
(ಸಂಜೆವಾಣಿ ವಾರ್ತೆ)
ಬಳ್ಳಾರಿ ಮೇ 11 – ಸಾಮಾಜಿಕ ಜಾಲತಾಣಗಳು ಪುಸ್ತಕ ಮಾರಾಟಕ್ಕೆ ಮಾರುಕಟ್ಟೆಯ ಹೊಸ ಬಾಗಿಲನ್ನು ತೆರೆದು ನೆರವಾಗಿವೆ. ಪ್ರಕಾಶಕರು ಪುಸ್ತಕಗಳನ್ನು ಖರೀದಿಸುವ ಓದುಗರಿಲ್ಲ ಎಂದು ನಿರಾಶರಾಗುವ ಅಗತ್ಯವಿಲ್ಲ ಎಂದು ಕಾವ್ಯ ಮನೆ ಪ್ರಕಾಶನದ ಚಾಂದ್ ಕವಿ ಚಂದ್ರ ಅಭಿಪ್ರಾಯಪಟ್ಟರು.
ನಗರದ ಜ್ಞಾನಾಮೃತ ಕಾಲೇಜಿನಲ್ಲಿ ಆಯೋಜಿಸಿದ್ದ ಸಂಗಂ ಸಾಹಿತ್ಯ ಪುರಸ್ಕಾರ ಪ್ರದಾನ ಸಮಾರಂಭದ ಎರಡನೇ ದಿನ ನಡೆದ ‘ ಯುವ ಪ್ರಕಾಶಕರ ತವಕ ತಲ್ಲಣ ‘ ಗೋಷ್ಠಿಯಲ್ಲಿ ಮಾತನಾಡಿದ ಅವರು ಸರಕಾರವೇ ಪುಸ್ತಕಗಳನ್ನು ಖರೀದಿಸುವ ಆಲೋಚನೆಯನ್ನು ಕೈ ಬಿಟ್ಟು ಪುಸ್ತಕ ಮಾರಾಟಕ್ಕಾಗಿ ನಮ್ಮದೇ ಆದ ಒಂದು ಜಾಲವನ್ನು ಸರಿಯಾದ ನೆಲೆಯಲ್ಲಿ ಸೃಷ್ಟಿಸಿಕೊಳ್ಳುವುದು ಈ ಹೊತ್ತಿನ ಕಾಲದ ಅಗತ್ಯ ಎಂದರು.
ನಮ್ಮ ಪ್ರಕಾಶನದಿಂದ ಹೊಸ ಪುಸ್ತಕಕ್ಕೆ ಸಂಬಂಧಿಸಿದ ರೀಲುಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಾಗ ಅದನ್ನು ನೋಡಿದ ಓದುಗರು ಪುಸ್ತಕ ಖರೀದಿಸಲು ಮುಂದಾಗುತ್ತಾರೆ.ಈ ಪ್ರಯತ್ನದಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು
ಕೌದಿ ಪ್ರಕಾಶನದ ಮಮತಾ ಮಾತನಾಡಿ ನಮ್ಮ ಪ್ರಕಾಶನ ಬಹಳ ಮುಖ್ಯವಾಗಿ ತಳ ಸಮುದಾಯಗಳ ತಲ್ಲಣಗಳನ್ನು ಓದುಗರಿಗೆ ಪರಿಚಯಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಅದರಲ್ಲೂ ಹೊಸ ಲೇಖಕರಿಗೆ ಪ್ರೋತ್ಸಾಹ ಕೊಡುವ ಹೊತ್ತಾಸೆ ನಮ್ಮದಾಗಿದೆ ಎಂದು ತಿಳಿಸಿದರು.
ಸಂಕಥನ ಪ್ರಕಾಶನದ ರಾಜೇಂದ್ರ ಪ್ರಸಾದ್ ಮಾತನಾಡಿ ನಮ್ಮ ಪುಸ್ತಕ ಯಾರು ಪ್ರಕಟಿಸದೇ ಇರುವ ಸಂದರ್ಭದಲ್ಲಿ ಅನಿವಾರ್ಯವಾಗಿ ನಾವು ಪ್ರಕಾಶಕರಾಗಿ ರೂಪುಗೊಂಡದ್ದು. ಇಂದು ಪ್ರಕಾಶಕರು ಹಲವು ಬಗೆಯ ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದಾರೆ. ಸರಕಾರ ಪ್ರಕಾಶಕರು ಸಂಕಷ್ಟಗಳನ್ನು ಅರ್ಥ ಮಾಡಿಕೊಂಡು ಪುಸ್ತಕ ಖರೀದಿಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಮಿಂಚುಳ್ಳಿ ಪ್ರಕಾಶನದ ಸೂರ್ಯಕಿರ್ತಿ ಮಾತನಾಡಿ ನಾವು ನಮ್ಮದೇ ಆದ ಗೆಳೆಯರ ಬಳಗವನ್ನು ಕಟ್ಟಿಕೊಂಡಿದ್ದೇವೆ. ಆ ಬಳಗದ ಮೂಲಕ ಪುಸ್ತಕ ಮಾರಾಟವನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದೇವೆ ಎಂದರು.
ವೇದಿಕೆಯ ಮೇಲೆ ತೆಲುಗು ಪ್ರಕಾಶಕರಾದ ಶ್ರೀದಿವ್ಯ, ಮಲ್ಲಿಕಾರ್ಜುನ್, ಶೇಷು ಕೊರ್ಲ ಪಾಟಿ ಇದ್ದರು.
ಸಂವಾದದಲ್ಲಿ ಜಿ ಪಿ ಬಸವರಾಜ್, ಓ ಎಲ್ ನಾಗಭೂಷಣಸ್ವಾಮಿ, ಮಮತಾ ಅರಸಿಕೆರೆ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಡಾ. ಯೋಗಾನಂದರೆಡ್ಡಿ, ಡಾ. ಅರವಿಂದ ಪಟೇಲ್, ಅಮರೇಶ ನುಗಡೋಣಿ,ಪಲ್ಲವ ವೆಂಕಟೇಶ, ದಸ್ತಗೀರಸಾಬ್ ದಿನ್ನಿ, ಟಿ. ಎಸ್. ಗೊರವರ, ಶಿವಲಿಂಗಪ್ಪ ಹಂದಿಹಾಳು, ವೀರೇಂದ್ರ ರಾವಿಹಾಳು,ಪಿ. ಆರ್. ವೆಂಕಟೇಶ ಉಪಸ್ಥಿತರಿದ್ದರು.





















