Home ಜಿಲ್ಲೆ ಮಂಗಳೂರು ಕಾಸರಗೋಡು : ನಗರಸಭೆ ಎದುರು ಬಿಜೆಪಿಯಿಂದ ಅನಿರ್ದಿಷ್ಟಾವಧಿ ಧರಣಿ

ಕಾಸರಗೋಡು : ನಗರಸಭೆ ಎದುರು ಬಿಜೆಪಿಯಿಂದ ಅನಿರ್ದಿಷ್ಟಾವಧಿ ಧರಣಿ

ಕಾಸರಗೋಡು-ನಗರಸಭೆ ಅಧ್ಯಕ್ಷರು ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕೌನ್ಸಿಲರ್ಗಳ ನೇತೃತ್ವದಲ್ಲಿ ನಗರಸಭೆ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭಗೊಂಡಿದೆ.
ಕೆ.ಪಿ.ಆರ್. ರಾವ್ ರಸ್ತೆಯಲ್ಲಿ ಪೇ ಪಾರ್ಕಿಂಗ್ ಜಾರಿ ಹಾಗೂ ಸೀ ವ್ಯೂ ಪಾರ್ಕ್ ಅನ್ನು ಪಿ.ಪಿ.ಪಿ. ಮಾದರಿಯಲ್ಲಿ ಅಭಿವೃದ್ಧಿಪಡಿಸುವ ನಗರಸಭೆಯ ನಿರ್ಧಾರಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ಕೌನ್ಸಿಲ್ನ ಅನುಮೋದನೆ ಮತ್ತು ಸೂಕ್ತ ಚರ್ಚೆಯಿಲ್ಲದೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್ ಆರೋಪಿಸಿದ್ದಾರೆ.
ನಗರಸಭೆಯ ಸಾರ್ವಜನಿಕ ಆಸ್ತಿಗಳ ಖಾಸಗೀಕರಣಕ್ಕೆ ಯತ್ನಿಸಲಾಗುತ್ತಿದೆ ಎಂದು ದೂರಿರುವ ಬಿಜೆಪಿ, ನಿರ್ಧಾರಗಳನ್ನು ಮರುಪರಿಶೀಲಿಸುವಂತೆ ಆಗ್ರಹಿಸಿದೆ. ಅಧಿಕಾರ ದುರುಪಯೋಗದ ಕುರಿತು ನಗರಾಭಿವೃದ್ಧಿ ಇಲಾಖೆ ಹಾಗೂ ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಗಳ ಒಂಬುಡ್ಸ್ಮನ್ಗೆ ದೂರು ಸಲ್ಲಿಸುವುದಾಗಿಯೂ ಬಿಜೆಪಿ ತಿಳಿಸಿದೆ. ಕಾಸರಗೋಡು ನಗರಸಭೆಯ ಕೌನ್ಸಿಲರ್ಗಳಾದ ಬಿಜೆಪಿ ಕಾಸರಗೋಡು ಮಂಡಲ ಅಧ್ಯಕ್ಷ ಕೆ. ಗುರುಪ್ರಸಾದ್, ಮಂಡಲ ಪ್ರಧಾನ ಕಾರ್ಯದರ್ಶಿ ದಿವ್ಯಾ ಸಂದೀಪ್, ಮತ್ತಿತರರು ಧರಣಿಯಲ್ಲಿ ಭಾಗವಹಿಸಿದ್ದರು.