
ವಾಡಿ,ಮೆ.8-ರೈಲ್ವೆ ಕಾಮಗಾರಿಗಾಗಿ ಮಣ್ಣು ತೆಗೆದಿದ್ದ ಹೊಂಡಕ್ಕೆ ಬಿದ್ದು ವಿದ್ಯಾರ್ಥಿಯೋರ್ವ ಸಾವನ್ನಪ್ಪಿದ ಘಟನೆ ಚಿತ್ತಾಪುರ ತಾಲ್ಲೂಕಿನ ಲಾಡ್ಲಾಪುರ ಗ್ರಾಪಂ ವ್ಯಾಪ್ತಿಯ ಕೊಂಚೂರು ಡಿಗ್ಗಿತಾಂಡಾದಲ್ಲಿ ಬುಧವಾರ ಮಧ್ಯಾಹ್ನ ಜರುಗಿದೆ.
6ನೇ ತರಗತಿ ವಿದ್ಯಾರ್ಥಿ ರಿತೇಶ ತಂದೆ ನಾರಾಯಣ (13) ಮೃತ ದುರ್ದೈವಿ.
ತಾಂಡಾದಿಂದ 1 ಕಿಮೀ ದೂರದಲ್ಲಿ ರೈಲ್ವೆ ಹಳಿ ಪಕ್ಕ ಮಣ್ಣು ತೆಗೆದು ಗುಂಡಿ ಹಾಗೇ ಬಿಡಲಾಗಿದೆ. ಮಳೆ ನೀರು ನಿಂತಿದ್ದರಿಂದ ಹಲವು ಮಕ್ಕಳು ಬೇಸಿಗೆ ಬಿಸಿಲ ಕಾರಣಕ್ಕಾಗಿ ಈಜಲು ತೆರಳಿದ್ದರು. ಅವರ ಜತೆ ಹೋಗಿದ್ದ ಬಾಲಕ ಮೊಳಕಾಲುದ್ದ ನೀರಿಗೆ ಇಳಿದಿದ್ದಾನೆ. ನಂತರ ಆಳ ಇದ್ದ ತಗ್ಗಿನ ಕಡೆ ಹೋಗಿದ್ದರಿಂದ ಮೇಲೆ ಬರಲು ಸಾಧ್ಯವಾಗದೆ ಮುಳುಗಿ ಉಸಿರುಗಟ್ಟಿ ಮೃತಪಟ್ಟಿದ್ದಾನೆ. ಇದರಿಂದ ಗಾಬರಿಗೊಂಡ ಅಲ್ಲಿನ ಮಕ್ಕಳು ಓಡಿ ಹೋಗಿ ತಾಂಡಾ ನಿವಾಸಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ. ನೀರಿಗಿಳಿದ ಕೆಲವರು ಬಾಲಕನನ್ನು ಹೊರಗೆ ತೆಗೆಯುವಷ್ಟರಲ್ಲಿ ಪ್ರಾಣ ಹೋಗಿದೆ. ವಾಡಿ ಠಾಣೆಯಲ್ಲಿ ದೂರು ದಾಖಲಾಗಿದೆ.
7 ಗಂಟೆ ಬಾಲಕನ ಶವ ಇಟ್ಟು ತಾಂಡಾದಲ್ಲೇ ಪ್ರತಿಭಟನೆ
ಮೃತ ಬಾಲಕನ ಕುಟುಂಬಕ್ಕೆ ತಕ್ಷಣವೇ ಪರಿಹಾರ ಘೋಷಿಸಬೇಕು, ಕಾನೂನು ನಿಯಮ ಉಲ್ಲಂಘಸಿ ಹೊಂಡ ತೋಡಿದ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಸುಮಾರು 7 ಗಂಟೆಗೂ ಅಧಿಕ ಕಾಲ ಸ್ಥಳೀಯರು ಪ್ರತಿಭಟನೆ ನಡೆಸಿದ ಘಟನೆ ತಾಂಡಾದಲ್ಲಿ ಜರುಗಿತು.
ತಹಶೀಲ್ದಾರ್ ನಾಗಯ್ಯ ಹಿರೇಮಠ ಹಾಗೂ ಸಿಪಿಐ ಎಸ್ ಬಿ ಪಾಟೀಲ ಕುಟುಂಬಸ್ಥರ ಮನವೊಲಿಸಲು ಪ್ರಯತ್ನಿಸಿದರೂ ಸ್ಪಂದಿಸಲಿಲ್ಲ. ಸಚಿವರ ಜತೆ ಈಗಾಗಲೇ ಮಾತನಾಡಿದ್ದೇವೆ. ಸೂಕ್ತ ಪರಿಹಾರ ಒದಗಿಸಿಕೊಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದರೂ ಮಾತು ಕೇಳದೆ ಶವದ ಅಂತ್ಯಸಂಸ್ಕಾರ ಮಾಡದೇ ಟೆಂಟ್ ಹಾಕಿ ಕುಳಿತು ಆಕ್ರೋಶ ವ್ಯಕ್ತಪಡಿಸಿದರು.
