
ಕಲಬುರಗಿ,ಮೇ 8: ನಗರದ ಹೈಕೋರ್ಟ್ ರಸ್ತೆಯಲ್ಲಿರುವ ಕೊಹಿನೂರು ಪದವಿ ಮಹಾ ವಿದ್ಯಾಲಯದಲ್ಲಿ ಕಲಬುರಗಿಯ ಭಾರತೀಯ ಚುನಾವಣಾ ಸುಧಾರಣಾ ಹೋರಾಟ ಸಮಿತಿ ವತಿಯಿಂದ ಚುನಾವಣೆಗಳಲ್ಲಿ ಹಣಬಲ ನಿಯಂತ್ರಿಸಿ -ಪ್ರಜಾಪ್ರಭುತ್ವ ಉಳಿಸಿ’ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಯಿತು.
ಕಲಬುರಗಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ನಿರ್ದೇಶಕ ಡಾ.ಅನಿಲ ರಾಠೋಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಇವತ್ತಿನ ಸಮಾಜದಲ್ಲಿ ಹೆಚ್ಚುತ್ತಿರುವ ಮೋಸ, ಅನ್ಯಾಯ, ವಂಚನೆ ಹಾಗೂ ಭ್ರಷ್ಟಾಚಾರಕ್ಕೆ ಮೂಲ ಕಾರಣ ಪ್ರತಿಯೊಂದು ಚುನಾವಣೆಗಳಲ್ಲಿ ಹೆಚ್ಚುತ್ತಿರುವ ಹಣ ಬಲವೇ ಕಾರಣವಾಗಿದೆ. ಚುನಾವಣೆಗಳಲ್ಲಿ ಹೆಚ್ಚುತ್ತಿರುವ ಹಣಬಲವನ್ನು ನಿಯಂತ್ರಿಸುವ ಶಕ್ತಿ ಇಂದಿನ ಯುವ ಜನಾಂಗಕ್ಕೆ ಇದೆ. ಸ್ವಾಮಿ ವಿವೇಕಾನಂದರು ಏಳಿರಿ,ಎಚ್ಚರಗೊಳ್ಳಿರಿ, ಗುರಿ ಮುಟ್ಟುವವರೆಗೆ ನಿಲ್ಲದಿರಿ ಎಂದು ಹೇಳಿದ್ದಾರೆ.ಅದೇ ರೀತಿ ನಮ್ಮ ಇಂದಿನ ಯುವ ಜನಾಂಗ ಚುನಾವಣೆಗಳಲ್ಲಿ ಹೆಚ್ಚುತ್ತಿರುವ ಹಣಬಲದ ವಿರುದ್ಧ ನಿರಂತರವಾದ ಹೋರಾಟವನ್ನು ಪ್ರಾರಂಭಿಸಬೇಕಾಗಿದೆ ಎಂದರು. ವಿಚಾರ ಸಂಕಿರಣದಲ್ಲಿ ವಿದ್ಯಾರ್ಥಿಗಳಾದ ಲಕ್ಷ್ಮಿ ನಾಗಪ್ಪ, ಕಾದಂಬರಿ ಶರಣಪ್ಪ , ಬಸಮ್ಮ ಮಹೇಶ ಮತ್ತು ಸಾಯಿಬಣ್ಣ ಹಣಮಂತ ಅತ್ಯುತ್ತಮವಾಗಿ ಮಾತನಾಡಿದ್ದಕ್ಕಾಗಿ ಅಭಿನಂದನಾ ಪತ್ರವನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪೆÇ್ರ. ವಿ.ಎಂ.ಹಿರೇಮಠ ವಹಿಸಿದ್ದರು.ಕಾರ್ಯಕ್ರಮದಲ್ಲಿ ಭಾರತೀಯ ಚುನಾವಣಾ ಸುಧಾರಣಾ ಹೋರಾಟ ಸಮಿತಿ ಸಂಸ್ಥಾಪಕ ರಮೇಶ.ಆರ್ .ದುತ್ತರಗಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ವಿದ್ಯಾರ್ಥಿನಿ ಅಕ್ಷತಾ ಈರಣ್ಣ ಪ್ರಾರ್ಥನೆ ಗೀತೆ ಹಾಡಿದರು. ಉಪನ್ಯಾಸಕಿ ಸುಹಾಸಿನಿ ಮಾಲಿ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಗೀತಾ ಜಾದವ ಸ್ವಾಗತಿಸಿದರು. ನಿಖಿಲ್ ಕುಲಕರ್ಣಿ ವಂದನಾರ್ಪಣೆ ಮಾಡಿದರು.






















