Home ಜಿಲ್ಲೆ ಮಂಗಳೂರು ಮೋದಿಯ ವಿರುದ್ಧ ಸಚಿವರ ಹೇಳಿಕೆ; ಡಾ. ಭರತ್ ಶೆಟ್ಟಿ ಕಿಡಿ

ಮೋದಿಯ ವಿರುದ್ಧ ಸಚಿವರ ಹೇಳಿಕೆ; ಡಾ. ಭರತ್ ಶೆಟ್ಟಿ ಕಿಡಿ

ಮಂಗಳೂರು-ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಅವಮಾನಕಾರಿ ಕವನ ವಾಚಿಸಿ ಹೇಳಿಕೆ ನೀಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಇದಕ್ಕೆ ಬಿಜೆಪಿ ಮುಖಂಡ ಡಾ. ಭರತ್ ಶೆಟ್ಟಿ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಸಚಿವ ಸ್ಥಾನದಲ್ಲಿರುವವರು ಈ ರೀತಿಯ ವೈಯಕ್ತಿಕ ಮತ್ತು ಅಸಭ್ಯ ಹೇಳಿಕೆಗಳನ್ನು ನೀಡುವುದು ಅತ್ಯಂತ ದುರದೃಷ್ಟಕರ. ಇದು ರಾಜಕೀಯ ಸಂಸ್ಕೃತಿಗೆ ಧಕ್ಕೆ ತರುವಂತದ್ದು” ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾಡಿದ ಆರೋಪಗಳನ್ನು ತಳ್ಳಿಹಾಕಿದ ಅವರು, “ದೇಶದ ಅಭಿವೃದ್ಧಿಗೆ ಹಾಗೂ ಜನಸೇವೆಗಾಗಿ ಪ್ರಧಾನಮಂತ್ರಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಅವರ ಆಡಳಿತದಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಹೆಮ್ಮೆಯ ಸ್ಥಾನ ಗಳಿಸಿದೆ. ಮಹಿಳೆಯರ ಹಕ್ಕಿಗೆ ಸಂಸತ್ತಿನಲ್ಲಿ ಮಸೂದೆ ಮಂಡಿಸಿದವರು. ಅದನ್ನು ಬೆಂಬಲಿಸಲು ಯೋಗ್ಯತೆ ಇಲ್ಲದ ಕಾಂಗ್ರೆಸ್ ಮೋದಿ ಜೀವನದ ಬಗ್ಗೆ ಮಾತನಾಡುತ್ತದೆ, ವೈಯಕ್ತಿಕ ಜೀವನದ ಮೇಲೆ ದಾಳಿ ನಡೆಸುವುದು ಅಸಭ್ಯ ರಾಜಕೀಯದ ಉದಾಹರಣೆ” ಎಂದು ಕಿಡಿಕಾರಿದರು.
“ಸಚಿವ ಶಿವರಾಜ್ ತಂಗಡಗಿ ಅವರು ನೀಡಿದ ಹೇಳಿಕೆಗಳಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸುತ್ತಿದ್ದಾರೆ. ಸರ್ಕಾರದ ವೈಫಲ್ಯಗಳನ್ನು ಮುಚ್ಚಿಹಾಕಲು ಇಂತಹ ವಿವಾದಾತ್ಮಕ ಹೇಳಿಕೆಗಳನ್ನು ನೀಡಲಾಗುತ್ತಿದೆ” ಎಂದು ಟೀಕಿಸಿದರು.