Home Uncategorized 17 ವರ್ಷಗಳ ನಂತರ ಹಂಪಿಗೆ ಆಗಮಿಸಿದ ಯುನೆಸ್ಕೋ ತಂಡ: ಖಾಸಗಿ ಹೋಟೆಲ್ ನಲ್ಲಿ ಮಹತ್ವದ ಸಭೆ-ಮಾಹಿತಿ...

17 ವರ್ಷಗಳ ನಂತರ ಹಂಪಿಗೆ ಆಗಮಿಸಿದ ಯುನೆಸ್ಕೋ ತಂಡ: ಖಾಸಗಿ ಹೋಟೆಲ್ ನಲ್ಲಿ ಮಹತ್ವದ ಸಭೆ-ಮಾಹಿತಿ ಸಂಗ್ರಹ

ಸಂಜೆವಾಣಿ ವಾರ್ತೆ

ಹೊಸಪೇಟೆ.ಅ.25 17 ವರ್ಷಗಳ ನಂತರ ವಿಶ್ವವಿಖ್ಯಾತ ಹಂಪಿಗೆ ಆಗಮಿಸಿದ ಯುನೆಸ್ಕೋ ಉನ್ನತ ಮಟ್ಟದ ತಂಡ ಖಾಸಗಿ ಹೋಟೆಲ್ ನಲ್ಲಿ ಮೊದಲ ದಿನ ಸುದೀರ್ಘ ಸಭೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿತು.

ಶನಿವಾರ ಮಧ್ಯಾಹ್ನ ಹಂಪಿಗೆ ಆಗಮಿಸಿದ ಯುನೆಸ್ಕೋ ತಂಡವು, ಖಾಸಗಿ ಹೋಟೆಲ್ನಲ್ಲಿ ಮೊದಲ ದಿನದ ಸುದೀರ್ಘ ಸಭೆ ನಡೆಸಿತು. ಸಭೆಯಲ್ಲಿ ಹಂಪಿ ವಿಶ್ವ ಪರಂಪರೆ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ರಾಜ್ಯ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಉನ್ನತ ಅಧಿಕಾರಿಗಳು ಪಾಲ್ಗೊಂಡು ಹಂಪಿ ಕುರಿತು ಸಮಗ್ರ ಮಾಹಿತ ನೀಡಿದರು. ಹಂಪಿ ಮಾಸ್ಟರ್ ಪ್ಲಾನ್, ಪ್ರಾಧಿಕಾರದ ಕಾರ್ಯನಿರ್ವಹಣೆ, ಸ್ಮಾರಕಗಳ ರಕ್ಷಣೆ ಹಾಗೂ ಹವಾಮ ಕಾಯಿದೆ ಸೇರಿದಂತೆ ನಾನಾ ನಿಯಮಾವಳಿಗಳ ಕುರಿತು ನಿಯೋಗಕ್ಕೆ ವಿವರಣೆ ನೀಡಲಾಯಿತು. ಇದೇ ವೇಳೆ ಐಕೋಮೋಸ್ ಪ್ರತಿನಿಧಿಗಳು ತಮ್ಮ ಈ ಭೇಟಿಯ ಮುಖ್ಯ ಉದ್ದೇಶಗಳ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಅ. 27ರವರೆಗೆ ಹಂಪಿಯಲ್ಲೇ ಬೀಡು ಬಿಡಲಿರುವ ಯುನೆಸ್ಕೋ ತಂಡವು ಸ್ಮಾರಕಗಳ ಪ್ರತ್ಯಕ್ಷ ಪರಿಶೀಲನೆ ಹಾಗೂ ಸ್ಟೇಕ್ ಹೋಲ್ಟರ್ಸ್ ಮತ್ತು ಅಧಿಕಾರಿಗಳೊಂದಿಗೆ ಸರಣಿ ಸಭೆಗಳನ್ನು ನಡೆಸಲಿದೆ.

