Home ಜಿಲ್ಲೆ ಮೈಸೂರು ಅಕ್ರಮ ಮದ್ಯ ಮಾರಾಟಗಾರರ ವಿರುದ್ಧ ಕ್ರಮಕೈಗೊಳ್ಳಿ: ಮಂಜು

ಅಕ್ರಮ ಮದ್ಯ ಮಾರಾಟಗಾರರ ವಿರುದ್ಧ ಕ್ರಮಕೈಗೊಳ್ಳಿ: ಮಂಜು

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮೇ.06:
ಪಟ್ಟಣದ ಹೊರವಲಯದ ಚಿಕ್ಕೋನಹಳ್ಳಿ ರೇಷ್ಮೆ ತರಬೇತಿ ಕೇಂದ್ರದಲ್ಲಿ ಶಾಸಕ ಹೆಚ್.ಟಿ.ಮಂಜು ಅವರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ (ಕೆ.ಡಿ.ಪಿ) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಿತು.


ತಾಲ್ಲೂಕಿನಾದ್ಯಂತ ಅಕ್ರಮವಾಗಿ ಮಧ್ಯ ಮಾರಾಟ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಅಬಕಾರಿ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ವಹಿಸಬೇಕು. ಮೂಡನಹಳ್ಳಿ ಹಾಗೂ ದೊಡ್ಡಸೋಮನಹಳ್ಳಿ ಗ್ರಾಮದಲ್ಲಿ ಅಕ್ರಮ ಮಧ್ಯ ಮಾರಾಟದಿಂದ ಗ್ರಾಮದಲ್ಲಿ ಕಲುಷಿತ ವಾತಾವರಣ ನಿರ್ಮಾಣವಾಗುತ್ತಿದೆ ಈ ಬಗ್ಗೆ ಆ ಗ್ರಾಮಗಳ ಮಹಿಳೆಯರು ನಮ್ಮ ಬಳಿ ಬಂದು ದೂರು ಹೇಳುತ್ತಿದ್ದಾರೆ. ಅಬಕಾರಿ ಅಧಿಕಾರಿಗಳು ಅಕ್ರಮ ಮಧ್ಯ ಮಾರಾಟ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಂಡು ಗ್ರಾಮಗಳಲ್ಲಿ ಉತ್ತಮ ವಾತಾವರಣ ನಿರ್ಮಿಸಲು ಕ್ರಮ ವಹಿಸಬೇಕು ಎಂದು ಶಾಸಕ ಮಂಜು ಅವರು ಅಬಕಾರಿ ಅಧಿಕಾರಿಗೆ ಸೂಚನೆ ನೀಡಿದರು.


ನಾಗಮಂಗಲ ಆರ್.ಟಿ.ಓ ಕಚೇರಿಯಲ್ಲಿ ಮಧ್ಯವರ್ತಿಗಳ ಮೂಲಕ ಹೋದರೆ ದುಪ್ಪಟ್ಟು ಲಂಚ ಪಡೆದು ಎಲ್ಲಾ ಕೆಲಸಗಳನ್ನು ಅಲ್ಲಿನ ಅಧಿಕಾರಿಗಳು ಮಾಡಿಕೊಡುತ್ತಿದ್ದಾರೆ. ಆದರೆ ಗ್ರಾಹಕರು ನೇರವಾಗಿ ಹೋದರೆ ಯಾವುದೇ ಕೆಲಸಗಳು ನಡೆಯುತ್ತಿಲ್ಲ ಎಂದು ಹೆರಗನಹಳ್ಳಿ ಪ್ರಶಾಂತ್ ಅವರು ದೂರು ನೀಡಿರುವುದನ್ನು ಸಭೆಯಲ್ಲಿ ಉಲ್ಲೇಖಿಸಿ ಮಾತನಾಡಿದ ಶಾಸಕರು ಸಭೆಯಲ್ಲಿ ಹಾಜರಿದ್ದ ನಾಗಮಂಗಲ ಆರ್.ಟಿ.ಓ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು ಕೂಡಲೇ ಹೊರರಾಜ್ಯಗಳ ವಾಹನಗಳಿಗೆ ಎಫ್.ಸಿ ನೀಡುವ ವಿಚಾರದಲ್ಲಿ ನೇರವಾಗಿ ತಮ್ಮ ಕಚೇರಿಗೆ ಬರುವ ಸಾರ್ವಜನಿಕರಿಗೆ ಕೆಲಸ ಮಾಡಿಕೊಡುವ ಮೂಲಕ ಮುಂದಿನ ದಿನಗಳಲ್ಲಿ ಈ ರೀತಿಯ ದೂರುಗಳು ಬಾರದಂತೆ ನೋಡಿಕೊಳ್ಳುವಂತೆ ನಿರ್ದೇಶನ ನೀಡಿದರು.


