Home Lead News ದೇಶದ್ರೋಹ ಪದ ಬಳಕೆಗೆ ವಿಷಾದ

ದೇಶದ್ರೋಹ ಪದ ಬಳಕೆಗೆ ವಿಷಾದ

ವಿಧಾನ ಪರಿಷತ್‌ನ ಕಾಂಗ್ರೆಸ್ ಸದಸ್ಯ ನಸೀರ್ ಅಹ್ಮದ್‌ರವರು ಪ್ರಧಾನಿ ಮೋದಿ ದ್ರೋಹಿ ಎಂದು ನೀಡಿದ ಹೇಳಿಕೆ ಖಂಡಿಸಿ ಬಿಜೆಪಿಯ ವಿಧಾನ ಪರಿಷತ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.

ಮೋದಿ ವಿರುದ್ಧ ಹೇಳಿಕೆ

ಬೆಂಗಳೂರು,ಫೆ.೩- ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ದೇಶದ್ರೋಹಿ ಪದ ಬಳಕೆ ಮಾಡಿದ ವಿಚಾರ ವಿಧಾನ ಪರಿಷತ್‌ನಲ್ಲಿಂದು ೨ನೇ ದಿನವೂ ಬಾರಿ ಗದ್ದಲ ಕೋಲಾಹಲಕ್ಕೆ ವೇದಿಕೆಯಾಯಿತು. ಕಾಂಗ್ರೆಸ್ ಸದಸ್ಯ ನಸೀರ್ ಅಹ್ಮದ್ ಕ್ಷಮೆ ಕೇಳಬೇಕು ಎಂದು ಪ್ರತಿಪಕ್ಷಗಳು ಬಿಗಿ ಪಟ್ಟು ಹಿಡಿದ ಹಿನ್ನಲೆಯಲ್ಲಿ ನಸೀರ್ ಅಹ್ಮದ್ ಒತ್ತಡಕ್ಕೆ ಮಣಿದು ವಿಷಾದ ವ್ಯಕ್ತಪಡಿಸಿದರು.


ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ದೇಶದ್ರೋಹಿ ಪದ ಬಳಸಿರುವ ಸದಸ್ಯ ನಸೀರ್ ಅಹಮದ್ ಕ್ಷಮೆಗೆ ಆಗ್ರಹಿಸಿ ಪ್ರತಿಪಕ್ಷಗಳ ಸದಸ್ಯರು ನಿನ್ನೆ ರಾತ್ರಿಯಿಂದ ಮೇಲ್ಮನೆಯಲ್ಲಿ ನಡೆಸಿದ ಧರಣಿಯನ್ನು ಇಂದು ಮುಂದುವರೆಸಿದರು.


ಕಲಾಪ ಅರಂಭವಾದ ಸದನದ ಬಾವಿಂಗಿಳಿದು ಧರಣಿ ಮುಂದುವರೆಸಿದ ಬಿಜೆಪಿ ಜೆಡಿಎಸ್ ಸದಸ್ಯರು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅಸಂಸದೀಯ ಪದ ಬಳಕೆ ಮಾಡಿರುವ ನಸೀರ್ ಅಹಮದ್ ಅವರಿಂದ ಕ್ಷಮೆ ಕೇಳಿಸಿ ಇಲ್ಲವೇ ಹೊರಹಾಕಿ ಎಂದು ಆಗ್ರಹಿಸಿದರು.


ಸಭಾಪತಿ ಬಸವರಾಜ್ ಹೊರಟ್ಟಿ ಅವರು ನಾನು ಹೇಳುವುದನ್ನು ಕೇಳಿಸಿಕೊಳ್ಳಿ ಹಿಂದೆ ಇದೇ ರೀತಿ ಮೂರ್ನಾಲ್ಕು ಬಾರಿ ಇದೇ ರೀತಿಯ ಪ್ರಸಂಗಳು ನಡೆದಾಗ ಎಚ್ಚರಿಕೆ ನೀಡಿದ್ದೇನೆ,ಅಸಂಸದೀಯ ಪದ ಬಳಕೆ ಮಾಡಿರುವುದು ಅಕ್ಷಮ್ಯ ಅಪರಾಧ ಇದು ಸದನದ ಒಕ್ಕೊರಲ ಅಭಿಪ್ರಾಯವಾಗಿದೆ.


ದೇಶದ ಪ್ರಧಾನಿ ಬಗ್ಗೆ ಅಸಂಸದೀಯ ಪದ ಬಳಕೆ ಸರಿಯಲ್ಲ, ಬೇಷರತ್ ಕ್ಷಮೆ ಕೋರಿ ಸದನದ ಸುಗಮ ಕಲಾಪಕ್ಕೆ ಅವಕಾಶ ನೀಡಬೇಕು ಎಂದು ರೂಲಿಂಗ್ ನೀಡಿದರು.


