ಕನ್ನಡ ಭಾಷೆ,ಸಾಹಿತ್ಯ,ಸಂಸ್ಕøತಿಯನ್ನು ಎತ್ತಿಹಿಡಿಯುವ ಬದ್ಧತೆ ನಾಡಜನತೆಯ ಆದ್ಯತೆಯಾಗಲಿ: ಡಾ.ಗಿರೀಶ ದಿಲೀಪ್ ಬದೋಲೆ

ಬೀದರ, ನ.01 : ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಎತ್ತಿಹಿಡಿಯುವ ಬದ್ಧತೆ ನಾಡ ಜನತೆಯ ಆದ್ಯತೆಯಾಗಲಿ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ ತಿಳಿಸಿದರು.
ಅವರು ಶನಿವಾರ ಬೀದರ ಜಿಲ್ಲಾ ಪಂಚಾಯತ ಆವರಣದಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿ ಮಾತನಾಡಿದರು.
“ಕನ್ನಡವು ಬರಿ ಭಾಷೆಯಲ್ಲ, ಜಗತ್ತಿನ ಶ್ರೀಮಂತ ಸಂಸ್ಕೃತಿಯ ಅಭಿವ್ಯಕ್ತಿ. ಕನ್ನಡವು ಜಗತ್ತಿನ ಅತ್ಯಂತ ಪುರಾತನ ಭಾಷೆಗಳಲ್ಲಿ ಒಂದು ಮಾತ್ರವಲ್ಲ, ಜಗತ್ತಿನ ಸುಂದರ ಭಾಷೆಗಳಲ್ಲಿಯೂ ಒಂದು.ಭಾರತೀಯ ಭಾಷೆಗಳಲ್ಲಿ ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಹೆಗ್ಗಳಿಕೆ ಕನ್ನಡದ್ದು.ರಾಷ್ಟ್ರಕವಿ ಕುವೆಂಪು ಅವರು ಬಣ್ಣಿಸಿದಂತೆ ಕನ್ನಡವು’ ಹರಬರೆಯುವ,ಹರಿ ತಿರಿಯುವ ಭಾಷೆ’ .ಕನ್ನಡ ನೆಲದ ವಚನಕಾರರು ಮತ್ತು ದಾಸರು ಕನ್ನಡವು ಹರಿಹರರ ನೆಚ್ಚಿನ ಭಾಷೆ ಎಂಬುದನ್ನು ನಿರೂಪಿಸಿದ್ದಾರೆ.ಇಂತಹ ಸತ್ತ್ವ ಶ್ರೀಮಂತ,ತತ್ತ್ವಶ್ರೀಮಂತ ಭಾಷೆಯ ಬಗ್ಗೆ ಕನ್ನಡಿಗರಲ್ಲಿ ಹೆಮ್ಮೆ, ಅಭಿಮಾನಗಳಿರಬೇಕು” ಎಂದು ಕನ್ನಡ ನಾಡು ನುಡಿಯ ಅಭಿಮಾನದ ಅಗತ್ಯವನ್ನು ಪ್ರತಿಪಾದಿಸಿದರು.
“ರಾಜ್ಯೋತ್ಸವದ ಈ ಶುಭದಿನದಂದು ಬೀದರ ಜಿಲ್ಲಾ ಪಂಚಾಯತಿಯನ್ನು ಜನಸ್ನೇಹಿ ಜಿಲ್ಲಾ ಪಂಚಾಯತಿಯನ್ನಾಗಿಸೋಣ, ಸರಕಾರದ ಜನಪರ ಯೋಜನೆಗಳನ್ನು ಜನತೆಗೆ ಕರ್ತವ್ಯ ನಿಷ್ಠೆ,ಶ್ರದ್ಧೆ, ಪ್ರಾಮಾಣಿಕತೆಗಳಿಂದ ಒದಗಿಸುವ ಮೂಲಕ ಬೀದರ ಜಿಲ್ಲಾ ಪಂಚಾಯತಿಯನ್ನು ಜನಪರ, ಜನಮುಖಿ ಜಿಲ್ಲಾ ಪಂಚಾಯತಿಯನ್ನಾಗಿಸೋಣ” ಎಂದು ಜಿಲ್ಲಾ ಪಂಚಾಯತಿಯ ಅಧಿಕಾರಿಗಳು, ಸಿಬ್ಬಂದಿಯವರಿಗೆ ಹಿತವಚನ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ, ಮುಖ್ಯ ಯೋಜನಾಧಿಕಾರಿ ಕಿಶೋರಕುಮಾರ ದುಬೆ, ಯೋಜನಾ ನಿರ್ದೇಶಕ ಸೂರ್ಯಕಾಂತ ಬಿರಾದರ, ಪಂಚಾಯತ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರ ಶಿವಾಜಿ ಡೋಣಿ,ಜಿಲ್ಲಾ ಪಂಚಾಯತಿಯ ಸಹಾಯಕ ಕಾರ್ಯದರ್ಶಿಗಳು ಮತ್ತು ಇತರೆ ಅಧಿಕಾರಿಗಳಾದ ರಮೇಶ ನಾಥೆ,ಬೀರೇಂದ್ರಸಿಂಗ್, ಜಯಪ್ರಕಾಶ ಚೌಹಾಣ, ಎಪಿಒ ಸುಭಾಸ್,ಪಿಎಇಒ ರಾಜಶೇಖರ ನೆಲ್ಲಿ ಸೇರಿದಂತೆ ಜಿಲ್ಲಾ ಪಂಚಾಯತಿಯ ಅಧಿಕಾರಿಗಳು, ಸಿಬ್ಬಂದಿಯವರು ಉಪಸ್ಥಿತರಿದ್ದರು. ಪ್ರವೀಣಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು.