
ಪುತ್ತೂರು: ದೇವಾಲಯವೆಂದರೆ ಕೇವಲ ಭಕ್ತಿಯ ತಾಣ ಮಾತ್ರವಲ್ಲ ಅದು ಮಾನವನ ಆರೋಗ್ಯ ರಕ್ಷಣೆಯ ತಾಣವೂ ಆಗುತ್ತದೆ. ಹಿಂದೆ ದೇವಾಲಯಗಳಲ್ಲಿ ಪೂಜೆ ಮಾಡುವ ಅರ್ಚಕರು ಕೂಡಾ ನಾಟಿವೈದ್ಯ ಪದ್ದತಿಯಲ್ಲಿ ತಮ್ಮಲ್ಲಿಗೆ ಬರುತ್ತಿದ್ದ ಬಡ ಜನರಿಗೆ ಸೇವೆ ನೀಡುತ್ತಿದ್ದರಂತೆ. ಇದೇ ರೀತಿ ಪುತ್ತೂರಿನ ದೇವಾಲಯವೊಂದರಲ್ಲಿ ಸತತ ೫೦ ತಿಂಗಳ ಕಾಲ ಉಚಿತ ಆರೋಗ್ಯ ಶಿಬಿರವನ್ನು ನಡೆಸುವ ಮೂಲಕ ಹಳೆಯ ‘ಚಿತ್ರಣ’ವನ್ನು ಮರು ದಾಖಲಿಸುವ ಕೆಲಸ ನಡೆಯುತ್ತಿದೆ.
ಆರ್ಯಾಪು ಗ್ರಾಮದ ಸಂಪ್ಯ ಮಹಾವಿಷ್ಣುಮೂರ್ತಿ ದೇವಳದಲ್ಲಿ ಈ ವಿನೂತನ ಕಾರ್ಯ ನಡೆಸಲಾಗುತ್ತಿದೆ. ಕಳೆದ ೪ ವರ್ಷಗಳಿಂದ ನಿರಂತರವಾಗಿ ಇಲ್ಲಿ ಆರೋಗ್ಯ ಶಿಬಿರವನ್ನು ನಡೆಸಲಾಗುತ್ತದೆ. ಇಂತಹದ್ದೊಂದು ವಿಭಿನ್ನ ಆಲೋಚನೆ ಕರ್ತೃ ಪುತ್ತೂರು ಮಹಾವೀರ ಮೆಡಿಕಲ್ ಸೆಂಟರ್‌ನ ಡಾ.ಸುರೇಶ್ ಪುತ್ತೂರಾಯ. ಈ ದೇವಳದ ವ್ಯವಸ್ಥಾಪನಾ ಸಮಿತಿಯ ೨ನೇ ಬಾರಿಗೆ ಅಧ್ಯಕ್ಷರಾಗಿರುವ ಡಾ.ಪುತ್ತೂರಾಯ ಅವರು ಭಕ್ತಿ ಮತ್ತು ಆರೋಗ್ಯವನ್ನು ಜತೆಗೇ ಒಯ್ಯುವ ಚಿಂತನೆ ಮಾಡಿರುವ ಹಿನ್ನಲೆಯಲ್ಲಿ ಮೇ೩( ಇಂದು) ಉಚಿತ ಆರೋಗ್ಯ ಶಿಬಿರ ಯೋಜನೆಯ ೫೦ನೇ ಶಿಬಿರ ಆಯೋಜನೆಗೊಂಡಿದೆ. ವಾಸ್ತವವಾಗಿ ಇಷ್ಟೊಂದು ದೀರ್ಘ ಕಾಲದ ಆರೋಗ್ಯ ಶಿಬಿರಗಳನ್ನು ನಡೆಸುವುದು ಸುಲಭದಾಯಕ ವಿಚಾರವಲ್ಲ. ಶಿಬಿರದಲ್ಲಿ ತಪಾಸಣೆ, ಚಿಕಿತ್ಸೆ, ಒಂದು ತಿಂಗಳ ಕಾಲದ ಔಷಧಿ, ಶಿಬಿರಾರ್ಥಿಗಳಿಗೆ ಊಟ-ಉಪಾಹಾರ ಎಲ್ಲವೂ ಉಚಿತ. ಹಾಗಾಗಿ ಪ್ರತಿಯೊಂದು ಶಿಬಿರಕ್ಕೂ ಕನಿಷ್ಟ ೨ ಲಕ್ಷದ ವೆಚ್ಚ ಬೇಕಾಗುತ್ತದೆ. ಅಂದರೆ ಸುಮಾರು ೧ ಕೋಟಿ ವೆಚ್ಚದ ಆರೋಗ್ಯ ಸೇವೆಯನ್ನು ಈ ಶಿಬಿರದ ಮೂಲಕ ಸುಮಾರು ೧೦ ಸಾವಿರಕ್ಕೂ ಅಧಿಕ ಮಂದಿಗೆ ನೀಡಲಾಗಿದೆ.