ಘಟನಾ ಸ್ಥಳಕ್ಕೆ ಬಂದ ಮಣಿಕಂಠ ರಾಠೋಡ ಅಧಿಕಾರಿಗಳ ವಿರುದ್ದ ಹರಿಹಾಯ್ದರು. ಕುಟುಂಬಕ್ಕೆ 50 ಲಕ್ಷ ಪರಿಹಾರ ಹಾಗೂ ನಿಯಮಬಾಹಿರವಾಗಿ ಹೊಂಡ ತೆಗೆದ ಗುತ್ತಿಗೆದಾರರ ವಿರುದ್ಧ ಕ್ರಮ ಜಾರಿಯಾಗಬೇಕು ಎಂದು ಆಗ್ರಹಿಸಿದರು.
ಆಂದೋಲ ಶ್ರೀ ಭೇಟಿ
ಇದೆ ವೇಳೆ ಡಿಗ್ಗಿತಾಂಡಾಕ್ಕೆ ಭೇಟಿ ನೀಡಿದ ಆಂದೋಲ ಕರುಣೇಶ್ವರ ಮಠದ ಸಿದ್ದಲಿಂಗ ಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಚಿತ್ತಾಪುರ ತಾಲ್ಲೂಕಿನಲ್ಲಿ ಹೊಂಡಕ್ಕೆ ಬಿದ್ದು ಸಾಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅಕ್ರಮ ಮೈನಿಂಗ್ ನಡೆಸಿ ಯಾವುದೇ ಕಾನೂನು ಪಾಲಿಸದೇ ನಿರ್ಲಕ್ಷ ವಹಿಸಿದವರ ವಿರುದ್ಧ ಕ್ರಮ ಜರುಗಿಸದೇ ಅವರ ಜತೆ ಶಾಮೀಲು ಆಗಿದ್ದಾರೆ. ತಾಲ್ಲೂಕಿನಲ್ಲಿ ಅಕ್ರಮ ಚಟುವಟಿಕೆಗಳು ರಾಜಾರೋಷವಾಗಿ ನಡೆಯುತ್ತಿದ್ದು ಸಚಿವರು ಸೇರಿದಂತೆ ಎಲ್ಲಾ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಬೆಳಗುಂಪಾ ಬಳಿ ಈ ರೀತಿಯ ಅಪಘಾತ ಜರುಗಿದ್ದರೂ ಯಾರ ವಿರುದ್ಧ ಕ್ರಮ ಜರುಗಿಸಿಲ್ಲ. ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ ಎಂದು ಕಿಡಿ ಕಾರಿದ ಅವರು, ತಾಲ್ಲೂಕಿನ ಎಲ್ಲಾ ಹೊಂಡಗಳಿಗೆ ತಂತಿ ಬೇಲಿ ಹಾಕಿಸಬೇಕು. ಅಕ್ರಮ ಗಣಿಗಾರಿಕೆ ತಡೆದು ಕ್ರಮ ಜರುಗಿಸಬೇಕು. ಜಿಲ್ಲಾಧಿಕಾರಿ, ತಹಶೀಲ್ದಾರ್, ಪೆÇಲೀಸ್ ಇಲಾಖೆಯ ಅಧಿಕಾರಿಗಳು ಎಲ್ಲಾ ಅಕ್ರಮದಲ್ಲಿ ಭಾಗಿಯಾಗಿದ್ದು ಅವರೆಲ್ಲರ ವಿರುದ್ಧ ಕ್ರಮ ಜಾರಿಯಾಗಬೇಕು ಎಂದು ಆಗ್ರಹಿಸಿದರು.
ರಾತ್ರಿ 8 ಗಂಟೆವರೆಗೆ ಪರಿಹಾರ ಘೋಷಣೆ ಮಾಡದಿದ್ದರೆ ಕಲಬುರಗಿ ಯಾದಗಿರಿ ರಾಷ್ಟ್ರೀಯ ಹೆದ್ದಾರಿ 150ರ ಮೇಲೆ ಶವ ಇಟ್ಟು ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ ಅವರು ನಂತರ ಶವವನ್ನು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಇಟ್ಟು ಪ್ರತಿಭಟನೆ ನಡೆಸುತ್ತೇವೆ ಎಂದು ಘೋಷಿಸಿದರು.
ದಿವ್ಯಾ ಹಾಗರಗಿ ಪ್ರವೇಶಕ್ಕೆ ನಿಬರ್ಂಧ
ತಾಂಡಾದಲ್ಲಿನ ಘಟನಾ ಸ್ಥಳಕ್ಕೆ ಭೇಟಿ ನೀಡಲು ಆಗಮಿಸಿದ್ದ ದಿವ್ಯಾ ಹಾಗರಗಿ ಅವರನ್ನು ಕಾನೂನು ಸುವ್ಯವಸ್ಥೆ ಹಿನ್ನೆಲೆಯಲ್ಲಿ ತಾಂಡಾದ ಒಳಗೆ ಪೆÇಲೀಸರು ಬಿಡಲಿಲ್ಲ. ಇದರಿಂದ ಪೆÇಲೀಸರೊಂದಿಗೆ ಅವರು ಕ್ಷಣಹೊತ್ತು ವಾಗ್ವಾದ ನಡೆಸಿದರು.






