ಪ್ರತಿಪಕ್ಷ ಸದಸ್ಯರು ಪ್ರಚೋದನೆ ಮಾಡಿದರು,ಸಿಟಿ ರವಿ ಪಾಕಿಸ್ತಾನದ ನಾಲಿಗೆ ಅದಕ್ಕೆ ಇರಬೇಕು ಈ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ ಮೊದಲು ಅದರ ಬಗ್ಗೆ ಕ್ಷಮೆಯಾಚಿಸಲಿ, ನಂತರ ನೋಡೋಣ ಬೇರೆ ಸದಸ್ಯರ ಪ್ರಚೋದನೆದಿಂದ ಮಾತನಾಡಿದ್ದೇನೆ ಎಂದು ನಸೀರ್ ಅಹಮದ್ ಹೇಳಿದರು.


ಇದನ್ನು ಒಪ್ಪದ ಪ್ರತಿಪಕ್ಷಗಳ ಸದಸ್ಯರು ಒಂದೇ ವಾಕ್ಯದಲ್ಲಿ ಕ್ಷಮೆ ಕೇಳಬೇಕು ಅದನ್ನು ಬಿಟ್ಟು ವಿವರಣೆ ಬೇಕಾಗಿಲ್ಲ ಅವರು ಕ್ಷಮೆ ಕೇಳಲಿ ಇಲ್ಲವೇ ಹೊರಹಾಕಿ ಎಂದು ಆಗ್ರಹಿಸಿದರು.


ಆಗ ಮಧ್ಯ ಪ್ರವೇಶಿಸಿದ ಸಭಾನಾಯಕ ಭೋಸರಾಜ್ ಅವರು ಮೊದಲು ನಸೀರ್ ಅಹಮದ್ ಅವರು ಏನು ಹೇಳಲಿದ್ದಾರೆ ನೋಡೋಣ ಅನಂತರ ತೀರ್ಮಾನ ಮಾಡೋಣ ಎಂದರು.


ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮೊದಲು ಕ್ಷಮೆ ಕೇಳಲಿ ಅದನ್ನು ಬಿಟ್ಟು ಯಾವುದಕ್ಕೂ ಅವಕಾಶ ನೀಡುವುದಿಲ್ಲ ಎಂದಾಗ ಸದನದಲ್ಲಿ ಮಾತಿನ ಚಕಮಕಿ ನಡೆದು ಸದನವನ್ನು ಸಭಾಪತಿಗಳು ಕೆಲಕಾಲ ಮುಂದೂಡಿದರು.


ಬಳಿಕ ಸದನ ಅರಂಭಗೊಂಡ ಬಳಿಕ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ದೇಶದ್ರೋಹಿ ಪದ ಬಳಕೆ ಮಾಡಿರುವ ನಸೀರ್ ಅಹಮದ್ ವಿಷಾದ ವ್ಯಕ್ತಪಡಿಸಿ ಸದನದ ಸುಗಮ ಕಲಾಪಕ್ಕೆ ಅವಕಾಶ ನೀಡಬೇಕು ಎಂದರು.


ಈ ವೇಳೆ ಸಿಟಿ ರವಿ ಪಾಕಿಸ್ತಾನದ ನಾಲಿಗೆ ಅದಕ್ಕೆ ಇರಬೇಕು ಈ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಹೇಳಿರುವ ಸಂಬಂಧ ಕ್ಷಮೆಯಾಚಿಸಬೇಕು ಎಂದು ಸದಸ್ಯ ಸಲೀಂ ಅಹಮದ್ ಅವರು ಪತ್ರ ನೀಡಿರುವುದನ್ನು ಪ್ರಸ್ತಾಪಿಸಿ ಸಿಟಿ ರವಿ ಅವರ ವಿಷಾದಕ್ಕೆ ಆಗ್ರಹಿಸಿದರು.


ಸಭಾಪತಿ ಹೊರಟ್ಟಿ ಅವರು ಮಾಡಿದ ವಿನಂತಿಯಂತೆ ಸದಸ್ಯ ನಸೀರ್ ಅಹಮದ್ ಅವರು ಪ್ರಧಾನಿಗಳ ಬಗ್ಗೆ ನೀಡಿದ ಹೇಳಿಕೆ ಸಂಬಂಧ ವಿಷಾದ ವ್ಯಕ್ತಪಡಿಸಿದರು
ಬಳಿಕ ಆಡಳಿತ ಪಕ್ಷದ ಸದಸ್ಯರು ಸಿವಿ ರವಿ ಅವರ ವಿಷಾದಕ್ಕೆ ಪಟ್ಟು ಹಿಡಿದಾಗ ವಿರೋ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿ ವಿಪಕ್ಷದ ಸದಸ್ಯರು ಸಿಟಿ ರವಿ ಯಾರ ಹೆಸರನ್ನು ಬಳಸದೇ ಹಿನ್ನೆಲೆಯಲ್ಲಿ ವಿಷಾದ ವ್ಯಕ್ತಪಡಿಸುವುದಿಲ್ಲ ಬದಲಾಗಿ ಅವರು ಬಳಸಿದ ಪದ ಕಡತದಿಂದ ತೆಗೆಯುವಂತೆ ಸಭಾಪತಿಗಳನ್ನು ಆಗ್ರಹಿಸಿದರು.