ಮಹಿಳಾ ವಿಶ್ವಕಪ್: ೩ನೇ ಬಾರಿ ಫೈನಲ್‌ಗೆ ಭಾರತ

ನವಿ ಮುಂಬೈ, ಅ. ೩೧ : ಪ್ರಸ್ತುತ ನಡೆಯುತ್ತಿರುವ ಮಹಿಳಾ ವಿಶ್ವಕಪ್ ೨೦೨೫ ರ ಎರಡನೇ ಸೆಮಿಫೈನಲ್ ನಲ್ಲಿ ಭಾರತ ಮಹಿಳಾ ತಂಡವು ಅಸಾಧಾರಣ ಪ್ರದರ್ಶನ ನೀಡಿವೆ. ಅಕ್ಟೋಬರ್ ೩೧ರಂದು ನವಿ ಮುಂಬೈನ ಡಾ.ಡಿ.ವೈ.ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಆಸ್ಟ್ರೇಲಿಯಾ ಒಡ್ಡಿದ೩೩೯ ರನ್ ಗಳ ಕಠಿಣ ಗುರಿಯನ್ನು ಬೇಧಿಸಿದ ಭಾರತ ೫ ವಿಕೆಟ್ ಗಳ ವಿಜಯದೊಂದಿಗೆ ವಿಶ್ವಕಪ್ ನಲ್ಲಿಮೂರನೇ ಬಾರಿ ಫೈನಲ್ ಪ್ರವೇಶಿಸಿದೆ.


ಭಾರತ ತನ್ನ ಚೊಚ್ಚಲ ಪ್ರಶಸ್ತಿಗಾಗಿ ನವೆಂಬರ್ ೨ರಂದು ಮುಂಬೈನಲ್ಲಿ ಮೊದಲ ಸಲ ಫೈನಲ್ ಪ್ರವೇಶಿಸಿರುವ ದಕ್ಷಿಣ ಆಫ್ರಿಕಾ ತಂಡದ ಸವಾಲು ಎದುರಿಸಲಿದೆ.
ಕಠಿಣ ಗುರಿ ಬೆನ್ನಟ್ಟುವ ಹಾದಿಯಲ್ಲಿ ಭಾರತ ತಂಡವು ಹರ್ಮನ್ ಪ್ರೀತ್ ಕೌರ್ ಮತ್ತು ಜೆಮಿಮಾ ರೊಡ್ರಿಗಸ್ ಅವರ ಅಮೋಘ ಆಟದ ಫಲವಾಗಿ ಗೆಲುವು ದಾಖಲಿಸಿತು. ಹರ್ಮನ್ ಪ್ರೀತ್ ಕೌರ್ ೮೮ ಎಸೆತಗಳಲ್ಲಿ ೮೯ ರನ್ ಗಳಿಸಿದರೆ, ಜೆಮಿಮಾ ೧೩೪ ಎಸೆತಗಳಲ್ಲಿ ೧೨೭* ರನ್ ಗಳಿಸಿ ಜೀವಮಾನದ ಇನಿಂಗ್ಸ್ ಆಡಿದರು. ಇದರೊಂದಿಗೆ ಟೀಮ್ ಇಂಡಿಯಾ ಐದು ವಿಕೆಟ್ ಗಳಿಂದ ಪಂದ್ಯವನ್ನು ಗೆದ್ದು ಬೀಗಿತು.


ಈ ಮಧ್ಯೆ, ರನ್ ಚೇಸ್ ವೇಳೆ ಹಲವಾರು ದಾಖಲೆಗಳನ್ನು ಭಾರತ ಸೃಷ್ಟಿಸಿತು. ಮೊದಲಿಗೆ ಇದು ಮಹಿಳಾ ಏಕದಿನ ಇತಿಹಾಸದಲ್ಲಿ ಅತ್ಯಧಿಕ ಚೇಸ್ ಎಂಬ ದಾಖಲೆಯನ್ನು ಬರೆಯಲಾಯಿತು. ಪಂದ್ಯಾವಳಿಯ ಲೀಗ್ ಹಂತದಲ್ಲಿ ವಿಶಾಖಪಟ್ಟಣಂನಲ್ಲಿ ನಡೆದ ಪಂದ್ಯದಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ ೩೩೧ ರನ್ ಗಳ ಚೇಸ್ ಅನ್ನು ಉತ್ತಮಗೊಳಿಸಿತು.


