ಸೆಲ್ಫಿ ಗೀಳು: ಗೆಳೆಯನ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ಯುವಕ

ಕಲಬುರಗಿ,ನ.3-ಮೊಬೈಲ್‍ನಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ನೀರಿಗೆ ಬಿದ್ದ ಗೆಳೆಯನ ರಕ್ಷಿಸಲು ಹೋದ ಯುವಕ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ ಹೆರೂರ್ ಡ್ಯಾಂನಲ್ಲಿ ಭಾನುವಾರ ನಡೆದಿದ್ದು, ಸೋಮವಾರ ಆತನ ಶವ ಪತ್ತೆಯಾಗಿದೆ.
ನಗರದ ಟಿಪ್ಪು ಚೌಕ್‍ನ ಅಹೆಮದ್ ನಗರ ಕಾಲೋನಿ ನಿವಾಸಿ ಮಹ್ಮದ್ ಹಸನಸಾಬ ತಂದೆ ಅಬ್ದುಲ್ ಗಫೂರ್ ಶೇಖ್ (18) ಮೃತಪಟ್ಟ ಯುವಕ.
ಮಹ್ಮದ್ ಹಸನಸಾಬ್ 7-8 ಜನ ಗೆಳೆಯರೊಂದಿಗೆ ಭಾನುವಾರ ಕಾಳಗಿ ಸಮೀಪದ ಹೆರೂರ್ ಡ್ಯಾಂಗೆ ತೆರಳಿದ್ದರು. ಈ ವೇಳೆ ಗೆಳೆಯರೊಂದಿಗೆ ಸೇರಿ ಮೊಬೈಲ್‍ನಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಗೆಳೆಯನೊಬ್ಬ ನೀರಿಗೆ ಬಿದ್ದಿದ್ದು, ಆತನನ್ನು ರಕ್ಷಿಸಲು ಹೋಗಿ ಮಹ್ಮದ್ ಹಸನಸಾಬ್ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ. ಸೋಮವಾರ ಈತನ ಶವ ಪತ್ತೆಯಾಗಿದೆ. ನೀರಿನಲ್ಲಿ ಕೊಚ್ಚಿಕೊಂಡು ಹೋದ ಈತನ ಗೆಳೆಯನನ್ನು ಮೀನುಗಾರರು ರಕ್ಷಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಕಾಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.