
ಮಂಗಳೂರು: ೨೦೪೭ರ ವೇಳೆಗೆ ಭಾರತವು ವಿಶ್ವದ ಮುಂಚೂಣಿ ರಾಷ್ಟ್ರವಾಗಿ ಬೆಳೆಯಲಿದ್ದು, ಈ ಗುರಿ ತಲುಪಲು ಸರ್ಕಾರ ಮಾತ್ರವಲ್ಲದೆ ಪ್ರತಿಯೊಬ್ಬ ನಾಗರಿಕನೂ ತನ್ನ ಕರ್ತವ್ಯವನ್ನು ಅರಿತು ಕೆಲಸ ಮಾಡಬೇಕು ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೋರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಕರೆ ನೀಡಿದರು.
ಮಂಗಳೂರಿನ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಸಭಾಂಗಣದಲ್ಲಿ ಮಂಗಳವಾರ ನಡೆದ ನಿಟ್ಟೆ ಡಾ. ಎನ್. ವಿನಯ ಹೆಗ್ಡೆ ಉಪನ್ಯಾಸ ಕಾರ್ಯಕ್ರಮದಲ್ಲಿ ‘ವಿಕಸಿತ ಭಾರತ-೨೦೪೭ರ ದೃಷ್ಟಿಕೋನ’ ಎಂಬ ವಿಷಯದ ಕುರಿತು ಅವರು ಮಾತನಾಡಿದರು. ವಿಕಸಿತ ಭಾರತ ಎಂಬುದು ಬಹುದೂರದ ಗುರಿಯಲ್ಲ, ಇನ್ನು ಎರಡು ದಶಕಗಳಲ್ಲೇ ಸಾಧಿಸಬೇಕಾದ ಮಹತ್ವದ ಹಂತವಾಗಿದೆ. ದೇಶವನ್ನು ಸಮೃದ್ಧ ಮತ್ತು ಶಕ್ತಿಶಾಲಿ ರಾಷ್ಟ್ರವನ್ನಾಗಿ ರೂಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಭಾರತದ ಭವಿಷ್ಯ ರೂಪಿಸುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ತರವಾಗಿದ್ದು, ಕರಾವಳಿ ಕರ್ನಾಟಕದಲ್ಲಿ ಶೈಕ್ಷಣಿಕ ಅವಕಾಶಗಳನ್ನು ವಿಸ್ತರಿಸಿದ ನಿಟ್ಟೆ ವಿನಯ ಹೆಗ್ಡೆಯವರ ಸಮಾಜ ಸೇವೆಯು ಶ್ಲಾಘನೀಯ. ಇಂತಹ ಶಿಕ್ಷಣ ತಜ್ಞರು ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದ ಸಚಿವರು, ಕಳೆದ ಒಂದು ದಶಕದಲ್ಲಿ ಭಾರತವು ಆರ್ಥಿಕ ಮತ್ತು ವೈಜ್ಞಾನಿಕ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿರುವುದನ್ನು ಉಲ್ಲೇಖಿಸಿದರು. ೨೦೧೪ರಲ್ಲಿ ೧.೯೦ ಲಕ್ಷ ಕೋಟಿ ರೂ. ಮಟ್ಟದಲ್ಲಿದ್ದ ಆರ್ಥಿಕ ವಲಯವು ೨೦೨೬ರ ವೇಳೆಗೆ ೨೧.೨೦ ಲಕ್ಷ ಕೋಟಿ ರೂ.ಗೆ ಏರಿಕೆಯಾಗುವ ನಿರೀಕ್ಷೆಯಿದ್ದು, ಇದು ದೇಶದ ಆರ್ಥಿಕ ಸಾಮರ್ಥ್ಯದ ಬದಲಾವಣೆಯನ್ನು ಸೂಚಿಸುತ್ತದೆ ಎಂದರು.
ಇದೇ ವೇಳೆ ಚಂದ್ರಯಾನ-೩ರ ಸಾಧನೆ ಮತ್ತು ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಭಾರತದ ಮುಂಚೂಣಿಯನ್ನು ಸ್ಮರಿಸಿದ ಅವರು, ದೇಶವು ಇಂದು ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯನ್ನು ಹೊಂದಿದೆ. ಸಾರ್ವಜನಿಕ ಸೇವೆಗಳನ್ನು ಜನರಿಗೆ ತಲುಪಿಸುವಲ್ಲಿ ಡಿಜಿಟಲ್ ತಂತ್ರಜ್ಞಾನವು ಕ್ರಾಂತಿಕಾರಿ ಪಾತ್ರ ವಹಿಸಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.

