ಹಂಪಿಗೆ ಭೇಟಿ ನೀಡಿರುವ ಯುನೆಸ್ಕೋ ಮತ್ತು ಐಕೋಮೋಸ್ ಉನ್ನತ ಮಟ್ಟದ ತಜ್ಞರ ನಿಯೋಗದಲ್ಲಿ ಪ್ರಮುಖ ಅಂತಾರಾಷ್ಟ್ರೀಯ ಪರಂಪರೆ ತಜ್ಞರು ಹಾಗೂ ಹಿರಿಯ ಅಧಿಕಾರಿಗಳು ಇದ್ದಾರೆ. ಈ ತಂಡದಲ್ಲಿ ಪ್ರಮುಖವಾಗಿ ಯುನೆಸ್ಕೋ ಪ್ರತಿನಿಧಿಯಾಗಿರುವ ಕೀನ್ಯಾದ ಖ್ಯಾತ ಪರಂಪರೆ ತಜ್ಞ ಜಾರ್ಜ್ ಅಬುಂಗು, ಜಪಾನ್ ದೇಶದ ಪ್ರಸಿದ್ಧ ಪರಂಪರೆ ಹಾಗೂ ತಜ್ಞರ ಪ್ರತಿನಿಧಿ ಇಚಿತಾ ಶಿಮೋದಾ, ಅಂತರರಾಷ್ಟ್ರೀಯ ಸ್ಮಾರಕಗಳು ಮತ್ತು ತಾಣಗಳ ಮಂಡಳಿಯ ಪ್ರಮುಖ ತಜ್ಞೆ ಜಾನ್ವಿ ಶರ್ಮಾ ಜತೆಗೆ ಕೇಂದ್ರ ಹಾಗೂ ರಾಜ್ಯ ಸರಕಾರದ ನಾನಾ ಇಲಾಖೆಗಳ ಹಿರಿಯ ಅಧಿಕಾರಿಗಳು ಸೇರಿದಂತೆ ಒಟ್ಟು ಸುಮಾರು 30 ಸದಸ್ಯರನ್ನೊಳಗೊಂಡ ಉನ್ನತ ಮಟ್ಟದ ನಿಯೋಗವು ಈ ಪರಿಶೀಲನಾ ಸಭೆಗಳಲ್ಲಿ ಭಾಗವಹಿಸಿದೆ.

 ಅ.27ರಂದು ಬೆಳಗ್ಗೆ ಮಾಸ್ಟರ್ ಪ್ಲಾನ್, ಬಫರ್ ಝೋನ್ನಲ್ಲಿರುವ ಕೊರತೆಗಳ ನಿವಾರಣೆ ಹಾಗೂ ಸಂರಕ್ಷಣಾ ಕಾಯಿದೆಗಳ ಜಾರಿ ಕುರಿತು ಅಂತಿಮ ಸುತ್ತಿನ ಚರ್ಚೆಗಳು ನಡೆಯಲಿವೆ. ಮಧ್ಯಾಹ್ನದ ನಂತರ ನಿಯೋಗವು ಬೆಂಗಳೂರಿಗೆ ಪ್ರಯಾಣ ಬೆಳೆಸಲಿದೆ.

ಬೆಂಗಳೂರಿಗೆ ತೆರಳಲಿರುವ ತಂಡವು ಅ. 28 ರಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಉನ್ನತ ಅಧಿಕಾರಿಗಳೊಂದಿಗೆ ಅಂತಿಮ ಸಭೆ ನಡೆಸಿ, ತನ್ನ ವರದಿಯನ್ನು ಸಿದ್ಧಪಡಿಸಲಿದೆ.

ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಕೊಪ್ಪಳ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್, ಜಿ.ಪಂ,. ಸಿಇಒ ಗರೀಮಾ ಪನ್ವಾರ್, ಎಸ್ಪಿಗಳಾದ ಎಸ್.ಜಾಹ್ನವಿ ಹಾಗೂ ಸಾಹೀಲ್ ಬಾಗ್ಲಾ, ಪ್ರವಾಸೋದ್ಯಮ ಇಲಾಖೆಯ ಆಯುಕ್ತ ಶಿವಪ್ರಸಾದ್, ರಾಜ್ಯ ಪುರಾತತ್ವ ಇಲಾಖೆಯ ಆಯುಕ್ತ ಡಾ. ಪಿ.ಶಿವರಾಜ್, ಹಾವಾಮಾ ಆಯುಕ್ತ ಬಾಲಕೃಷ್ಣ, ಎಸಿ ಪಿ.ವಿವೇಕಾನಂದ, ರಾಜ್ಯ ಪುರಾತತ್ವ ಇಲಾಖೆಯ ಉಪನಿರ್ದೇಶಕ ಡಾ. ಆರ್.ಶೇಜೇಶ್ವರ್, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಪ್ರಭುಲಿಂಗ ಎಸ್.ತಳಕೇರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.