮರಳು ಸಾಗಾಣಿಕೆ, ಗಿಡಮರಗಳ ಕಡಿತ ಹಾಗೂ ಅರಣ್ಯ ಸಂಪತ್ತಿನ ದುರುಪಯೋಗ ನಡೆಯುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದು, ಈ ಸಂಬAಧ ಸ್ಥಳೀಯ ನಿವಾಸಿ ಭೀಮರಾಯ ತಂದೆ ಹಣಮಂತ ಬಡಿಗೇರ ಅವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿ ಸಂಬAಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.ದೂರುದಾರರಾದ ಬಾಚವಾರ ಗ್ರಾಮದ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿ, ವಿಶೇಷವಾಗಿ ಸಮನಾಪೂರ ಹಾಗೂ ಯರಗೋಳ ಗ್ರಾಮಗಳ ಅರಣ್ಯ ವಲಯಗಳಲ್ಲಿ ಕೆಲವರು ದಿನರಾತ್ರಿ ವಾಹನಗಳ ಮೂಲಕ ಅಕ್ರಮವಾಗಿ ಮರಳು ಹಾಗೂ ಇತರೆ ಅರಣ್ಯ ಸಂಪತ್ತನ್ನು ಸಾಗಾಣಿಕೆ ಮಾಡುತ್ತಿದ್ದಾರೆ. ಇದರಿಂದ ಕಾಡಿನ ಪರಿಸರ ಸಮತೋಲನಕ್ಕೆ ಧಕ್ಕೆಯಾಗುತ್ತಿದ್ದು, ಗಿಡಮರಗಳ ಕಡಿತ ಹೆಚ್ಚಾಗಿ ಅರಣ್ಯ ಸಂಪತ್ತಿನ ಸಂರಕ್ಷಣೆಗೆ ಗಂಭೀರ ಅಪಾಯ ಉಂಟಾಗಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಇದಕ್ಕೂ ಮೀರಿದಂತೆ ಈ ಅಕ್ರಮ ಚಟುವಟಿಕೆಗಳಿಗೆ ಅರಣ್ಯ ಇಲಾಖೆಯ ಕೆಲ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೇ ಬೆಂಬಲ ನೀಡುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ವಿಶೇಷವಾಗಿ ಪವನಕುಮಾರ ಕುಲಕರ್ಣಿ, ಮಂಜುನಾಥ ಹಾಗೂ ಮಲ್ಲಿಕಾರ್ಜುನ ಎಂಬ ಸಿಬ್ಬಂದಿಗಳು ಮರಳು ಸಾಗಾಣಿಕೆ ನಡೆಸುವವರೊಂದಿಗೆ ಕೈಜೋಡಿಸಿ ಲಕ್ಷಾಂತರ ರೂಪಾಯಿ ಲಂಚ ಸ್ವೀಕರಿಸಿ ಅಕ್ರಮ ಸಾಗಾಣಿಕೆಗೆ ಅವಕಾಶ ಮಾಡಿಕೊಡುತ್ತಿದ್ದಾರೆ ಎಂದು ದೂರುದಲ್ಲಿ ಉಲ್ಲೇಖಿಸಲಾಗಿದೆ.

ಇದೇ ವಿಚಾರವನ್ನು ಬಹಿರಂಗಪಡಿಸಿ ಸಂಬAಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ ಹಿನ್ನೆಲೆ ದೂರುದಾರರಾದ ಭೀಮರಾಯ ಬಡಿಗೇರ ಅವರಿಗೆ ಕೆಲವು ವ್ಯಕ್ತಿಗಳಿಂದ ಜೀವ ಬೆದರಿಕೆಗಳು ಬರುತ್ತಿವೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಅಕ್ರಮ ಚಟುವಟಿಕೆಗಳನ್ನು ಪ್ರಶ್ನಿಸಬೇಡಿ ಎಂದು ಬೆದರಿಕೆ ಹಾಕಲಾಗುತ್ತಿದೆ ಎಂದು ದೂರುದಾರರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಭದ್ರತೆ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಅವರು, ತಕ್ಷಣ ಪೊಲೀಸ್ ರಕ್ಷಣೆಯನ್ನು ಒದಗಿಸಬೇಕೆಂದು ಮನವಿ ಮಾಡಿದ್ದಾರೆ.