ಗ್ರಾಮೀಣ ಭಾಗದ ಜನತೆಗೆ ಅನುಕೂಲವಾಗುವಂತೆ ಜನರಲ್ ಮೆಡಿಸಿನ್, ಹೃದ್ರೋಗ, ಶ್ವಾಸಕೋಶ ಚಿಕಿತ್ಸೆ, ಶಸ್ತ್ರ ಚಿಕಿತ್ಸಾ ವೈದ್ಯರಿಂದ ತಪಾಸಣೆ, ಮಕ್ಕಳ ಚಿಕಿತ್ಸೆ, ಸ್ತ್ರೀರೋಗ ಚಿಕಿತ್ಸೆ, ಎಲುಬು, ಕೀಲು ಚಿಕಿತ್ಸೆ, ಚರ್ಮರೋಗ ಚಿಕಿತ್ಸೆ, ಕಿವಿ, ಗಂಟಲು, ಮೂಗು ಚಿಕಿತ್ಸೆ, ಕಣ್ಣಿನ ಚಿಕಿತ್ಸೆ, ದಂತ ಚಿಕಿತ್ಸೆ, ಆಯುರ್ವೇದ ಚಿಕಿತ್ಸೆ, ಹೋಮಿಯೋಪತಿ ಚಿಕಿತ್ಸೆ, ಇಸಿಜಿ, ಮಧುಮೇಹ ರಕ್ತ ಪರೀಕ್ಷೆ, ರಕ್ತದ ಒತ್ತಡ ಪರೀಕ್ಷೆ, ಶ್ವಾಸಕೋಶ ಪರೀಕ್ಷೆ, ಎಲುಬು ಸಾಂದ್ರತೆಯ ಪರೀಕ್ಷೆ ಹಾಗೂ ಔಷಧಿ ಹೀಗೆ ಎಲ್ಲಾ ಬಗೆಯ ರೋಗ ತಪಾಸಣೆ ಮತ್ತು ಚಿಕಿತ್ಸೆ ನೀಡುವುದು ಈ ಶಿಬಿರದ ವಿಶೇಷತೆ.
ಡಾ.ಪುತ್ತೂರಾಯರ ಕನಸಿನ ೫೦ ಮಾಸದ ಸಂಭ್ರಮದ ಶಿಬಿರದಲ್ಲಿ ೧೫ ಪ್ರತ್ಯೇಕ ವಿಭಾಗಗಳಲ್ಲಿ ಉಚಿತ ಚಿಕಿತ್ಸೆ ಅವಕಾಶ ಕಲ್ಪಿಸಲಾಗಿದೆ. ನಿರಂತರವಾಗಿ ನಡೆಯುತ್ತಿದ್ದ ಈ ಉಚಿತ ಆರೋಗ್ಯ ಶಿಬಿರಕ್ಕೆ ಸಾಕಷ್ಟು ಸಂಘಟನೆಗಳ ನೆರವೂ ಲಭ್ಯವಾಗಿದೆ. ೫೦ರ ಸಂಭ್ರಮದ ಶಿಬಿರದಲ್ಲಿ ಮಾಧಕ ವ್ಯಸನ ಮತ್ತು ದುಷ್ಪರಿಣಾಮದ ಬಗ್ಗೆ ನರ ಮಾನಸಿಕ ತಜ್ಞ ಡಾ.ಗಣೇಶ್ ಪ್ರಸಾದ್ ಮುದ್ರಾಜೆ ಅವರ ಉಪನ್ಯಾಸ, ಡಾ.ಪ್ರೀತಿರಾಜ್ ಬಳ್ಲಾಲ್ ಅವರಿಂದ ಪ್ರಥಮ ಚಿಕಿತ್ಸೆಯ ಪ್ರಾತ್ಯಕ್ಷಿಕೆ ನಡೆಯಲಿದೆ. ನವಚೇತನ ಯುವಕ ಮಂಡಲ ಸಂಪ್ಯ, ಶ್ರೀಸತ್ಯನಾರಾಯಣ ಪೂಜಾ ಸಮಿತಿ ಮುಕ್ರಂಪಾಡಿ, ಐಕ್ಯಕಲಾ ಸೇವಾ ಟ್ರಸ್ಟ್, ಮಹಾವೀರ ಆಸ್ಪತ್ರೆ, ಜನೌಷಧಿ ಕೇಂದ್ರಗಳು ಶಿಬಿರಕ್ಕೆ ಸಹಕಾರ ನೀಡುತ್ತಿವೆ. ಆರೋಗ್ಯ ರಕ್ಷಾ ಸಮಿತಿಯ ಪೂರ್ವ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಹಾಲಿ ಅಧ್ಯಕ್ಷ ಉದಯ ಕುಮಾರ್ ರೈ ಸಂಪ್ಯ ಶಿಬಿರದ ಆಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕೆಎಂಸಿ ಆಸ್ಪತ್ರೆ ಮಂಗಳೂರು, ಕೆವಿಜಿ ಆಸ್ಪತ್ರೆ ಸುಳ್ಯ, ಒಮೆಗಾ ಆಸ್ಪತ್ರೆ ಮಂಗಳೂರು, ಪ್ರಸಾದ್ ನೇತ್ರಾಲಯ, ಅಗ್ರೆವಾಲ್ ಕಣ್ಣಿನ ಆಸ್ಪತ್ರೆ ಮಂಗಳೂರು, ಮಹಾವೀರ ಆಸ್ಪತ್ರೆ ಪುತ್ತೂರು, ಐಡಿಯಲ್ ಲ್ಯಾಬೋರೇಟರಿ, ಧನ್ವಂತರಿ ಲ್ಯಾಬೋರೇಟರಿ, ಜನೌಷಧಿ ಕೇಂದ್ರಗಳು ಕಳೆದ ೪ ವರ್ಷಗಳಿಂದ ನಡೆಸಲಾಗುತ್ತಿರುವ ಉಚಿತ ಆರೋಗ್ಯ ಶಿಬಿರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಡಾ.ಪುತ್ತೂರಾಯರ ಕನಸಿನ ಯೋಜನೆಗೆ ಜೀವ ತುಂಬುವ ಕೆಲಸ ಮಾಡಿವೆ.
ಪುರಸ್ಕಾರದ ಗರಿ:
ಉಚಿತ ವೈದ್ಯಕೀಯ ಶಿಬಿರದ ಆಯೋಜನೆಯ ಮೂಲಕ ಮಧುಮೇಹ ತಪಾಸಣೆಯಲ್ಲಿ ನೀಡಿದ ಅದ್ವಿತೀಯ ಸೇವೆ ಮತ್ತು ಆರೋಗ್ಯ ಜಾಗೃತಿಗಾಗಿ ೨೦೨೪ರಲ್ಲಿ ನಡೆದ ೧೪ನೇ ವಿಶ್ವ ಸಮೇಳನದಲ್ಲಿ ಶಿಬಿರದ ಸಂಸ್ಥಾಪಕರಾಗಿರುವ ಡಾ.ಸುರೇಶ್ ಪುತ್ತೂರಾಯ ಅವರಿಗೆ ‘ಡಯಾಬಿಟೀಸ್ ಅವೇರ್ನೆಸ್ ಇನಿಶಿಯೇಟಿವ್ ಅವಾರ್ಡ್’ ರಾಷ್ಟ್ರೀಯ ಪುರಸ್ಕಾರ ದೊರೆತಿದೆ. ಇದು ಸಂಪ್ಯದ ವೈದ್ಯಕೀಯ ಶಿಬಿರದ ಕೀರ್ತಿಗೆ ಮತ್ತೊಂದು ಗರಿಯಾಗಿ ಮೂಡಿಬಂದಿದೆ.

