ರೈತರು ಸ್ವಾಧೀನದಲ್ಲಿರುವ ಭೂಮಿಯನ್ನು ಅರಣ್ಯ ಇಲಾಖೆಯವರು ನಮ್ಮದು ಭೂಮಿ ಎಂದು ದಬ್ಬಾಳಿಕೆ ಮಾಡಿ ರೈತರನ್ನು ಭೂಮಿಯಿಂದ ಒಕ್ಕಲೆಬ್ಬಿಸಲು ಪ್ರಯತ್ನಿಸಿದರೆ ನಾನು ಸಹಿಸುವುದಿಲ್ಲ. ರೈತರು ತಮ್ಮ ಬದುಕಿಗಾಗಿ ಅರಣ್ಯದ ಬಳಿ ಹತ್ತಾರು ವರ್ಷಗಳಿಂದ ಉಳುಮೆ ಮಾಡಿಕೊಂಡು ಬರುತ್ತಿರುತ್ತಾರೆ ಆದರೆ ಅರಣ್ಯ ಇಲಾಖೆಯವರು ಜಂಟಿ ಸರ್ವೆ ಮಾಡಿಸದೇ ಸದರಿ ಭೂಮಿಯಿಂದ ರೈತರನ್ನು ಒಕ್ಕಲೆಬ್ಬಿಸಿದರೆ ನಾನೇ ರೈತರೊಡಗೂಡಿ ಅರಣ್ಯ ಇಲಾಖೆಯ ವಿರುದ್ದ ಹೋರಾಟ ನಡೆಸಬೇಕಾಗುತ್ತದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಅಲ್ಲದೆ ಕೆರೆ ಕಟ್ಟೆಗಳ ಹೂಳು ತೆಗೆದು ಅಭಿವೃದ್ಧಿ ಮಾಡುವ ರೈತರಿಗೆ ಇದು ಅರಣ್ಯ ಇಲಾಖೆಯ ಭೂಮಿ ಎಂದು ತಡೆ ಮಾಡುವುದು ಸರಿಯಲ್ಲ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಾಕೀತು ಮಾಡಿದರು.


ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಜೆಜೆಎಂ ಕೆಲಸ ಪೂರ್ಣಗೊಳ್ಳದೇ ಇದ್ದರೂ ಸಹ ಗ್ರಾಮ ಪಂಚಾಯಿಗಳು ಕೆಲಸ ಪೂರ್ಣಗೊಂಡಿದೆ ಎಂದು ಛಾರ್ಜ್ ತೆಗೆದುಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಈ ರೀತಿ ಮಾಡಿ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಟ್ಟು ಸಾರ್ವಜನಿಕರ ಕೆಲಸ ಅರ್ಧಕ್ಕೆ ನಿಂತು ತೊಂದರೆಯಾದರೆ ಸಂಬಂಧಪಟ್ಟ ಪಿಡಿಓ ಹಾಗೂ ಜಿ.ಪಂ.ಕುಡಿಯುವ ನೀರು ವಿಭಾಗದ ಇಂಜಿನಿಯರ್ ಅವರನ್ನು ಹೊಣೆಗಾರರನ್ನಾಗಿ ಮಾಡಿ ಸೂಕ್ತ ಕಾನೂನು ಕ್ರಮಕ್ಕೆ ಮೇಲಧಿಕಾರಿಗಳಿಗೆ ಪತ್ರ ಬರೆಯಬೇಕಾಗುತ್ತದೆ ಎಂದು ಶಾಸಕರು ಎಚ್ಚರಿಸಿದರು. ಬಣ್ಣೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಹಲವಾರು ರೈತರಿಗೆ ಜಮೀನು ಸಾಗುವಳಿ ಚೀಟಿ ಮೂಲಕ ರೈತರಿಗೆ ಸೇರಿದ್ದರೂ ಸಹ ಅಧಿಕಾರಿಗಳು ರೈತರಿಗೆ ಪರಿಹಾರ ಕೊಡಿಸದೇ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಗುತ್ತಿಗೆ ಪಡೆದುಕೊಂಡಿರುವ ಫೇವರೀಚ್ ಮೆಘಾ ಫುಡ್‍ಪಾರ್ಕ್ ಮಾಲೀಕನಿಗೆ ಅನುಕೂಲ ಮಾಡಿಕೊಡುತ್ತಿರುವ ಕಾರಣ ಹಲವಾರು ರೈತರಿಗೆ ಅನ್ಯಾಯವಾಗಿದೆ. ಇತ್ತ ಭೂಮಿಯೂ ಇಲ್ಲ, ಅತ್ತ ಪರಿಹಾರವೂ ಇಲ್ಲದಂತಾಗಿದೆ ಈ ಬಗ್ಗೆ ಕಂದಾಯ ಇಲಾಖೆ ಹಾಗೂ ಸರ್ವೆ ಇಲಾಖೆಯ ಅಧಿಕಾರಿಗಳು ತುರ್ತು ಗಮನ ಹರಿಸಿ ಸಾಗುವಳಿ ಚೀಟಿ, ಆರ್.ಟಿ.ಸಿ ಇತರೆ ದಾಖಲೆಗಳು ಇರುವ ರೈತರಿಗೆ ಪರಿಹಾರ ಪಡೆದುಕೊಳ್ಳಲು ಅಗತ್ಯ ಸಹಕಾರ ನೀಡಬೇಕು ಎಂದು ಶಾಸಕರು ತಾಕೀತು ಮಾಡಿದರು.


ಹೀಗೆ ಎಲ್ಲ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಸರಿಯಾಗಿ ಕೆಲಸ ಮಾಡದ ಹಲವು ಇಲಾಖೆಗಳ ಅಧಿಕಾರಿಗಳ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿ ಮುಂದಿನ ಸಭೆಯೊಳಗೆ ಶೇ.100ರಷ್ಟು ಪ್ರಗತಿ ಸಾಧಿಸಿ ವರದಿ ತರಬೇಕು. ಕೆಲವು ಅಧಿಕಾರಿಗಳು ತಮ್ಮ ಕಚೇರಿಯ ಕಿರಿಯ ಅಧಿಕಾರಿಗಳನ್ನು ಸಭೆಗೆ ಕಳಿಸಿ ತಾವು ಗೈರು ಹಾಜರಾಗಿರುವ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ಶಾಸಕರು ಅಂತಹ ಅಧಿಕಾರಿಗಳಿಗೆ ನೋಟೀಸ್ ಜಾರಿ ಮಾಡುವಂತೆ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕೆ.ಸುಷ್ಮಾ ಅವರಿಗೆ ಸಲಹೆ ನೀಡಿದರು.


ಸಭೆಯಲ್ಲಿ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ತಾ.ಪಂ.ಆಡಳಿತಾಧಿಕಾರಿ ಮೀನುಗಾರಿಕೆ ಜಿಲ್ಲಾ ನಿರ್ದೇಶಕ ಬಾಬಾಸಾಬ್, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಗ್ರಹಾರಬಾಚಹಳ್ಳಿ ಎ.ಬಿ.ಕುಮಾರ್, ಪಾಂಡವಪುರ ಉಪ ವಿಭಾಗದ ಸಹಾಯಕ ನಿಬಂಧಕ ನಾಗಭೂಷಣ್,
ತಾಲ್ಲೂಕು ಪಂಚಾಯತ್ ಇಓ ಕೆ.ಸುಷ್ಮಾ, ತಾಲ್ಲೂಕು ಯೋಜನಾಧಿಕಾರಿ ಎಂ.ಶ್ರೀನಿವಾಸ್, ತಾಲ್ಲೂಕು ಕೆ.ಡಿ.ಪಿ ಸಮಿತಿ ಸದಸ್ಯರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.