ಇದಲ್ಲದೆ, ಭಾರತದ ಗೆಲುವು ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾದ ಅಜೇಯ ಓಟವನ್ನು ಕೊನೆಗೊಳಿಸಿತು. ಕಾಂಗರೂ ಮಹಿಳಾ ತಂಡ ಟೂರ್ನಿಯಲ್ಲಿ ೧೫ ಪಂದ್ಯಗಳ ಅಜೇಯ ಓಟದಲ್ಲಿದ್ದರು. ೨೦೧೭ರಲ್ಲಿ ನಡೆದ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ವಿರುದ್ಧ ನವಿ ಮುಂಬೈನಲ್ಲಿ ಕೊನೆಯದಾಗಿ ಆಸೀಸ್ ಸೋಲು ಅನುಭವಿಸಿತ್ತು.


ಗೆಲುವಿನ ನಂತರ ಜೆಮಿಮಾ ರೊಡ್ರಿಗಸ್ ಹರ್ಷ
ಗೆಲುವಿನ ನಂತರ ಭಾವನಾತ್ಮಕವಾಗಿ ಉದ್ರೇಕಗೊಂಡ ಜೆಮಿಮಾ ಪಿಚ್ ನಲ್ಲಿ ತಮ್ಮ ಭಾವನೆಯನ್ನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಆಸ್ಟ್ರೇಲಿಯಾ ವಿರುದ್ಧದ ಐತಿಹಾಸಿಕ ಗೆಲುವಿನ ನಂತರ ಪ್ರತಿಯೊಬ್ಬ ಭಾರತೀಯ ಆಟಗಾರನಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಗೆಲುವಿನ ನಂತರ ಮಾತನಾಡಿದ ಸ್ಟಾರ್ ಬ್ಯಾಟರ್ ಜೆಮಿಮಾ, ಜೀಸಸ್ ಗೆ ಧನ್ಯವಾದ ಅರ್ಪಿಸಿದರು ಮತ್ತು ಗೆಲುವಿನ ಅರ್ಥವೇನೆಂಬುದರ ಬಗ್ಗೆ ಮಾತನಾಡಿದರು.


“ನಾನು ಯೇಸುವಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ತಾಯಿ, ತಂದೆ ಮತ್ತು ತರಬೇತುದಾರ ಮತ್ತು ನನ್ನನ್ನು ನಂಬಿದ ಪ್ರತಿಯೊಬ್ಬ ವ್ಯಕ್ತಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಕೊನೆಯಲ್ಲಿ ನಾನು ಬೈಬಲ್ ಗ್ರಂಥದ ಪದಗಳನ್ನು ಉಚ್ಚರಿಸುತ್ತಿದ್ದೆ.ನೀನು ಧೈರ್ಯವಾಗಿ ನಿಲ್ಲು, ದೇವರು ನಿನಗಾಗಿ ಹೋರಾಡುತ್ತಾನೆ.ಕ್ರೀಸ್ ನಲ್ಲಿದ್ದಷ್ಟು ನನ್ನೊಂದಿಗೆ ನಾನು ಮಾತುನಾಡುತ್ತಿದ್ದೆ, ಕಳೆದ ತಿಂಗಳು ಇದು ನಿಜವಾಗಿಯೂ ಕಷ್ಟಕರವಾಗಿತ್ತು. ನಾನು ಉತ್ತಮ ಲಯದಲ್ಲಿದ್ದೆ, ಆದರೆ ಬಳಿಕ ಹಲವು ಘಟನೆಗಳು ನನಗೆ ಹಿನ್ನಡೆ ತಂದವು.ಆದರೂ ನಾನು ನನ್ನ ನಂಬಿಕೆಯನ್ನು ಕಳೆದುಕೊಂಡಿರಲಿಲ್ಲ. ತಂಡಕ್ಕಾಗಿ ಸಿಕ್ಕ ಅವಕಾಶದಲ್ಲಿ ಶ್ರೇಷ್ಠ ಪ್ರದರ್ಶನ ನೀಡಲು ಯತ್ನಿಸಿದೆ,” ಎಂದು ಜೆಮಿಮಾ ಪಂದ್ಯದ ನಂತರದ ಹೇಳಿದರು.