
ಹುಳಿಯಾರು, ಏ. ೪- ಪಟ್ಟಣದ ಗ್ರಾಮದೇವತೆ ಶ್ರೀ ದುರ್ಗಾಪರಮೇಶ್ವರಿ ದೇವಿಯ ೫೪ ನೇ ವರ್ಷದ ಜಾತ್ರಾ ಮಹೋತ್ಸವ ಏ. ೪ ರಿಂದ ೧೨ ರವರೆಗೆ ಅತ್ಯಂತ ವೈಭವದಿಂದ ನಡೆಯಲಿದೆ.
ಏ. ೪ ರಂದು ಮಡಲಕ್ಕಿ ಸೇವೆಯೊಂದಿಗೆ ಆರಂಭವಾಗಲಿದ್ದು, ಸತತವಾಗಿ ಏ. ೬ ರಂದು ಅಮ್ಮನವರಿಗೆ ಎಡೆ ಸೇವೆ, ಮಧುವಣಗಿತ್ತಿ ಸೇವೆ ಹಾಗೂ ಧ್ವಜಾರೋಹಣ ಮತ್ತು ಅಂಕುರಾರ್ಪಣೆ ನಡೆಯಲಿದೆ.
ಏ. ೭ ರಂದು ಆರತಿ ಬಾನ ಮತ್ತು ಎಡೆ ಸೇವೆ. ಏಪ್ರಿಲ್ ೮ ರಂದು ರಾತ್ರಿ ೧೦:೩೦ ಕ್ಕೆ ಶ್ರೀ ಅಮ್ಮನವರು ಹಾಗೂ ವಿವಿಧ ಗ್ರಾಮಗಳ ದೇವತೆಗಳ ಭೇಟಿ ಮತ್ತು ಮೆರವಣಿಗೆ ನಡೆಯಲಿದೆ. ಏ. ೯ ರಂದು ಬೆಳಿಗ್ಗೆ ೭ ಗಂಟೆಗೆ ಪಟ್ಟಣದ ಕಳಸ ಸ್ಥಾಪನೆ, ಫಲಹಾರ ಸೇವೆ ಮತ್ತು ರಾತ್ರಿ ೭ ಗಂಟೆಗೆ ಅಮ್ಮನವರ ಉಯ್ಯಾಲೋತ್ಸವ ನಡೆಯಲಿದೆ. ಸಂಜೆ ೭:೩೦ ಕ್ಕೆ ಚಾಮುಂಡಿಗೆ ಮಡೆವು ಕಾರ್ಯಕ್ರಮವಿರುತ್ತದೆ.
ಉತ್ಸವದ ಪ್ರಮುಖ ಆಕರ್ಷಣೆಯಾದ ಬ್ರಹ್ಮರಥೋತ್ಸವವು ಏ. ೧೦ ರಂದು ನಡೆಯಲಿದೆ. ಅಂದು ಮಧ್ಯಾಹ್ನ ೧೨:೩೦ ರಿಂದ ೨:೧೫ ರವರೆಗೆ ಸಲ್ಲುವ ಶುಭ ’ಕರ್ಕಾಟಕ’ ಲಗ್ನದಲ್ಲಿ ರಥಾರೋಹಣ ನಡೆಯಲಿದೆ. ನಂತರ ಮಧ್ಯಾಹ್ನ ೨:೩೦ ಕ್ಕೆ ಗ್ರಾಮಸ್ಥರಿಂದ “ಅನ್ನಸಂತರ್ಪಣೆ” ಏರ್ಪಡಿಸಲಾಗಿದೆ. ಅಂದು ಸಂಜೆ ೬:೩೦ ಕ್ಕೆ ವಿನಾಯಕ ನಗರದ ಶ್ರೀ ದುರ್ಗಾ ದೇವಸ್ಥಾನದ ಬಳಿ ಮಡಲಕ್ಕಿ ಉತ್ಸವ ನಡೆಯಲಿದೆ.
ಏ. ೧೧ ರಂದು ಮಧ್ಯಾಹ್ನ ೧೨:೩೦ ಕ್ಕೆ ಸಿಡಿ ಉತ್ಸವ, ಕಂಕಣ ವಿಸರ್ಜನೆ ಹಾಗೂ ಹೂವಿನ ಸೇವೆಗಳು ನಡೆಯಲಿವೆ. ಏ. ೧೨ ರಂದು ಮಡಲಕ್ಕಿ ಸೇವೆಯೊಂದಿಗೆ ಈ ವರ್ಷದ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.
ಈ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಸಮಿತಿಯವರು ಕೋರಿದ್ದಾರೆ.

























