
ಶಹಾಪುರ:ಏ.೧೫: ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಕೆ.ಕೆ.ಆರ್.ಡಿ.ಬಿ ಯೋಜನೆಯಡಿ ನಿರ್ಮಾಣವಾಗುತ್ತಿರುವ ಸಮುದಾಯ ಆರೋಗ್ಯ ಕೇಂದ್ರ ಕಟ್ಟಡ ಕಾಮಗಾರಿ ಕಳಪೆ ಗುಣಮಟ್ಟದಿಂದ ನಡೆಯುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದು, ಗ್ರಾಮಸ್ಥರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಈ ಕಾಮಗಾರಿಯನ್ನು ಪ್ರಥಮ ಗುತ್ತಿಗೆದಾರ ತಾಯಪ್ಪ ಯಾದವ್ (ಕಾಳೆಬೆಳಗುಂದಿ) ಹಾಗೂ ಇಂಜಿನಿಯರ್ ರವಿ ಯಾದವ್. ಅವರ ಮೇಲ್ವಿಚಾರಣೆಯಲ್ಲಿ ಸರ್ಕಾರಿ ಆಸ್ಪತ್ರೆಯ ಮೇಲ್ಭಾಗದಲ್ಲಿ ಬಹುಮಹಡಿ ಕಟ್ಟಡವಾಗಿ ನಿರ್ಮಿಸಲಾಗುತ್ತಿದೆ. ಸುಮಾರು ?೬ ಕೋಟಿ ೫೦ ಲಕ್ಷ ರೂ.ಗಳ ಮಹತ್ವಾಕಾಂಕ್ಷಿ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ಈ ಕಟ್ಟಡವು ೩೦ರಿಂದ ೫೦ ಹಾಸಿಗೆಗಳ ಸೌಲಭ್ಯ ಹೊಂದುವ ಉದ್ದೇಶ ಹೊಂದಿದ್ದು, ಭವಿಷ್ಯದಲ್ಲಿ ಸಾವಿರಾರು ರೋಗಿಗಳಿಗೆ ಪ್ರಾಥಮಿಕ ಹಾಗೂ ತುರ್ತು ಚಿಕಿತ್ಸಾ ಸೇವೆ ಒದಗಿಸುವ ಪ್ರಮುಖ ಆರೋಗ್ಯ ಕೇಂದ್ರವಾಗಬೇಕಿತ್ತು. ಆದರೆ ಕಾಮಗಾರಿಯ ಗುಣಮಟ್ಟದ ಮೇಲಿನ ಗಂಭೀರ ಅನುಮಾನಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ.
ಸ್ಥಳೀಯರು ಆರೋಪಿಸುವಂತೆ, ಕಾಮಗಾರಿಯಲ್ಲಿ ತಾಂತ್ರಿಕ ಮಾನದಂಡಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿದೆ. ಕಾಲಂಗಳ ನಿರ್ಮಾಣದಲ್ಲಿ ಸರಿಯಾದ ಸಿಮೆಂಟ್-ಕಾAಕ್ರಿಟ್ ಮಿಶ್ರಣ ಪಾಲಿಸದೇ ಅಸಮತೋಲನವಾಗಿ ಕೆಲಸ ಮಾಡಲಾಗುತ್ತಿದೆ. ಮರಳಿನ ಬದಲು ಡಸ್ಟ್ ಬಳಸಲಾಗುತ್ತಿದ್ದು, ಕಟ್ಟಡದ ಬಲಿಷ್ಠತೆಯೇ ಪ್ರಶ್ನಾರ್ಥಕವಾಗಿದೆ. ಕ್ಯೂರಿಂಗ್ ಪ್ರಕ್ರಿಯೆ ಸರಿಯಾಗಿ ನಡೆಯದೆ ಇರುವುದರಿಂದ ಭವಿಷ್ಯದಲ್ಲಿ ಕಟ್ಟಡದ ಭದ್ರತೆ ಬಗ್ಗೆ ಗಂಭೀರ ಅನುಮಾನ ವ್ಯಕ್ತವಾಗಿದೆ.
ಇನ್ನೂ ಛಾವಣಿ ಹಂತದಲ್ಲಿಯೂ ಗುಣಮಟ್ಟದ ವಸ್ತುಗಳನ್ನು ಬಳಸದೇ, ಎಸ್ಟಿಮೇಟ್ ಪ್ರಕಾರದ ನಿಯಮಗಳನ್ನು ಉಲ್ಲಂಘಿಸಿ ಕೆಲಸ ನಿರ್ವಹಿಸಲಾಗುತ್ತಿದೆ. ಕಿಟಕಿಗಳಿಗೆ ಅಗತ್ಯವಾದ ಸಪೋರ್ಟ್ ವ್ಯವಸ್ಥೆಯೂ ಇಲ್ಲದಿರುವುದು ಅಧಿಕಾರಿಗಳ ನಿರ್ಲಕ್ಷ್ಯವನ್ನು ಬಹಿರಂಗಪಡಿಸುತ್ತಿದೆ.
ಈ ಹಿನ್ನೆಲೆಯಲ್ಲಿ, ಕಾಮಗಾರಿಯನ್ನು ತಕ್ಷಣವೇ ಸ್ಥಗಿತಗೊಳಿಸಿ, ನುರಿತ ತಾಂತ್ರಿಕ ತಜ್ಞರಿಂದ ಸಮಗ್ರ ಪರಿಶೀಲನೆ ನಡೆಸಬೇಕು. ಪರಿಶೀಲನೆ ಪೂರ್ಣಗೊಳ್ಳುವವರೆಗೆ ಗುತ್ತಿಗೆದಾರರಿಗೆ ಯಾವುದೇ ಬಿಲ್ ಪಾವತಿಯನ್ನು ತಡೆಹಿಡಿಯಬೇಕು ಎಂದು ಗ್ರಾಮಸ್ಥರು ತೀವ್ರವಾಗಿ ಆಗ್ರಹಿಸಿದ್ದಾರೆ. ಕಳಪೆ ಕಾಮಗಾರಿಗೆ ಸಂಬAಧಿಸಿದAತೆ ಹೊಣೆಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯವೂ ವ್ಯಕ್ತವಾಗಿದೆ.
ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳದಿದ್ದರೆ, ವಿಷಯವನ್ನು ಲೋಕಾಯುಕ್ತ ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಕೋಟ್ಯಾಂತರ ರೂ.ಗಳ ಸಾರ್ವಜನಿಕ ಹಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಆರೋಗ್ಯ ಕೇಂದ್ರ ಕಾಮಗಾರಿ ಈ ರೀತಿಯಾಗಿ ಕಳಪೆ ಮಟ್ಟದಲ್ಲಿ ನಡೆಯುತ್ತಿರುವುದು ಆಡಳಿತ ವ್ಯವಸ್ಥೆಯ ಮೇಲ್ವಿಚಾರಣೆಯ ಕೊರತೆಯನ್ನು ಸ್ಪಷ್ಟಪಡಿಸುತ್ತಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ.






