ಈ ಕುರಿತು ಈ ಹಿಂದೆ ಸಹ ಸಂಬAಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಕ್ರಮ ಚಟುವಟಿಕೆಗಳನ್ನು ಪ್ರಶ್ನಿಸುವವರನ್ನು ಬೆದರಿಸುವ ಘಟನೆಗಳು ಹೆಚ್ಚಾಗುತ್ತಿರುವುದರಿಂದ ಗ್ರಾಮಸ್ಥರಲ್ಲಿ ಆತಂಕ ವಾತಾವರಣ ನಿರ್ಮಾಣವಾಗಿದೆ.

ಈ ಹಿನ್ನೆಲೆಯಲ್ಲಿ ಬಾಚವಾರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಅಕ್ರಮ ಮರಳು ಸಾಗಾಣಿಕೆ ಹಾಗೂ ಕಾಡು ನಾಶವನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿದ್ದಾರೆ. ಜೊತೆಗೆ ಅಕ್ರಮಕ್ಕೆ ಸಹಕಾರ ನೀಡಿರುವುದಾಗಿ ಆರೋಪಿಸಲ್ಪಟ್ಟಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿರುದ್ಧ ಇಲಾಖಾ ಮಟ್ಟದಲ್ಲಿ ಹಾಗೂ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆ ವ್ಯಕ್ತವಾಗಿದೆ.

ಈ ಪ್ರಕರಣಕ್ಕೆ ಸಂಬAಧಿಸಿದAತೆ ಬಾಚವಾರ ಗ್ರಾಮದ ಹಲವಾರು ನಾಗರಿಕರು ಸಾಕ್ಷಿದಾರರಾಗಿ ಮುಂದೆ ಬಂದಿದ್ದಾರೆ. ನರಸಪ್ಪ ತಂದೆ ಭೀಮರಾಯ ಚುಂಚ್ಚಾರ, ದೇವಿಂದ್ರಪ್ಪ ತಂದೆ ರಾಮಣ್ಣ ಕುಂಬಾರ, ಮಲ್ಲಿಕಾರ್ಜುನ ದೇವಿಂದ್ರಪ್ಪ ಕುಂಬಾರ, ಭೀಮರಾಯ ತಂದೆ ಸಾಬಣ್ಣ ಡೊಂಕನೋರ, ಹಣಮಂತ ತಂದೆ ಮಾರೆಪ್ಪ ಬಡಿಗೇರ, ಮಲ್ಲಪ್ಪ ತಂದೆ ಯಲ್ಲಪ್ಪ ಅರಿಕೇರಿ, ಬಸವರಾಜ ತಂದೆ ಮರೆಪ್ಪ ಬಡಿಗೇರ, ಹಣಮಂತ ತಂದೆ ಶರಣಪ್ಪ ಖಾನಳ್ಳಿ, ಮಲ್ಲಪ್ಪ ತಂದೆ ಶರಬಣ್ಣ ಜಿನಕೇರಿ ಹಾಗೂ ಹಣಮಂತ ತಂದೆ ಮಲ್ಲಿಕಾರ್ಜುನ ಡೊಂಕನೋರ ಸೇರಿದಂತೆ ಹಲವರು ಅಕ್ರಮ ಚಟುವಟಿಕೆಗಳ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಈ ಕುರಿತು ಸಲ್ಲಿಸಲಾದ ದೂರು ಪ್ರತಿಯನ್ನು ರಾಜ್ಯ ಅರಣ್ಯ ಸಚಿವರು, ಯಾದಗಿರಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಸಹಾಯಕ ಆಯುಕ್ತರು ಹಾಗೂ ಸಾಮಾಜಿಕ ಅರಣ್ಯ ಇಲಾಖೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

ಅರಣ್ಯ ಸಂಪತ್ತಿನ ರಕ್ಷಣೆಯು ಸರ್ಕಾರದ ಪ್ರಮುಖ ಜವಾಬ್ದಾರಿಯಾಗಿರುವ ಹಿನ್ನೆಲೆಯಲ್ಲಿ ಈ ಗಂಭೀರ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಅಕ್ರಮ ಚಟುವಟಿಕೆಗಳಿಗೆ ಶಾಶ್ವತ ತಡೆ ಹಾಕಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಜೊತೆಗೆ ದೂರು ನೀಡಿದವರ ಭದ್ರತೆಗೂ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.