
ಕಲಬುರಗಿ,ನ.1: ನಗರದ ಜಗತ್ ವೃತ್ತದಲ್ಲಿ ಇಂದು ಬೆಳಿಗ್ಗೆ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಧ್ವಜಾರೋಹಣ ಮಾಡಲು ಯತ್ನಿಸಿದ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಜಾಗೃತಿ ಸಮಿತಿಯ 20 ಕ್ಕೂ ಅಧಿಕ ಸದಸ್ಯರನ್ನು ಪೊಲೀಸರು ಬಂಧಿಸಿದರು.
ಕರ್ನಾಟಕ ರಾಜ್ಯೋತ್ಸವದ ದಿನವಾದ ಇಂದು ಪ್ರತ್ಯೇಕ ರಾಜ್ಯ ಧ್ವಜಾರೋಹಣಕ್ಕೆ ಯತ್ನಿಸಿದ ಮುಂಚೂಣಿ ಹೋರಾಟಗಾರರಾದ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್ ಪಾಟೀಲ ನರಿಬೋಳ, ವಿನೋದಕುಮಾರ ಜನೆವರಿ,ಶ್ರವಣಕುಮಾರ ನಾಯಕ್ ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದರು.
ಹಿಂದುಳಿದ ಪ್ರದೇಶ ಎಂದು ಅಷ್ಟು ಇಷ್ಟು ಅನುದಾನ ಸರಕಾರ ಬಿಡುಗಡೆಗೊಳಿಸಿದರೂ ಪ್ರಯೋಜನವಾಗುತ್ತಿಲ್ಲ.
ಕಲಬುರಗಿಯ ವಿಮಾನ ನಿಲ್ದಾಣ ವಿಮಾನಗಳ ಹಾರಾಟವಿಲ್ಲದೆ ಬರಿದಾಗುತ್ತಾ ಸಾಗಿದೆ. ರೈಲ್ವೆ, ಡಿಎಸ್ಪಿ ಕಚೇರಿ ಹುಬ್ಬಳ್ಳಿ ಕೈಸೇರಿದೆ. ರಾಜ್ಯೋತ್ಸವ ಪ್ರಶಸ್ತಿ ನೀಡುವಲ್ಲಿ ನಮ್ಮ ಭಾಗವನ್ನು ಕಡೆಗಣಿಸಲಾಗುತ್ತಿದೆ.
ರಾಜ್ಯದಲ್ಲೇ ಪಿಯುಸಿ ಫಲಿತಾಂಶದಲ್ಲಿ ಕಲ್ಯಾಣ ಕರ್ನಾಟಕ ಕೆಳಗಿಂದ ಎರಡನೇ ಸ್ಥಾನಕ್ಕೇರಿದೆ. ಎಸ್.ಎಸ್.ಎಲ್.ಸಿ ಯಲ್ಲಿ ಮೇಲಿಂದ ಕೊನೆಯ ಸ್ಥಾನಕ್ಕಿಳಿದಿದೆ.ಅಷ್ಟೇ ಏಕೆ, ಕಾನೂನು ಹದಗೆಟ್ಟಿದೆ. ಇಲ್ಲಿ ದೀನ, ದಲಿತರ, ಬಡವರ ಮೇಲೆ ಹಲ್ಲೆಗಳಾಗುತ್ತಿದ್ದರೂ ಸಹ ಕ್ರಮ ಕೈಗೊಳ್ಳುವಲ್ಲಿ ವಿಫಲತೆಗಳು ಎದುರಾಗಿವೆ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.





























